ಬಸ್ ಸಂಪರ್ಕ ಇಲ್ಲವೆಂದು ಈ ಗ್ರಾಮಕ್ಕೆ ಕನ್ಯೆ ಕೊಡಲು ಹಿಂದೇಟು: ಯುವಕರ ಗೋಳು ಕೇಳೋರ್ಯಾರು?
ದಾವಣಗೆರೆ ತಾಲೂಕಿನ ವಿಠ್ಠಲಾಪುರ ಗ್ರಾಮಕ್ಕೆ ಬಸ್ ಸಂಪರ್ಕವಿಲ್ಲದಿರುವುದರಿಂದ ಶಿಕ್ಷಣ ಹಾಗೂ ಮದುವೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹೆಚ್ಚಿನ ಶಿಕ್ಷಣಕ್ಕೆ ಹೋಗಲು ಬಸ್ ಇಲ್ಲದೆ ಮಕ್ಕಳು ಕೂಲಿ ಕೆಲಸಕ್ಕೆ ಹೋಗುವಂತಾಗಿದೆ. ಬಸ್ ಸೌಕರ್ಯವಿಲ್ಲದ ಕಾರಣ ಯುವಕರಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಪೋಷಕರು ನಿರಾಕರಿಸುತ್ತಿದ್ದಾರೆ. ಈ ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಸರ್ಕಾರ ಕ್ಷಿಪ್ರ ಪರಿಹಾರ ಕಂಡುಕೊಳ್ಳಬೇಕಿದೆ.

ದಾವಣಗೆರೆ, ಆಗಸ್ಟ್ 01: ಸ್ವತಂತ್ರ ದೊರೆತು 75 ವರ್ಷ ಕಳೆದರೂ ದಾವಣಗೆರೆ (Davanagere) ತಾಲೂಕಿನ ಮಾಯಕೊಂಡ (Mayakonda) ವಿಧಾನಸಭಾ ಕ್ಷೇತ್ರದ ವಿಠ್ಠಲಾಪುರ ಗ್ರಾಮಕ್ಕೆ ಬಸ್ ಸಂಪರ್ಕ ಇಲ್ಲ. ಪ್ರೌಢ ಶಿಕ್ಷಣಕ್ಕೆ ಮತ್ತೊಂದು ಗ್ರಾಮಕ್ಕೆ ಹೋಗಲು ಬಸ್ ವ್ಯವಸ್ಥೆ ಇಲ್ಲದೆ, ಗ್ರಾಮದ ಅನೇಕ ವಿದ್ಯಾರ್ಥಿಗಳು 7ನೇ ತರಗತಿ ನಂತರ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಈ ಊರಿಗೆ ಬಸ್ ಸಂಪರ್ಕ ಇಲ್ಲ ಅಂತ ಯುವಕರಿಗೆ ಕನ್ಯೆ ಕೊಡುತ್ತಿಲ್ಲ.
ಈ ಗ್ರಾಮದಲ್ಲಿ 7 ನೇ ತರಗತಿಯವರೆಗೆ ಮಾತ್ರ ಶಾಲೆ ಇದ್ದು, ನಂತರದ ಹೆಚ್ಚಿನ ಶಿಕ್ಷಣಕ್ಕೆ ಪಕ್ಕದ 4 ಕಿಮೀ ದೂರುದ ಬಾಡ ಹಾಗೂ 5 ಕಿಮೀ ದೂರದ ಮಾಯಕೊಂಡ ಗ್ರಾಮಕ್ಕೆ ಹೋಗಬೇಕು. ಬಸ್ ಇಲ್ಲದ ಕಾರಣಕ್ಕೆ ಇಲ್ಲಿನ ನೂರಾರು ಮಕ್ಕಳು ಹೆಚ್ಚಿನ ಶಿಕ್ಷಣದಿಂದ ವಂಚಿತರಾಗಿದ್ದಾರೆ. 7ನೇ ತರಗತಿ ನಂತರ ಶಾಲೆಯನ್ನ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮರೆತು ಗಂಡುಮಕ್ಕಳು ವ್ಯವಸಾಯದತ್ತ ಮುಖ ಮಾಡಿದರೇ, ಹೆಣ್ಣುಮಕ್ಕಳು ಮದುವೆ ಮಾಡಿಕೊಡಲಾಗುತ್ತದೆ.
ಮಾಯಕೊಂಡ ಗ್ರಾಮದಲ್ಲಿ 120 ಮನೆಗಳು ಹಾಗೂ 450 ಜನ ಸಂಖ್ಯೆ ಇದೆ. ವಿಠ್ಠಲಾಪುರ ಬಾಡ ಗ್ರಾಮ ಪಂಚಾಯತಿಗೆ ಒಳಪಡುತ್ತದೆ. ಬಸ್ ವ್ಯವಸ್ಥೆ ಇಲ್ಲದರಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು, ಬಾಣಂತಿಯರು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಹೋಗಲು ಆಗದೆ ಅಸುನೀಗಿದ್ದಾರೆ. ತೀರ ಕಡು ಬಡತನದಿಂದ ಕೂಡಿರುವ ಈ ಗ್ರಾಮದಲ್ಲಿ ಕಾರು ಹಾಗೂ ಇತರ ವಾಹನಗಳ ವ್ಯವಸ್ಥೆ ಕೂಡ ಇಲ್ಲ. ತುರ್ತು ಕರೆ ಮಾಡಿ ಪಕ್ಕದ ಊರಿನಿಂದ ವಾಹನ ತರಿಸಬೇಕು ಅಂದರೂ ಇಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದೆ. ಇದರ ಜೊತೆಗೆ ರಾತ್ರಿ 7 ಗಂಟೆ ನಂತರದಲ್ಲಿ ಈ ಗ್ರಾಮಕ್ಕೆ ಬರುವುದಕ್ಕೆ, ಹೋಗುವುದಕ್ಕೆ ಜನರು ಭಯ ಪಡುತ್ತಾರೆ.
ಇದನ್ನೂ ಓದಿ: ಪತಿಯನ್ನು ಕೊಲೆ ಮಾಡಿ ಪ್ರಿಯಕರನ ಜತೆ ಕೇರಳದಲ್ಲಿ ಸಂಸಾರ: ಒಂದುವರೆ ವರ್ಷದ ಬಳಿಕ ಸಿಕ್ಕಿಬಿದ್ದಳು
ಒಟ್ಟಾರೆಯಾಗಿ ಅಭಿವೃದ್ಧಿ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣಿಗೆ ಈ ಗ್ರಾಮ ಕಾಣಿಸುತ್ತಿಲ್ಲ. ಇನ್ನಾದರೂ ಎಚ್ಚೆತ್ತು ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲಿ ಎಂಬುವುದು ನಮ್ಮ ಆಶಯ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Fri, 1 August 25



