ಚನ್ನಗಿರಿ: ಅಡಿಕೆ ಮರಗಳಿಗೆ ಶುರುವಾದ ವಿಚಿತ್ರ ರೋಗಬಾಧೆ; ಕಂಗಾಲಾದ ರೈತರು
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಅಂದರೆ ಅಡಿಕೆ ನಾಡು ಎಂದೇ ಪ್ರಸಿದ್ಧ. ಈ ಒಂದೇ ತಾಲೂಕಿನಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆಯುತ್ತಾರೆ. ಚನ್ನಗಿರಿ ಕೆಂಪು ಅಡಿಕೆ ಅಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಉತ್ತಮ ಹೆಸರಿದೆ. ಆದರೆ ಇದೀಗ ಕಳೆದ ಕೆಲ ದಿನಗಳಿಂದ ಅಡಿಕೆ ಬೆಳೆಗಾರರ ಮನಸ್ಸಿನಲ್ಲಿ ಭಯ ಆವರಿಸಿದೆ. ಅಡಿಕೆ ಮರಗಳಿಗೆ ವಿವಿಧ ರೋಗಗಳು ಕಾಣಿಸಿಕೊಳ್ಳಲು ಶುರುವಾಗಿದೆ.
ದಾವಣಗೆರೆ: ಚನ್ನಗಿರಿಯ ಅಡಿಕೆ ಶ್ರೀಮಂತರಿಗೆ ಇದ್ದಕ್ಕಿದ್ದಂತೆ ಇದೀಗ ಭಯ ಶುರುವಾಗಿದೆ. ಇತ್ತೀಚಿಗೆ ಅಡಿಕೆಗೆ ಅದ್ಭುತ ಬೆಲೆ ಸಿಗುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಮೂರು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಅಡಿಕೆ ಹಾಕಲಾಗುತ್ತಿದೆ. ಮೇಲಾಗಿ ಅಡಿಕೆ ತೋಟ ಅಂದರೆ ಚನ್ನಗಿರಿ, ಚನ್ನಗಿರಿ ಅಂದ್ರೆ ಅಡಿಕೆನಾಡು. ಇಂತಹ ಪ್ರದೇಶದಲ್ಲಿ ಅಡಿಕೆ ಮರಗಳಿಗೆ ಇದ್ದಕ್ಕಿದ್ದಂತೆ ವಿಚಿತ್ರ ರೋಗಗಳು ಕಾಣಿಸಿಕೊಂಡಿವೆ. ಹೌದು ಹತ್ತಾರು ವರ್ಷ ಫಲ ನೀಡಿದ ಅಡಿಕೆಯ ಮರ ಇದ್ದಕ್ಕಿದ್ದಂತೆ ಒಣಗುವುದರ ಜೊತೆಗೆ ಅಡಿಕೆ ಉದುರುತ್ತಿದೆ. ಮೇಲಾಗಿ ಅಡಿಕೆ ಮರದ ಬೇರುಗಳು ಕೊಳೆತು ಹೋಗಲು ಶುರುವಾಗಿದೆ. ಇದರಿಂದ ಚನ್ನಗಿರಿ ಅಡಿಕೆ ತೋಟದ ಮಾಲೀಕರ ಮನೆಯಲ್ಲಿ ಆತಂಕ ಶುರುವಾಗಿದೆ. ಕೋಟಿ ಕೋಟಿ ವಹಿವಾಟಿನ ಈ ಅಡಿಕೆ ತೋಟಗಳಿಗೆ ಇಂತಹ ವಿಚಿತ್ರ ಕಾಯಿಲೆ ಸುರುವಾಗಿದ್ದು. ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗದಂತೆ ರೈತರು ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ಏಕೈಕ ತಾಲೂಕು ಚನ್ನಗಿರಿ. ಜಿಲ್ಲೆಯಲ್ಲಿ ಬರೋಬರಿ 48,989 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಂದರೆ ವರ್ಷಕ್ಕೆ 72,668 ಟನ್ ಅಡಿಕೆ ದಾವಣಗೆರೆ ಜಿಲ್ಲೆಯಲ್ಲಿಯೇ ಉತ್ಪಾದನೆ ಆಗುತ್ತದೆ. ಹೀಗೆ ರಾಜ್ಯದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯುವ ಆರು ಜಿಲ್ಲೆಗಳಲ್ಲಿ ದಾವಣಗೆರೆ ಕೂಡ ಒಂದು. ಈ ವರ್ಷ ಪ್ರತಿ ಎಕರೆಗೆ 15 ರಿಂದ 18 ಕ್ವಿಂಟಾಲ್ ಅಡಿಕೆ ಇಳುವರಿ ಬಂದಿದೆ. ಮೇಲಾಗಿ ದರವೂ ಸಹ ಚೆನ್ನಾಗಿದ್ದು 41 ರಿಂದ 45 ಸಾವಿರ ರೂಪಾಯಿ ಪ್ರತಿ ಕ್ವಿಂಟಾಲ್ ಅಡಿಕೆಗೆ ಬೆಲೆ ಇದೆ. ಇನ್ನು ಇಲ್ಲಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇರಬಹುದು ಮಾಜಿ ಶಾಸಕ ವಡ್ನಾಳ್ ರಾಜಣ್ಣ ಇರಬಹುದು. ಇವರೆಲ್ಲ ಅಡಿಕೆ ತೋಟದ ಮಾಲೀಕರೇ. ಇತ್ತೀಚಿಗೆ ಶಾಸಕ ಮಾಡಾಳ್ ಭ್ರಷ್ಟಾಚಾರ ಪ್ರಕರಣದ ವೇಳೆ ಅಡಿಕೆ ತೋಟ ಇದ್ದವರ ಮನೆಯಲ್ಲಿ ಕೋಟಿ ಕೋಟಿ ಹಣ ಇರುತ್ತವೆ ಎಂದಿದ್ದರು.
ಇದನ್ನೂ ಓದಿ:ಯಾದಗಿರಿ: ಬರದ ನಾಡಲ್ಲಿ ಕಲ್ಲಂಗಂಡಿ ಬೆಳೆದು ಸೈ ಎನಿಸಿಕೊಂಡ ರೈತ; ಹೇಗೆ ಅಂತೀರಾ ಈ ಸ್ಟೋರಿ ನೋಡಿ
ಹತ್ತಾರು ಪರಿಹಾರ ನೀಡಿದ ಕೃಷಿ ವಿಜ್ಞಾನಿಗಳು
ಇದೀಗ ಆದಾಯ ಕೊಡುತ್ತಿರುವ ಅಡಿಕೆ ಮರಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದಾವೆ. ಇದಕ್ಕೆ ಕೃಷಿ ವಿಜ್ಞಾನಿಗಳು ಹತ್ತಾರು ಪರಿಹಾರಗಳನ್ನ ಹೇಳಿದ್ದು, ಅಗತ್ಯ ಸಿಂಫರಣಾ ಕ್ರಮಗಳಲ್ಲಿ ಕಾಫರ್ ಆಕ್ಸಿ ಕ್ಲೋರೈಡ್ಹೇಳುವ ಶೀಲಿಂಧ್ರ ನಾಶಕವನ್ನ 3 ಲೀಟರ್ ನೀರಿನ ಜೊತೆ ಬ್ಯಾಕ್ಟಿರೀಯಾ ನಾಶಕವನ್ನ ಬೇರೆಸಿ ಎಲೆಗಳ ಮೇಲೆ ಮತ್ತು ಕೆಳಭಾಗಕ್ಕೆ ಸಿಂಪಡನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಇನ್ನು ಅಡಿಕೆ ಆಹಾರ ಪದಾರ್ಥವಲ್ಲ. ಗುಟಕಾ ಕಂಪನಿಗಳಿಗೆ ಶೇಖಡಾ 90 ರಷ್ಟು ಅಡಿಕೆ ಹೋಗುತ್ತದೆ, ಬಳಿಕ ಅಲ್ಪ ಪ್ರಮಾಣದಲ್ಲಿ ಪೂಜೆ, ತಿನ್ನಲು ಹೋಗುವುದು. ಇಂತಹ ಪರಿಸ್ಥಿತಿಯಲ್ಲಿ ಅಡಿಕೆ ರೋಗ ರೈತನ ನೆಮ್ಮದಿ ಹಾಳು ಮಾಡಿದೆ.
ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 am, Mon, 27 March 23