ಮಾಂಜಾ ದಾರ ಗಾಳಿಪಟದ ದಾರವಲ್ಲ, ಆಕಾಶದಲ್ಲಿ ತೂಗಾಡುವ ಯಮನ ಪಾಶ: ಇದು ಯಾವುದರಿಂದ ತಯಾರಾಗುತ್ತೆ? ಪಕ್ಷಿ, ಮನುಷ್ಯನಿಗೆ ಏಕೆ ಅಪಾಯಕಾರಿ?
ಗಾಳಿಪಟದ ಚೀನಾ ಮಾಂಜಾ ದಾರ ಮಾನವ ಮತ್ತು ಪಕ್ಷಿ ಜೀವಗಳಿಗೆ ಮಾರಕವಾಗಿದೆ. ಗಾಜಿನ ಪುಡಿ, ಲೋಹದ ಅಂಶಗಳಿಂದ ತಯಾರಾಗುವ ಈ ದಾರಗಳು ಕುತ್ತಿಗೆ ಸೀಳಿ ಸಾವು, ಗಾಯಗಳಿಗೆ ಕಾರಣವಾಗುತ್ತವೆ. ಕರ್ನಾಟಕದಲ್ಲಿ ಇದು ನಿಷೇಧಿತವಾಗಿದ್ದು, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ಘಟನೆಗಳ ನಂತರ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಪರಿಸರ ಮತ್ತು ಜೀವ ಸಂರಕ್ಷಣೆಗಾಗಿ ಇದರ ಮಾರಾಟ ಹಾಗೂ ಬಳಕೆಯನ್ನು ನಿಲ್ಲಿಸುವುದು ಅಗತ್ಯ.

ಬೆಂಗಳೂರು, ಅ.10: ಸಂಕ್ರಾಂತಿ, ದಸರಾ ಹಾಗೂ ಹಬ್ಬ-ಹರಿದಿನಗಳಲ್ಲಿ ಆಕಾಶದಲ್ಲಿ ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಸಂಭ್ರಮದ ಸಂಕೇತ. ಆದರೆ, ಈ ಸಂಭ್ರಮಕ್ಕೆ ಬಳಸುವ ‘ಮಾಂಜಾ ದಾರ’, ವಿಶೇಷವಾಗಿ ಅಕ್ರಮವಾಗಿ ಮಾರಾಟವಾಗುವ ‘ಚೀನಾ ಮಾಂಜಾ’ ಇಂದು ಮಾನವ ಜೀವಗಳಿಗೆ ಹಾಗೂ ನೂರಾರು ಪಕ್ಷಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಭಾರತದಲ್ಲಿ ಅನೇಕ ಬಲಿಯನ್ನು ಈ ಮಾಂಜಾ ದಾರ ಪಡೆದಿದೆ. ಬೆಂಗಳೂರು, ಗದಗದಲ್ಲೂ ಮಾಂಜಾ ದಾರದಿಂದ ಪ್ರಾಣಗಳು ಹೋಗಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ಇಬ್ಬರು ಯುವಕ ಬಲಿಯಾಗಿದ್ದಾರೆ, ಈ ಘಟನೆಯ ನಂತರ ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ರಾಜ್ಯದಲ್ಲಿ ನಿಷೇಧಿತ ಚೈನೀಸ್ ಮಾಂಜಾ ದಾರದಿಂದ ದ್ವಿಚಕ್ರ ವಾಹನ ಸವಾರರು, ಪಕ್ಷಿಗಳು ಮತ್ತು ಪರಿಸರಕ್ಕೆ ಭಾರಿ ಅಪಾಯ ಎದುರಾಗಿದೆ. ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಅಪಘಾತಗಳು ವರದಿಯಾಗಿವೆ. ಹುಬ್ಬಳ್ಳಿ ಧಾರವಾಡ ಪೊಲೀಸರು ಇದರ ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಹಾಗಾದರೆ ಈ ಮಾಂಜಾ ದಾರವನ್ನು ಯಾವುದರಿಂದ ತಯಾರಿಸುತ್ತಾರೆ? ಇದು ಮನುಷ್ಯನ ಜೀವ ತೆಗೆಯುವಷ್ಟು ಅಪಾಯಕಾರಿ ಏಕೆ? ಎಂಬುದರ ಸಂಪೂರ್ಣ ಮಾಹಿತಿಯ ವರದಿ ಇಲ್ಲಿದೆ.
ಮಾಂಜಾ ದಾರವನ್ನು ಯಾವುದರಿಂದ ತಯಾರಿಸಲಾಗುತ್ತದೆ?
ಸಾಮಾನ್ಯವಾಗಿ ಗಾಳಿಪಟದ ದಾರಗಳಿಗೆ ಶಕ್ತಿ ನೀಡಲು ಮತ್ತು ಆಕಾಶದಲ್ಲಿ ಇತರರ ಗಾಳಿಪಟದ ದಾರವನ್ನು ಕತ್ತರಿಸಲು ವಿಶೇಷ ರಾಸಾಯನಿಕ ಹಾಗೂ ಗಾಜಿನ ಲೇಪನವನ್ನು ಮಾಡಲಾಗುತ್ತದೆ. ಮಾಂಜಾ ದಾರಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ.
ಸಾಂಪ್ರದಾಯಿಕ ಗ್ಲಾಸ್-ಲೇಪಿತ ಹತ್ತಿ ದಾರ : ಇದು ಸಾಂಪ್ರದಾಯಿಕವಾಗಿ ಬಳಸುವ ಹತ್ತಿಯ ದಾರವಾಗಿದೆ. ಇದಕ್ಕೆ ಗಾಜಿನ ಪುಡಿ, ಅಕ್ಕಿ ಗಂಜಿ ಅಥವಾ ಅಂಟು ಹಾಗೂ ವಿವಿಧ ಬಣ್ಣಗಳನ್ನು ಬೆರೆಸಿ ನೂಲಿಗೆ ಲೇಪಿಸಲಾಗುತ್ತದೆ. ಇದು ಹತ್ತಿಯ ದಾರವಾದ್ದರಿಂದ ಸ್ವಲ್ಪ ಸಮಯದ ನಂತರ ಅಥವಾ ಮಳೆ, ತೇವಾಂಶಕ್ಕೆ ಬಿದ್ದರೆ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ ಹಾಗೂ ತುಂಡಾಗುತ್ತದೆ.
ನೈಲಾನ್ , ಸಿಂಥೆಟಿಕ್ ದಾರ (ಚೀನಾ ಮಾಂಜಾ): ಇಂದು ಜನರ ಪ್ರಾಣ ತೆಗೆಯುತ್ತಿರುವುದು ಇದೇ ನೈಲಾನ್ ಆಧಾರಿತ ಸಿಂಥೆಟಿಕ್ ದಾರ. ಇದನ್ನು ನೈಲಾನ್, ಪ್ಲಾಸ್ಟಿಕ್ ಹಾಗೂ ಸಿಂಥೆಟಿಕ್ ಪಾಲಿಮರ್‌ಗಳಿಂದ ತಯಾರಿಸಲಾಗುತ್ತದೆ. ಇದರ ಮೇಲ್ಮೈಗೆ ಅತ್ಯಂತ ಗಟ್ಟಿಯಾದ ಗಾಜಿನ ಪುಡಿ ಹಾಗೂ ಲೋಹದ ಚೂರುಗಳನ್ನು ಕತ್ತರಿಸುವ ಬ್ಲೇಡ್‌ನಂತೆ ಅಂಟಿಸಲಾಗಿರುತ್ತದೆ. ಇದು ಜಗ್ಗಿದರೂ ಕಟ್ ಆಗುವುದಿಲ್ಲ, ಮಳೆಗೆ ನೆನೆದರೂ ಹಾಳಾಗುವುದಿಲ್ಲ.
ಇದು ಮನುಷ್ಯನನ್ನು ಕೊಲ್ಲುವಷ್ಟು ಅಪಾಯಕಾರಿ ಏಕೆ?
ಮಾಂಜಾ ದಾರ, ವಿಶೇಷವಾಗಿ ಚೀನಾ ಮಾಂಜಾವನ್ನು ಸಾಂಪ್ರದಾಯಿಕ ‘ದಾರ’ ಎನ್ನಲಾಗುವುದಿಲ್ಲ. ಇದು ಆಕಾಶದಲ್ಲಿ ತೂಗಾಡುವ ಉದ್ದನೆಯ ಶಸ್ತ್ರಚಿಕಿತ್ಸೆಯ ಬ್ಲೇಡ್ ಇದ್ದಂತೆ. ಇದು ಮನುಷ್ಯನ ಜೀವಕ್ಕೆ ಕಂಟಕವಾಗಲು ಕಾರಣಗಳು. ಬೈಕ್ ಅಥವಾ ಸ್ಕೂಟರ್‌ಗಳಲ್ಲಿ ವೇಗವಾಗಿ ಸಾಗುವಾಗ ಗಾಳಿಯಲ್ಲಿ ತಲಾಟೆಯಾಗಿ ತೂಗಾಡುತ್ತಿರುವ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದರೆ, ಸವಾರನಿಗೆ ತಿಳಿಯುವಷ್ಟರಲ್ಲೇ ಕುತ್ತಿಗೆಯ ಚರ್ಮವನ್ನು ಸೀಳಿ ಮುಖ್ಯ ರಕ್ತನಾಳಗಳನ್ನುಕತ್ತರಿಸುತ್ತದೆ. ಇದರಿಂದ ಕೆಲವೇ ಸೆಕೆಂಡುಗಳಲ್ಲಿ ತೀವ್ರ ರಕ್ತಸ್ರಾವವಾಗಿ ಮನುಷ್ಯ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ.
ಜತೆಗೆ ಸಾಮಾನ್ಯ ಹತ್ತಿ ದಾರ ಎಳೆದರೆ ತುಂಡಾಗುತ್ತದೆ. ಆದರೆ ನೈಲಾನ್ ದಾರವನ್ನು ಮನುಷ್ಯನ ಬಲದಿಂದ ಕೈಯಿಂದ ಕತ್ತರಿಸಲು ಸಾಧ್ಯವಿಲ್ಲ. ದೇಹಕ್ಕೆ ಸುತ್ತಿಕೊಂಡಷ್ಟು ಇದು ಚರ್ಮ ಮತ್ತು ಮಾಂಸವನ್ನು ಸೀಳಿಕೊಂಡು ಒಳಗೆ ಹೋಗುತ್ತದೆ. ಮಾಂಜಾ ದಾರ ಮುಖ ಅಥವಾ ಕಣ್ಣಿಗೆ ತಾಗಿದರೆ ಕಣ್ಣಿನ ಗುಡ್ಡೆಗಳು ಶೇ.100 ರಷ್ಟು ಹಾನಿಗೊಳಗಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ. ಚೀನಾ ಮಾಂಜಾಗಳಿಗೆ ಲೋಹದ ಪುಡಿ (Metal Coating) ಲೇಪಿಸಿರುವುದರಿಂದ, ಇವು ಹೈ-ಟೆಂಷನ್ ವಿದ್ಯುತ್ ತಂತಿಗಳಿಗೆ ತಾಗಿದಾಗ ವಿದ್ಯುತ್ ಪ್ರವಹಿಸಿ ಗಾಳಿಪಟ ಹಾರಿಸುವ ಮಗುವಿಗೇ ಶಾಕ್ ಹೊಡೆದು ಪ್ರಾಣ ಹೋಗುವ ಉದಾಹರಣೆಗಳಿವೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಕೇರ್ ಟೇಕರ್ ದುರಂತ ಸಾವು
ಪಕ್ಷಿ ಸಂಕುಲಕ್ಕೂ ಮಾರಕ:
ಮಾನವರಷ್ಟೇ ಅಲ್ಲದೆ, ಪ್ರಕೃತಿಯ ಮೂಕಜೀವಿಗಳಾದ ಪಕ್ಷಿಗಳಿಗೆ ಈ ಮಾಂಜಾ ದಾರ ದೊಡ್ಡ ಶಾಪ. ಗಾಳಿಯಲ್ಲಿ ಸಿಲುಕಿಕೊಂಡಿರುವ ದಾರಗಳಿಗೆ ಗಿಡುಗ, ಪಾರಿವಾಳ, ಕಾಗೆಗಳು ಸಿಲುಕಿ ರೆಕ್ಕೆಗಳು ಕತ್ತರಿಸಿಬಿದ್ದು ರಕ್ತಸ್ರಾವದಿಂದ ಮರ ಹಾಗೂ ವಿದ್ಯುತ್ ತಂತಿಗಳ ಮೇಲೆ ನೇತಾಡಿ ಅಸಹಾಯಕರಾಗಿ ಪ್ರಾಣ ಬಿಡುತ್ತವೆ.
ಮಾಂಜಾ ದಾರ ಕಾನೂನಿನ ಕ್ರಮವೇನು? :
ಮಾಂಜಾ ದಾರದಿಂದ ಸಂಭವಿಸುತ್ತಿರುವ ಸರಣಿ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಾಗೂ ಭಾರತದ ವಿವಿಧ ಹೈಕೋರ್ಟ್‌ಗಳು ಮತ್ತು ಕರ್ನಾಟಕ ಸರ್ಕಾರವು ನೈಲಾನ್/ಚೀನಾ ಮಾಂಜಾ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಚೀನಾ ಮಾಂಜಾ ಮಾರಾಟ ಮಾಡುವುದು ಅಥವಾ ಬಳಸುವುದು ಕಂಡುಬಂದಲ್ಲಿ ಪರಿಸರ ಸಂರಕ್ಷಣಾ ಕಾಯ್ದೆಯಡಿ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಇಲ್ಲಿದೆ ನೋಡಿ ವಿಡಿಯೋ:
ಹುಬ್ಬಳ್ಳಿ ಧಾರವಾಡ ಪೊಲೀಸರಿಂದ ಖಡಕ್ ನಿರ್ಧಾರ:
ಬೆಳಗಾವಿಯಲ್ಲಿ ಮಹಿಳೆಯೊಬ್ಬರು ಈ ದಾರಕ್ಕೆ ಸಿಲುಕಿ ಮೃತಪಟ್ಟರೆ, ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಆಕಾಶದಲ್ಲಿ ಹಾರಾಡುವ ಅನೇಕ ಪಕ್ಷಿಗಳು ಸಹ ಈ ಮಾಂಜಾ ದಾರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ. ಇದು ಪರಿಸರಕ್ಕೂ ಹಾನಿಕಾರಕವಾಗಿದೆ, ಏಕೆಂದರೆ ಇದು ಕೊಳೆಯುವುದಿಲ್ಲ. ರಾಜ್ಯ ಸರ್ಕಾರ ಮತ್ತು ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ) ಚೈನೀಸ್ ಮಾಂಜಾ ದಾರವನ್ನು ಸಂಪೂರ್ಣವಾಗಿ ನಿಷೇಧಿಸಿವೆ. ನಿಷೇಧವಿದ್ದರೂ ಸಹ ಕೆಲವರು ಅಕ್ರಮವಾಗಿ ಇದನ್ನು ಮಾರಾಟ ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೊಲೀಸರು ಈ ಅಕ್ರಮ ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಹತ್ತಿದಾರ ಬಳಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




