Golmaal: ಸರಕಾರಿ ಅಧಿಕಾರಿಗಳು ದುಡ್ಡು ಮಾಡೋ ಕಲೆ ಕಲಿಯಬೇಕೆಂದರೆ ಶಿಕ್ಷಣ ಕಾಶಿ ಧಾರವಾಡಕ್ಕೆ ಬನ್ನಿ -ರೈತರ ಅಹವಾಲು
ಒಟ್ಟಿನಲ್ಲಿ ಅವಶ್ಯಕ ಕಾಮಗಾರಿಗಳಿಗೆ ದುಡ್ಡೇ ಇಲ್ಲ ಅನ್ನೋ ಅಧಿಕಾರಿಗಳು, ಯಾರಿಗೂ ಬೇಡದ ಮತ್ತು ಅವಶ್ಯಕತೆ ಇಲ್ಲದ ಇಂಥ ಯೋಜನೆಗಳಿಗೆ ಕೋಟಿ ಕೋಟಿ ಹಣ ಸುರಿಯೋದನ್ನು ನೋಡಿದರೆ, ಇದರ ಹಿಂದೆ ಬೇರೆಯದ್ದೇ ಕಾರಣ ಇರೋದು ಸ್ಪಷ್ಟವಾಗಿ ಗೋಚರಿಸುತ್ತೆ.
ದುಡ್ಡು ಮಾಡೋದು ಕೂಡ ಒಂದು ಕಲೆ ಅಂತಾ ಕೆಲವರು ಹೇಳುತ್ತಾರೆ. ಅಂಥ ಕಲೆಯನ್ನು ಕಲಿಯಬೇಕೆಂದರೆ ಶಿಕ್ಷಣ ಕಾಶಿ ಧಾರವಾಡಕ್ಕೆ ಬರಬೇಕು. ಏಕೆಂದರೆ ಇಲ್ಲಿನ ಸರಕಾರಿ ಅಧಿಕಾರಿಗಳು ದುಡ್ಡು ಮಾಡಲು ಹೇಗೆಲ್ಲ ಹೊಸ ಹೊಸ ತಂತ್ರಗಳನ್ನು ಹೂಡುತ್ತಾರೆ ಅನ್ನೋದು ಗೊತ್ತಾಗುತ್ತೆ. ಅದರಲ್ಲೂ ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಡಿರೋ ತಂತ್ರಗಳನ್ನು (Golmaal) ನೋಡಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. ಇದಕ್ಕೊಂದು ತಾಜಾ ಉದಾಹರಣೆ ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ರೈತರ ಜಮೀನಿನಲ್ಲಿ ಕಾಲುವೆ ನಿರ್ಮಾಣ; ಜಮೀನು ಪಡೆದರೂ ಪರಿಹಾರ ನೀಡದ ಅಧಿಕಾರಿ ವರ್ಗ; ಕಾಮಗಾರಿಗೆ ವಿರೋಧ ಮಾಡಿದರೂ ಬೆದರಿಕೆ ಹಾಕಿ ಕೆಲಸ ಮಾಡಿದ ಅಧಿಕಾರಿಗಳು; ಸೇತುವೆ ಬಳಿ ನಿಂತು ತಮ್ಮ ನೋವು ತೋಡಿಕೊಳ್ಳುತ್ತಿರೋ ರೈತರು (Farmers)… ಅದು ಧಾರವಾಡ (Dharwad) ತಾಲೂಕಿನ ಮದಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಬರೋ ಕೆರೆಯ ಕೋಡಿಗೆ ನಿರ್ಮಿಸಿದ ಸೇತುವೆ (Lake Bridge) ಹಾಗೂ ಕಾಲುವೆ. ಈ ಗ್ರಾಮದ ಕೆರೆಯನ್ನು 1964 ನಿರ್ಮಿಸಲಾಗಿತ್ತು. ಕೆರೆ ತುಂಬಿದಾಗ ಕೋಡಿ ಮೂಲಕ ಪಕ್ಕದ ಹಳ್ಳಕ್ಕೆ ನೀರು ಹರಿದು ಹೋಗುತ್ತಿತ್ತು.
ಅದೆಲ್ಲಾ ನಡೆದು ಐದಾರು ದಶಕಗಳೇ ಕಳೆದು ಹೋಗಿವೆ. ಆದರೆ ಮೂರು ವರ್ಷಗಳ ಹಿಂದೆ ಅಂದರೆ 2019 ರಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ಸೇರಿ ಕೋಡಿಯ ಮಾರ್ಗವನ್ನೇ ಬದಲಿಸಿ ಬಿಟ್ಟಿದ್ದಾರೆ! ಕೇವಲ ಎರಡು ನೂರು ಮೀಟರ್ ನೀರು ಹರಿದು ಹೋದರೆ ಅದು ಹಳ್ಳಕ್ಕೆ ಸೇರುತ್ತಿತ್ತು.
ಆದರೆ ಇದೀಗ ಆ ನೀರು ಹರಿಯುವ ದಾರಿಯನ್ನೇ ಬದಲಿಸಿ ದೊಡ್ಡದೊಂದು ಕಾಮಗಾರಿಯನ್ನೇ ‘ಸೃಷ್ಟಿಸಿದ್ದಾರೆ’. ಅನೇಕ ರೈತರ ಹೊಲಗಳ ಮೂಲಕ ನೀರು ಹರಿಯುವ ಯೋಜನೆ ರೂಪಿಸಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾರೆ. ಹಾಗಂತ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ. ಇದರಿಂದಾಗಿ ಭೂಮಿ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಮಾರು 90 ಎಕರೆ ಪ್ರದೇಶದಲ್ಲಿ ಈ ಕೆರೆ ನಿರ್ಮಾಣವಾಗಿದೆ. ಕರೆ ತುಂಬಿದಾದ ಮೇಲೆ ಹೊರ ಹೋಗೋ ನೀರಿನ ಪ್ರಮಾಣವೂ ಹೆಚ್ಚು. ಆದರೆ ಅದಾಗಲೇ ಇದ್ದ ನೀರಿನ ಹರಿವಿನ ಮಾರ್ಗವನ್ನು ಬದಲಿಸಿ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಇಂಥದ್ದೊಂದು ಯೋಜನೆ ರೂಪಿಸೋ ಅವಶ್ಯಕತೆ ಇತ್ತಾ ಅನ್ನೋದು ರೈತರ ಪ್ರಶ್ನೆ. ಅಲ್ಲದೇ ರೈತರು ಈ ಯೋಜನೆಗೆ ಕಳೆದುಕೊಂಡ ಭೂಮಿಗೆ ಪರಿಹಾರವನ್ನೂ ನೀಡಿಲ್ಲ.
ಇದನ್ನೆಲ್ಲ ನೋಡುತ್ತಿದ್ದರೆ ಹಣವನ್ನು ಹೊಡೆಯಲು ಈ ಯೋಜನೆ ರೂಪಿಸಿರೋ ಅನುಮಾನ ಕಾಡುತ್ತಿದೆ. ಇನ್ನು ಇದೇ ಯೋಜನೆಯ ಮುಂದಿನ ಭಾಗವಾಗಿ ತಡೆಗೋಡೆ ನಿರ್ಮಿಸಲು ಇದೀಗ ಮತ್ತೆ 1.5 ಕೊಟಿ ರೂಪಾಯಿ ಬಿಡುಗಡೆಯಾಗಿದ್ದು, ಅಧಿಕಾರಿಗಳು ಕಾಮಗಾರಿಯನ್ನು ಬೇಗನೇ ಮುಗಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಇದೀಗ ರೈತರು ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಹಿಂದಿನ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದಾಗ ಪೊಲೀಸ್ ಭದ್ರತೆ ಇಟ್ಟುಕೊಂಡು ಬೆದರಿಕೆ ಹಾಕಲಾಗಿತ್ತಂತೆ. ಆದರೆ ಈ ಬಾರಿ ಅಂಥ ಬೆದರಿಕೆಗೆ ಬಗ್ಗೋದೇ ಇಲ್ಲ ಅನ್ನುತ್ತಿದ್ದಾರೆ ಭೂಮಿ ಕಳೆದುಕೊಂಡ ರೈತರು.
ಇನ್ನು ಈ ಬಗ್ಗೆ ಮಾಹಿತಿ ಕೇಳಲು ಈ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರೋ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಉತ್ತಮ ಗದಗಕರ್ ಅವರಿಗೆ ಫೋನ್ ಮಾಡಿದರೆ, ಅವರು ಕರೆಯನ್ನೇ ಸ್ವೀಕರಿಸಿಲ್ಲ. ಒಟ್ಟಿನಲ್ಲಿ ಅವಶ್ಯಕ ಕಾಮಗಾರಿಗಳಿಗೆ ದುಡ್ಡೇ ಇಲ್ಲ ಅನ್ನೋ ಅಧಿಕಾರಿಗಳು, ಯಾರಿಗೂ ಬೇಡದ ಮತ್ತು ಅವಶ್ಯಕತೆ ಇಲ್ಲದ ಇಂಥ ಯೋಜನೆಗಳಿಗೆ ಕೋಟಿ ಕೋಟಿ ಹಣ ಸುರಿಯೋದನ್ನು ನೋಡಿದರೆ, ಇದರ ಹಿಂದೆ ಬೇರೆಯದ್ದೇ ಕಾರಣ ಇರೋದು ಸ್ಪಷ್ಟವಾಗಿ ಗೋಚರಿಸುತ್ತೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Tue, 27 December 22