ರಾಮಲಿಂಗಾರೆಡ್ಡಿಗೆ ಮಾತು ಕೊಟ್ಟಿದ್ದು ನಿಜ: ಖಾತೆ ಹಂಚಿಕೆ ಒಳ ರಹಸ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್
ಕೇಳಿದ ಖಾತೆ ಸಿಗಲಿಲ್ಲ. ಸಚಿವ ಸ್ಥಾನವೇ ನನಗೆ ಬೇಡ. ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿಗೆ ಸಿಕ್ಕಿಲ್ಲ. ಬದಲಾಗಿ ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಬೇಸರಗೊಂಡು ಸಚಿವ ರಾಜೀನಾಮೆ ಕೊಟ್ಟಿದ್ದಾರೆ. ಇದರೊಂದಿಗೆ ಡಿಕೆ ಶಿವಕುಮಾರ್ ಮೊದಲ ಸಂಪುಟದಲ್ಲೇ ಖಾತೆ ಹಂಚಿಕೆ ಅಸಮಾಧಾನ ಸ್ಫೋಟ ಆಗಿರೋದು ಕೈ ಮನೆಯಲ್ಲಿ ಕಂಪನ ಶುರುವಾಗಿದ್ದು, ಸಮಸ್ಯೆ ಬಗೆಹರಿಸೋದು ಟ್ರಬಲ್ ಶೂಟರ್ ಡಿಕೆಶಿಗೆ ಸವಾಲ್ ಆಗಿದೆ. ಇನ್ನು ರಾಮಲಿಂಗಾರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ತಪ್ಪಿದ್ಹೇಕೆ ಎನ್ನುವ ಒಳ ರಹಸ್ಯವನ್ನು ಸ್ವತಃ ಸಿಎಂ ಬಹಿರಂಗಪಡಿಸಿದ್ದಾರೆ.

ಬೆಂಗಳೂರು, (ಜೂನ್ 05):ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರೇ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿಗೆ (Ramalinga Reddy) ಮಾತು ಕೊಟ್ಟಿದ್ದರು. ಆದ್ರೆ, ಕೊನೆಕ್ಷಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ (Bengaluru Development Portfolio) ಮತ್ತೋರ್ವ ಪ್ರಭಾವಿ ನಾಯಕ ಕೃಷ್ಣಭೈರೇಗೌಡ ಪಾಲಾಗಿದೆ. ಇದರಿಂದ ಅಸಮಾಧಾನಗೊಂಡ ಪ್ರಭಾವಿ ನಾಯಕ, ಹಿರಿಯ ಶಾಸಕ ಆಗಿರೋ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ, ಡಿಕೆಶಿ ಕೊಟ್ಟ ಮಾತನ್ನೇ ಉಲ್ಲೇಖಿಸಿದ್ದು, ಅವತ್ತೇ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನಿನಗೆ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ರು. ಆದ್ರೆ ಇದೀಗ ನೋಡಿದ್ರೆ ಜಲಸಂಪನ್ಮೂಲ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಇದೀಗ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಮಲಿಂಗಾರೆಡ್ಡಿಗೆ ನಾವು ಮಾತು ಕೊಟ್ಟಿದ್ದು ನಿಜ. ನಾನು ನನ್ನ ತಮ್ಮ ಹೋಗಿ ಮಾತು ಕೊಟ್ಟಿದ್ದೇವು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಖಾತೆ ಕೈತಪ್ಪಿರುವ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾನು ನನ್ನ ತಮ್ಮ ಹೋಗಿ ಮಾತನಾಡಿದ್ದು ನಿಜ. ಬೆಂಗಳೂರು ಅಭಿವೃದ್ಧಿ ಖಾತೆ ಕೊಡಿಸುತ್ತೇವೆ ಎಂದು ಹೇಳಿದ್ವಿ. ಆದರೆ ಹೈಕಮಾಂಡ್ ನಿರ್ಧಾರ ಏನು ಮಾಡೋದು ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ಈ ಮೂಲಕ ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಭೈರೇಗೌಡ ಅವರಿಗೆ ಕೊಟ್ಟಿರುವುದು ಹೈಕಮಾಂಡ್ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಾಮಲಿಂಗಾರೆಡ್ಡಿ ರಾಜೀನಾಮೆ: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾಕಿಷ್ಟು ಡಿಮ್ಯಾಂಡ್?
ರಾಮಲಿಂಗಾರೆಡ್ಡಿಯವರು ಹೊರಗಡೆ ಇದ್ದಾರೆ. ಖುದ್ದಾಗಿ ನಾನೇ ಭೇಟಿಯಾಗಿ ಮಾತನಾಡ್ತೇನೆ. ಮುನಿಯಪ್ಪ ಜೊತೆ ಮಾತನಾಡಿದ್ದು ಆಯ್ತು, ರಾಹುಲ್‌ಗಾಂಧಿ ಹೇಳಿದ್ದು ಆಯ್ತು. ಮುನಿಯಪ್ಪ ಈಗ ಖುಷಿಯಾಗಿದ್ದಾರೆ. ಯಾವ ಖಾತೆ ಕೊಟ್ಟರೂ ಕೆಲಸ ಮಾಡ್ತೀನಿ ಅಂದಿದ್ಧಾರೆ ಎಂದು ಹೇಳಿದರು.
ಕೇಳದೇ ಕೃಷ್ಣಭೈರೇಗೌಡ ಸಿಕ್ತಾ ಪ್ರಬಲ ಖಾತೆ?
ಸಚಿವರಾದ ಬಳಿಕ ಮಾಧ್ಯಮಳಿಗೆ ಪ್ರತಿಕ್ರಿಯಿಸಿದ್ದ ಕೃಷ್ಣಭೈರೇಗೌಡ, ಕಂದಾಯ ಇಲಾಖೆಯಲ್ಲಿ ಹಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ ಕಂದಾಯ ಇಲಾಖೆ ಕೊಟ್ಟರೇ ಅವುಗಳನ್ನು ಪೂರ್ಣಗೊಳಿಸುವ ಗುರಿ ಇದೆ ಎಂದಿದ್ದರು. ಹೀಗೆ ಅವರೇ ಕಂದಾಯ ಕೊಟ್ರೆ ಸಾಕು ಎಂದಿದ್ದಾಗ ಏಕಾಏಕಿ ಪ್ರಬಲ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಕ್ಕಿದ್ಹೇಗೆ ಎನ್ನುವುದು ನಿಗೂಢವಾಗಿದೆ. ಮೂಲಗಳ ಪ್ರಕಾರ, ಕೃಷ್ಣಭೈರೇಗೌಡ ಅವರು ಸೈಲೆಂಟ್ ಆಗಿದ್ದರೂ ಸಹ ಅವರು ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಅವರ ಕೆಲಸ ಕಾರ್ಯಗಳು, ಇಲಾಖೆಯ ಕಾರ್ಯವೈಖರಿಯಿಂದ ಹೈಕಮಾಂಡ್ ಕೃಷ್ಣಭೈರೇಗೌಡ ಅವರನ್ನ ಮೆಚ್ಚಿಕೊಂಡಿದೆ. ಹೀಗಾಗಿ ಕೃಷ್ಣಭೈರೇಗೌಡ ಅವರಿಗೆ ಹೈಕಮಾಂಡ್ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದೆ ಎಂದು ಹೇಳಲಾಗುತ್ತಿದೆ.
ಯಾರ ಸಂಪರ್ಕಕ್ಕೆ ಸಿಗದ ರಾಮಲಿಂಗಾರೆಡ್ಡಿ
ರಾಹುಲ್ ಗಾಂಧಿ, ಸುರ್ಜೆವಾಲ, ವೇಣುಗೋಲಾಲ್, ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬಂದಿದ್ದು, ಕರೆದು ಮನವೊಲಿಸುವ ಯತ್ನ ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಮಲಿಂಗಾರೆಡ್ಡಿ ಫೋನ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಮೂಲಕಗಳ ಪ್ರಕಾರ ಬೆಂಗಳೂರು ಬಿಟ್ಟು ತಮಿಳುನಾಡು ಕಡೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕೊಟ್ಟ ಮಾತಿನಂತೆ ಖಾತೆ ಕೊಟ್ಟಿಲ್ಲವೆಂದು ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ ಅವರನ್ನು ಸಿಎಂ ಸಮಾಧಾನಪಡಿಸುವ ಮಾತುಗಳನ್ನಾಡಿದ್ದಾರೆ. ಆದ್ರೆ, ರಾಮಲಿಂಗಾರೆಡ್ಡಿ ಮನವೊಲಿಕೆಯಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.




