ಬೆಂಗಳೂರು: 25ಕ್ಕೂ ಹೆಚ್ಚು ದೇಶ, 240 ಕಂಪನಿಗಳು ಭಾಗವಹಿಸುತ್ತಿರುವ ಬೆಂಗಳೂರು ತಂತ್ರಜ್ಞಾನ ಮೇಳ-2020ಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬೆಳಿಗ್ಗೆ ಚಾಲನೆ ನೀಡಿದರು. ಬೆಂಗಳೂರು ತಂತ್ರಜ್ಞಾನ ಮೇಳದ 23ನೇ ಆವೃತ್ತಿ ಇದಾಗಿದ್ದು, ವರ್ಚುವಲ್ ಅಗಿ ನಡೆಯುತ್ತಿರುವ ಮೊದಲ ಸಮ್ಮೇಳನ ಎನಿಸಿದೆ.
ಯಾವ ವಿಷಯಗಳ ಮೇಲೆ ನಡೆಯಲಿವೆ ಗೋಷ್ಟಿಗಳು? ಕೊವಿಡ್ನಂತಹ ಸಾಮುದಾಯಿಕ ಪಿಡುಗಿನ ವಿರುದ್ಧ ಹೋರಾಡಲು ತಂತ್ರಜ್ಞಾನದ ಬಳಕೆಯ ಕುರಿತು ಹೊಸ ದಾರಿಗಳನ್ನು ತೆರೆದಿಡಲಿದೆ. ಅಲ್ಲದೇ, ಜನರ ದೈನಂದಿನ ಬದುಕಿಗೆ ಸಹಾಯವಾಗುವ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಸಮ್ಮೇಳನ ಕೇಂದ್ರೀಕರಿಸಲಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರೋಗ್ಯ ಸೇವೆ, ಈ-ಗವರ್ನೆನ್ಸ್, ಬಾಹ್ಯಾಕಾಶ, 5ಜಿ, ಸೈಬರ್ ಸೆಕ್ಯುರಿಟಿ, ಭೂ ಮಾಲಿಕತ್ವದ ನಿರ್ವಹಣೆ, ಜೈವಿಕ ತಂತ್ರಜ್ಞಾನ, ನಗರ ನಿರ್ವಹಣೆ, ಮಶಿನ್ ಲರ್ನಿಂಗ್ ಮುಂತಾದ ವಿಷಯಗಳಿಗೆ ಸಮ್ಮಿತ್ ಗಮನ ಕೊಡಲಿದೆ.
Bengaluru Tech Summit 2020 ಬೆಂಗಳೂರಿಗರಿಗೆ ಏನೆಲ್ಲಾ ಲಾಭ? ಬೆಂಗಳೂರು ಸೇರಿದಂತೆ ರಾಜ್ಯದ ಜನರ ತಂತ್ರಜ್ಞಾನದ ಬಳಕೆಯ ಮೂಲಕ ಬದುಕಿನ ಗುಣಮಟ್ಟ ಹೆಚ್ಚುವ ನಿರೀಕ್ಷೆಯಿದೆ. ಉದಯೋನ್ಮುಖ ಚಿಕ್ಕ ಉದ್ದಿಮೆದಾರರಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆ ಹೆಚ್ಚಲಿದೆ. ಜೊತೆಗೆ, ಬೆಂಗಳೂರಿನ ನವೋದ್ಯಮಗಳಿಗೆ ಬೇರೆ ದೇಶಗಳಲ್ಲಿ ತಮ್ಮ ಮಾರುಕಟ್ಟೆ ಸೇವೆಯನ್ನು ವಿಸ್ತರಿಸುವ ಅವಕಾಶ ಸಿಗಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ನಾಯಕನಾಗಿ ಹೊರಹೊಮ್ಮುವ ಸಾಧ್ಯತೆಗಳು ತೆರೆದುಕೊಳ್ಳಲಿವೆ.
ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ 5ಜಿ ತಂತ್ರಜ್ಞಾನ! ಮುಂದಿನ 5 ವರ್ಷಗಳಲ್ಲಿ 1 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ ಇಟ್ಟುಕೊಳ್ಳಲಾಗಿದೆ. ಡಿಜಿಟಲ್ ಆರ್ಥಿಕತೆಯನ್ನು 52 ಬಿಲಿಯನ್ ಡಾಲರ್ನಿಂದ 300 ಬಿಲಿಯನ್ ಡಾಲರ್ಗೆ ಏರಿಸಬೇಕಿದೆ. ಜೈವಿಕ ತಂತ್ರಜ್ಞಾನದಲ್ಲಿ 26 ಬಿಲಿಯನ್ ಡಾಲರ್ನಿಂದ 100 ಬಿಲಿಯನ್ ಡಾಲರ್ಗೆ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತೇವೆ. ದೇಶದ ಒಟ್ಟಾರೆ ಆರ್ಥಿಕ ಗುರಿಗೆ ಕರ್ನಾಟಕ ಅತೀ ಹೆಚ್ಚಿನ ಕೊಡುಗೆ ನೀಡಬೇಕಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ವಿವರಿಸಿದರು.
7 ದೇಶಗಳ ಜೊತೆಗೆ ಆಗಲಿದೆ ಒಪ್ಪಂದ: ಈ ಸಮ್ಮಿತ್ನ ವಿಶೇಷಗಳೆನು ಎಂದು ಕೇಳಿದ್ರೆ, ರಾಜ್ಯ ಸರ್ಕಾರ ವಿವಿಧ ದೇಶಗಳ ಜೊತೆ 7 ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. 3 ದಿನಗಳಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿ 70 ಗೋಷ್ಟಿಗಳು ಜರುಗಲಿವೆ. ವಿವಿಧ ದೇಶಗಳ 100ಕ್ಕೂ ಹೆಚ್ಚು ನವೋದ್ಯಮಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.