Fact Check: ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆಂಬ ವಿಡಿಯೋ ವೈರಲ್: ಇದು ನಿಜವೇ?
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಚಲನ್ ನೀಡಿದ್ದಕ್ಕೆ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ರಾಜ್ಯದಲ್ಲಿ ನಿಜಕ್ಕೂ ಈ ರೀತಿಯ ಘಟನೆ ನಡೆದಿದೆಯೇ?. ಈ ಸುದ್ದಿಯ ನಿಜಾಂಶ ಇಲ್ಲಿದೆ ಓದಿ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೇಕ್ ವಿಡಿಯೋಗಳಿಗೆ ಕಡಿವಾಣ ಹಾಕಲು ಸಾಧ್ಯವೇ ಆಗುತ್ತಿಲ್ಲ. ಪ್ರತಿ ದಿನ ಸಾವಿರಾರು ವಿಡಿಯೋಗಳು ಸುಳ್ಳು ಹೇಳಿಕೆಯೊಂದು ಫೇಸ್ಬುಕ್, ಎಕ್ಸ್, ಇನ್ಸ್ಟಾದಲ್ಲಿ ಅಪ್ಲೋಡ್ ಆಗುತ್ತವೆ. ಇದನ್ನೇ ಕೆಲವು ನಿಜ ಎಂದು ನಂಬುತ್ತಾರೆ. ಅದರಂತೆ ಇದೀಗ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಚಲನ್ ನೀಡಿದ್ದಕ್ಕೆ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ರಾಜ್ಯದಲ್ಲಿ ನಿಜಕ್ಕೂ ಈ ರೀತಿಯ ಘಟನೆ ನಡೆದಿದೆಯೇ?. ಈ ಸುದ್ದಿಯ ನಿಜಾಂಶ ಇಲ್ಲಿದೆ ಓದಿ.
ಇನ್ಸ್ಟಾಗ್ರಾಮ್ನಲ್ಲಿ ಕಟ್ಟರ್ ಹಿಂದೂ ಸಾಮ್ರಾಜ್ಯ ಎಂಬ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, ‘‘ಕರ್ನಾಟಕ ಸುದ್ದಿ- ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಚಲನ್ ನೀಡಿದಾಗ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆ. ಇದು ಕಾನೂನಿಗೆ ನೇರ ಸವಾಲು. ಭವಿಷ್ಯದಲ್ಲಿ ಭಾರತದಲ್ಲಿ ಏನಾಗುತ್ತದೆ, ದೇಶವನ್ನು ಯಾರು ನಡೆಸುತ್ತಾರೆ ಮತ್ತು ಪ್ರತಿಯೊಬ್ಬರ ಭವಿಷ್ಯ ಏನಾಗಬಹುದು ಎಂದು ಈ ವೀಡಿಯೊ ಹೇಳುತ್ತದೆ. ಕಹಿ ಸತ್ಯವೆಂದರೆ ದೇಶವು ಹೊರಗಿನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿದೆ,” ಎಂದು ಬರೆದಿದ್ದಾರೆ.
View this post on Instagram
Fact Check:
ಈ ವೈರಲ್ ಸುದ್ದಿಯನ್ನು ಟಿವಿ9 ಕನ್ನಡ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ರೀತಿಯ ಘಟನೆ ನಡೆದೇ ಇಲ್ಲ. ಈ ವಿಡಿಯೋ ಕರ್ನಾಟಕದ್ದೂ ಅಲ್ಲ. ವೈರಲ್ ಕ್ಲಿಪ್‌ನ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ವಿಡಿಯೋ ಆಗಸ್ಟ್ 27, 2018 ರಂದು ಎಕ್ಸ್ನಲ್ಲಿ ಅಪ್ಲೋಡ್ ಆಗಿರುವುದು ನಮಗೆ ಸಿಕ್ಕಿದೆ. ಹೀಗಾಗಿ ಇದು ಹಳೆಯದು ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಬ್ಯಾಂಕ್‌ನ ಹೊರಗೆ ಸಾಲಿನಲ್ಲಿ ನಿಲ್ಲುವ ವಿವಾದಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ ಎಂದು ವಿವರಿಸಲಾಗಿದೆ.
ಮೇಲಿನ ಪೋಸ್ಟ್‌ನ ಕಮೆಂಟ್ ಸೆಕ್ಷನ್ ನೋಡಿದಾಗ ಆಗಸ್ಟ್ 27, 2018 ರಂದು ಗಾಜಿಯಾಬಾದ್ ಪೊಲೀಸರು ಈ ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿರುವ ವಿಡಿಯೋ ಹಂಚಿಕೊಂಡಿರುವುದು ಕಂಡುಬಂದಿದೆ. ಪೊಲೀಸರು ಹಂಚಿಕೊಂಡ ವಿಡಿಯೋದಲ್ಲಿ, ಆಗಿನ ಗಾಜಿಯಾಬಾದ್‌ನ ಎಸ್‌ಎಸ್‌ಪಿ ವೈಭವ್ ಕೃಷ್ಣ ಅವರ ಪ್ರಕಾರ, ‘‘ಪೊಲೀಸ್ ಠಾಣೆ ಲೋನಿ ಬಾರ್ಡರ್‌ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಮಹಿಳೆ ಮತ್ತು ಅವರೊಂದಿಗೆ ಇತರ ಕೆಲವರು ಸಹ ಕಾಣಿಸಿಕೊಂಡಿದ್ದಾರೆ. ಮಹಿಳೆ ಮತ್ತು ಆಕೆಯ ಸಹಚರರು ಪೊಲೀಸ್ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಬ್ಯಾಂಕ್‌ನಲ್ಲಿ ಆಧಾರ್ ಕಾರ್ಡ್ ಮಾಡುವ ವಿಚಾರದಲ್ಲಿ ಯುವಕ ಹಾಗೂ ಬ್ಯಾಂಕ್ ಉದ್ಯೋಗಿಗಳ ನಡುವೆ ಜಗಳ ನಡೆದಿದೆ. ಅದರಲ್ಲಿ ಬ್ಯಾಂಕ್ ಉದ್ಯೋಗಿ ಪೊಲೀಸರಿಗೆ ಕರೆ ಮಾಡಿ ಜಗಳ ಆಗುತ್ತಿದೆ ಎಂದು ಹೇಳಿದ್ದಾರೆ. 100 ಗೆ ಕರೆ ಮಾಡಲಾಗಿತ್ತು. ಅಲ್ಲಿನ ಸ್ಥಳೀಯ ಜನರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಲ್ಲಿ ಮಹಿಳೆಯೂ ಇದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ. ಈ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಇತರ ಎಲ್ಲ ವ್ಯಕ್ತಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು,’’ ಎಂದು ಹೇಳಿದ್ದಾರೆ.
— POLICE COMMISSIONERATE GHAZIABAD (@ghaziabadpolice) August 27, 2018
ಹೀಗಾಗಿ 6 ವರ್ಷಗಳ ಹಿಂದೆ ಗಾಜಿಯಾಬಾದ್‌ನಲ್ಲಿ ನಡೆದ ಘಟನೆಯ ವಿಡಿಯೋವನ್ನು ಇದೀಗ ಕರ್ನಾಟಕದದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ಶೇರ್ ಮಾಡಲಾಗುತ್ತಿದೆ. ಬ್ಯಾಂಕ್‌ನಲ್ಲಿ ಆಧಾರ್ ಕಾರ್ಡ್ ಮಾಡುವ ವಿಚಾರದಲ್ಲಿ ನಡುವೆ ಜಗಳ ನಡೆದಾಗ ಪೊಲೀಸರು ಬಂದಿದ್ದಾರೆ. ಈ ವಿವಾದದಲ್ಲಿ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ