ಹಾವೇರಿಯಲ್ಲಿ ಭರಪೂರ ಬೆಳೆದ ಭತ್ತ ; ಖರೀದಿದಾರರಿಲ್ಲದೆ ಕಂಗಾಲಾದ ರೈತರು

ಹಾವೇರಿಯಲ್ಲಿ ಭರಪೂರ ಬೆಳೆದ ಭತ್ತ ; ಖರೀದಿದಾರರಿಲ್ಲದೆ ಕಂಗಾಲಾದ ರೈತರು
ಭತ್ತವನ್ನು ರಸ್ತೆ ಬದಿ ರಾಶಿ ಹಾಕಿರುವುದು

ಭತ್ತ ಕ್ವಿಂಟಲ್​ಗೆ 2000 ದಿಂದ 2500ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಈ ಭಾರಿ ಕೊರೊನಾದಿಂದ ವ್ಯಾಪಾರಸ್ಥರು ಭತ್ತ ಖರೀದಿಗೆ ಬರುತ್ತಿಲ್ಲ. ಕೆಲವೇ ಕೆಲವು ವ್ಯಾಪಾರಸ್ಥರು ಭತ್ತ ಖರೀದಿಗೆ ಬರುತ್ತಿದ್ದಾರೆ. ಆದರೆ ವ್ಯಾಪಾರಸ್ಥರು ಕ್ವಿಂಟಲ್​ಗೆ 1000ದಿಂದ 1500ರೂಪಾಯಿವರೆಗೆ ಮಾತ್ರ ಖರೀದಿಗೆ ಕೇಳುತ್ತಿದ್ದಾರೆ. ಇದು ಭತ್ತ ಬೆಳೆದ ರೈತರನ್ನ ಹೈರಾಣಾಗಿಸಿದೆ.

preethi shettigar

|

May 21, 2021 | 8:49 AM

ಹಾವೇರಿ: ಕೊರೊನಾ ಎರಡನೇ ಅಲೆ ತೀವ್ರವಾದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಆದರೆ ಇದರಿಂದ ವ್ಯಾಪರಸ್ಥರು, ರೈತರು ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಲು ಆಗದೆ, ಒಂದು ವೇಳೆ ಸಾಗಿಸಿದರು ಅದನ್ನು ಕೊಳ್ಳವವರು ಇಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹದ್ದೇ ಪರಿಸ್ಥಿತಿ ಈಗ ಹಾವೇರಿ ಭಾಗದ ಭತ್ತ ಬೆಳೆದ ಕೃಷಿಕರದ್ದಾಗಿದೆ. ಕಷ್ಟಪಟ್ಟು ಬೆಳೆದ ಭತ್ತವನ್ನು ಕಟಾವು ಮಾಡಿ, ರಸ್ತೆಯ ಬದಿಯಲ್ಲಿ ಅವುಗಳನ್ನು ಗುಡ್ಡೆ ಹಾಕಿಕೊಂಡು ಕೂತಿದ್ದಾರೆ. ಆದರೆ ಕೊರೊನಾದಿಂದಾಗಿ ವ್ಯಾಪಾರಸ್ಥರು ಭತ್ತ ಖರೀದಿಗೆ ಬರುತ್ತಿಲ್ಲ ಹೀಗಾಗಿ ರೈತರು ಕಂಗಾಲಾಗಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕುದರಿಹಾಳ, ಚಂದಾಪುರ, ಮಾಗನೂರು, ಹೊಳೆಆನ್ವೇರಿ, ಮೆಡ್ಲೇರಿ, ಗಂಗಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರಿಗೆ ಭತ್ತದ ಬೆಳೆಯೆ ಆಧಾರವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹಲವು ಗ್ರಾಮಗಳ ರೈತರು ಕಷ್ಟಪಟ್ಟು ಭತ್ತ ಬೆಳೆದಿದ್ದಾರೆ. ಭರಪೂರ ಬೆಳೆದಿರುವ ಭತ್ತವನ್ನ ಕಟಾವು ಮಾಡಿ, ಗ್ರಾಮದಲ್ಲಿನ ರಸ್ತೆಗಳ ಮೇಲೆ ಗುಡ್ಡೆ ಹಾಕಿಕೊಂಡು ಮಾರಾಟಕ್ಕೆ ಕಾದು ಕೂತಿದ್ದಾರೆ. ಆದರೆ ಖರೀದಿಗೆ ಯಾರು ಬರುತ್ತಿಲ್ಲ.

ಪ್ರತಿವರ್ಷ ದಾವಣಗೆರೆ ಭಾಗದಿಂದ ಹೆಚ್ಚಿನ ವ್ಯಾಪಾರಸ್ಥರು ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈ ಭಾರಿ ಕೊರೊನಾ ಕಾರಣದಿಂದಾಗಿ ಭತ್ತ ಖರೀದಿಗೆ ವ್ಯಾಪಾರಸ್ಥರು ಬರುತ್ತಿಲ್ಲ. ಇದು ಭತ್ತ ಬೆಳೆದ ರೈತರನ್ನ ಕಂಗಾಲಾಗಿಸಿದೆ. ಜಿಲ್ಲೆಯವರೆ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ರೈತರ ನೆರವಿಗೆ ಧಾವಿಸಿ, ರೈತರು ಬೆಳೆದ ಭತ್ತಕ್ಕೆ ಸೂಕ್ತ ಬೆಲೆ ಒದಗಿಸಿಕೊಡಬೇಕಿದೆ ಎಂದು ಭತ್ತ ಬೆಳೆದ ರೈತ ಶಾಂತಪ್ಪ ಮನವಿ ಮಾಡಿಕೊಂಡಿದ್ದಾರೆ.

ಭತ್ತ ಕ್ವಿಂಟಲ್​ಗೆ 2000 ದಿಂದ 2500ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಈ ಭಾರಿ ಕೊರೊನಾದಿಂದ ವ್ಯಾಪಾರಸ್ಥರು ಭತ್ತ ಖರೀದಿಗೆ ಬರುತ್ತಿಲ್ಲ. ಕೆಲವೇ ಕೆಲವು ವ್ಯಾಪಾರಸ್ಥರು ಭತ್ತ ಖರೀದಿಗೆ ಬರುತ್ತಿದ್ದಾರೆ. ಆದರೆ ವ್ಯಾಪಾರಸ್ಥರು ಕ್ವಿಂಟಲ್​ಗೆ 1000ದಿಂದ 1500ರೂಪಾಯಿವರೆಗೆ ಮಾತ್ರ ಖರೀದಿಗೆ ಕೇಳುತ್ತಿದ್ದಾರೆ. ಇದು ಭತ್ತ ಬೆಳೆದ ರೈತರನ್ನ ಹೈರಾಣಾಗಿಸಿದೆ.

ಪ್ರತಿ ಎಕರೆಗೆ ಬೀಜ, ಗೊಬ್ಬರ, ಆಳು ಎಂದು ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು, ವ್ಯಾಪಾರಸ್ಥರು ಕೇಳುತ್ತಿರುವ ಅಗ್ಗದ ದರಕ್ಕೆ ಮಾರಾಟ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ವ್ಯಾಪಾರಸ್ಥರು ಕೇಳುತ್ತಿರುವ ದರಕ್ಕೆ ಮಾರಾಟ ಮಾಡಿದರೆ ಭತ್ತ ಬೆಳೆಯಲು ಮಾಡಿದ ಖರ್ಚು ಬಾರದಂತಹ ಪರಿಸ್ಥಿತಿಯಾಗುತ್ತದೆ.

ಎಪಿಎಂಸಿಗೆ ಒಯ್ದು ಭತ್ತ ಮಾರಾಟ ಮಾಡಬೇಕು ಎಂದರೆ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತದೆ. ಅಲ್ಲಿಯೂ ಸೂಕ್ತ ದರ ಸಿಗುತ್ತಿಲ್ಲ. ಹೀಗಾಗಿ ವ್ಯಾಪಾರಸ್ಥರು ಕೇಳುತ್ತಿರುವ ದರಕ್ಕೆ ಮಾರಾಟ ಮಾಡಿದರೆ, ಮಾಡಿದ ಸಾಲ ತೀರಿಸಲು, ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಕೂಡಲೆ ಸರಕಾರ ಭತ್ತ ಬೆಳೆದ ರೈತರ ನೆರವಿಗೆ ಧಾವಿಸಿ, ಭತ್ತಕ್ಕೆ ಸೂಕ್ತ ಬೆಲೆ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ತಿಳಿಸಿದ್ದಾರೆ.

ರಾಣೆಬೆನ್ನೂರು ತಾಲೂಕು ಒಂದರಲ್ಲೇ ಸಾವಿರಾರು ಎಕರೆ ಜಮೀನಿನಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಉಳಿದಂತೆ ಹಾನಗಲ್, ಶಿಗ್ಗಾಂವಿ ಮತ್ತು ಹಿರೇಕೆರೂರು ಭಾಗದಲ್ಲೂ ರೈತರು ಭತ್ತ ಬೆಳೆದಿದ್ದಾರೆ. ಕೆಲವು ರೈತರ ನಿರೀಕ್ಷೆಗೂ ಮೀರಿ ಭರಪೂರ ಭತ್ತ ಬೆಳೆದಿದೆ. ಆದರೆ ಭತ್ತದ ಬೆಳೆಗೆ ಸೂಕ್ತ ದರ ಸಿಗುತ್ತಿಲ್ಲ. ಹೀಗಾಗಿ ಕೂಡಲೆ ಸರಕಾರ ಭತ್ತ ಬೆಳೆದ ರೈತರ ನೆರವಿಗೆ ಧಾವಿಸಿ, ಭತ್ತ ಬೆಳೆದ ರೈತರಿಗೆ ಸೂಕ್ತ ದರ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ.

ಇದನ್ನೂ ಓದಿ:

ಲಾಕ್​ಡೌನ್​ನಿಂದ ಬಾಡುತ್ತಿದೆ ರೈತರ ಬದುಕು; 80 ಸಾವಿರ ಖರ್ಚು ಮಾಡಿ ಬೆಳೆದ ಬೀಟ್ರೂಟ್​ನಿಂದ 80 ರೂ. ಲಾಭವಿಲ್ಲ

CM Yediyurappa PC LIVE: ಹೂವು ಬೆಳೆಗಾರರಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರು, ಕಲಾ ತಂಡಗಳಿಗೆ ಆರ್ಥಿಕ ಸಹಾಯ

Follow us on

Related Stories

Most Read Stories

Click on your DTH Provider to Add TV9 Kannada