ಬೆಲೆ ಕುಸಿತಕ್ಕೆ ಕಂಗಾಲಾದ ವೀಳ್ಯದೆಲೆ ಬೆಳೆಗಾರರು
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಭಾಗದಲ್ಲಿ ಅನೇಕ ರೈತರು ತಲೆಮಾರುಗಳಿಂದಲೂ ವೀಳ್ಯದೆಲೆ ಬೆಳೆದುಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾಕಾದರೂ ವೀಳ್ಯದೆಲೆ ಬೆಳೆದಿದ್ದೇವೋ ಎನ್ನುವ ಬೇಸರದಲ್ಲಿ ಅನ್ನದಾತರು ಇದ್ದಾರೆ.
ಬಾಗಲಕೋಟೆ: ಮಹಾಮಾರಿ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ಇದೀಗ ಬೆಲೆ ಕುಸಿತಕ್ಕೆ ಸಿಕ್ಕು ವೀಳ್ಯದೆಲೆ ಬೆಳೆಗಾರರು ಕಂಗಾಲಾಗಿದ್ದಾರೆ. ಗಾಯದ ಮೇಲೆ ಬರೆ ಎನ್ನುವಂತೆ ಬಳ್ಳಿ ನಿರ್ವಹಣೆ, ಎಲೆ ಕಟಾವು ಮಾಡಲು ಕಾರ್ಮಿಕರ ಸಮಸ್ಯೆಯೂ ತಲೆದೂರಿದ್ದು, ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲು ಆಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಭಾಗದಲ್ಲಿ ಅನೇಕ ರೈತರು ತಲೆಮಾರುಗಳಿಂದಲೂ ವೀಳ್ಯದೆಲೆ ಬೆಳೆದುಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾಕಾದರೂ ವೀಳ್ಯದೆಲೆ ಬೆಳೆದಿದ್ದೇವೋ ಎನ್ನುವ ಬೇಸರದಲ್ಲಿ ಅನ್ನದಾತರು ಇದ್ದಾರೆ. ಕಾರಣ ಕೆಲಸ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ. ಇದರಿಂದ ಬೆಳೆದು ನಿಂತಿರುವ ಬಳ್ಳಿಯನ್ನು ನಿರ್ವಹಣೆ ಮಾಡಿಕೊಂಡು, ಅದನ್ನು ಉಳಿಸಿಕೊಂಡು ಹೋಗುವುದು ರೈತರಿಗೆ ದುಸ್ತರವಾಗಿದೆ.
ತಲೆಮಾರುಗಳಿಂದ ವಿಳ್ಯದೆಲೆ ಬೆಳೆಗಾರರು ಕಂಗಾಲು ಚೊಳಚಗುಡ್ಡ ಸುತ್ತಮುತ್ತ ಸದ್ಯ ಇನ್ನೂರು ಎಕರೆಯಷ್ಟು ವೀಳ್ಯದೆಲೆ ಬೆಳೆ ಇದೆ. ವೀಳ್ಯದೆಲೆ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದರೂ ಇದೀಗ ಬೆಲೆ ಕುಸಿತದಿಂದ ಮಾಡಿದ ಖರ್ಚು ಸಹ ವಾಪಸ್ಸು ಬರದಾಗಿದೆ. ಸದ್ಯ 12 ಸಾವಿರ ಎಲೆ ಇರುವ ಬಂಡಲ್ಗೆ ಕನಿಷ್ಠ ಮೂರು ಸಾವಿರ ರೂ. ಬೆಲೆ ಸಿಕ್ಕರೆ ಕಾರ್ಮಿಕರ ಖರ್ಚು, ನಿರ್ವಹಣೆ ಖರ್ಚು ತೆಗೆದು ಸ್ವಲ್ಪ ಹಣ ಬೆಳೆಗಾರರ ಜೇಬು ಸೇರುತ್ತದೆ. ಆದರೆ ಸದ್ಯ 1500 ರಿಂದ 2,000 ರೂ. ಮಾತ್ರ ಬೆಲೆ ಇದ್ದಿದ್ದರಿಂದ ಯಾವುದೇ ಹಣ ಉಳಿಯುತ್ತಿಲ್ಲ ಎಂದು ಬೆಳೆಗಾರರು ಹೇಳುತ್ತಾರೆ.
ಇನ್ನು ವೀಳ್ಯದೆಲೆಯನ್ನು ಜೂನ್, ಜುಲೈ ವೇಳೆ ತಂಪು ವಾತಾವರಣ ಇದ್ದಾಗ ಬಳ್ಳಿ ನಾಟಿ ಮಾಡುತ್ತಾರೆ. ಆರಂಭದಲ್ಲಿ ಒಂದು ಎಕರೆ ವೀಳ್ಯದೆಲೆ ಬೆಳೆಯಲು ಕನಿಷ್ಠ 50 ಸಾವಿರ ರೂ. ಖರ್ಚು ಮಾಡುತ್ತಾರೆ. ಬಳಿಕ 10 ತಿಂಗಳು ಕಾಲ ಬಳ್ಳಿಯನ್ನು ಬೆಳೆಸಬೇಕು. ಇದಕ್ಕೆ ನೀರು, ಗೊಬ್ಬರ, ಔಷಧಿ, ಕಾರ್ಮಿಕರ ಖರ್ಚು ಸೇರಿ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಹೀಗಾಗಿ ರೈತರಿಗೆ ಒಂದು ಬಂಡಲ್ಗೆ ಕನಿಷ್ಠ 3 ಸಾವಿರ ರೂ. ಬೆಲೆ ಸಿಗಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ದರ ಸಿಗುತ್ತಿಲ್ಲ. ಕಳೆದ ವರ್ಷ ಕೊರೊನಾ ಮಹಾಮಾರಿ ಹೊಡೆತಕ್ಕೆ ಸಿಕ್ಕು ವೀಳ್ಯದೆಲೆ ಮಾರುಕಟ್ಟೆ ಇಲ್ಲದೇ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಈಗ ಮಾರುಕಟ್ಟೆ ತೆರೆದಿದ್ದರೂ ಬೆಲೆ ಚೇತರಿಕೆ ಕಾಣಿಸುತ್ತಿಲ್ಲ. ಇದರಿಂದ ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ. ಇದರ ಜೊತೆಗೆ ಕಾರ್ಮಿಕ ಸಮಸ್ಯೆಯಂತೂ ಹೇಳತೀರದ್ದಾಗಿದೆ. ನಾಲ್ಕೈದು ಗಂಟೆಯ ಕೆಲಸಕ್ಕೆ 250 ಕೂಲಿ ಕೊಟ್ಟರೂ ಎಲೆ ಕಟಾವು ಮಾಡಿ, ಬಂಡಲ್ ಕಟ್ಟಲು ಕಾರ್ಮಿಕರು ಸಿಗುತ್ತಿಲ್ಲವಂತೆ. ಇದರಿಂದ ಬಳ್ಳಿ ನಿರ್ವಹಣೆಗೂ ತೊಂದರೆ ಆಗಿದೆ. ಸರ್ಕಾರ ಎಲೆ ಬಳ್ಳಿ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಬೇಕು. ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ವೀಳ್ಯದೆಲೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ
ಶುಂಠಿ ಧಾರಣೆ ಕುಸಿತ.. ಬೆಳೆಗಾರರು ಕಂಗಾಲು; ವಾಣಿಜ್ಯ ಬೆಳೆಯ ಹಿಂದೆ ಬಿದ್ದು ಕೈ ಸುಟ್ಟುಕೊಂಡ ಚಿಕ್ಕಬಳ್ಳಾಪುರ ರೈತರು