ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿದ್ದೇಬಂತು 53 ವರ್ಷವಾದರೂ ಕೋರ್ಟಿನಲ್ಲಿ ಇತ್ಯರ್ಥವಾಗಲಿಲ್ಲ ಪ್ರಕರಣ! ಕೊನೆಗೆ ಏನಾಯ್ತು?
Property Dispute: ಇಡೀ ಪ್ರಕರಣದ ಮೂಲ ಪುರುಷ ಟಿ.ಎಲ್.ಉಪಾಧ್ಯಾಯ. ಇವರಿಗೆ 5 ಜನ ಗಂಡು ಮಕ್ಕಳು ಮತ್ತು 4 ಜನ ಹೆಣ್ಣು ಮಕ್ಕಳು. 1953ರಲ್ಲಿ ಮೈಸೂರಿನಲ್ಲಿರುವ ಮನೆ, ಅಂಗಡಿ ಮಳಿಗೆಗಳು ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಹತ್ತಾರು ಎಕರೆ ಜಮೀನನ್ನು 5 ಜನ ಗಂಡು ಮಕ್ಕಳಿಗೆ ಹಂಚಿಕೆ ಮಾಡಲಾಗಿತ್ತು. ಆಗ ಉಳಿದ ಹೆಣ್ಣು ಮಕ್ಕಳು ಕೂಡ ತಂದೆ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಪಾಲು ಇರಲಿಲ್ಲ.

ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅನ್ನೋ ಮಾತು ಅಕ್ಷರಶಃ ಸತ್ಯ. ಇದಕ್ಕೆ ಸಾಕ್ಷಿ ಮೈಸೂರಿನ ಈ ಪ್ರಕರಣ. ಅದು ಐದು ತಲೆಮಾರುಗಳ ವ್ಯಾಜ್ಯ (Family dispute), ಮೂರು ತಲೆಮಾರಿನ ಜನ ಆಡಿಕೊಂಡಿದ್ದ ಜಗಳ. ಕೊನೆಗೂ ಸುಖಾಂತ್ಯವಾಗಿದೆ. 53 ವರ್ಷಗಳು ಕೋರ್ಟ್ ನಲ್ಲಿ ಬಗೆ ಹರಿಯದ ಸಮಸ್ಯೆಯನ್ನು ನಾಲ್ಕೇ ದಿನದಲ್ಲಿ ಬಗೆಹರಿಸಲಾಗಿದೆ. ಶಿಸ್ತಿನಿಂದ ಒಂದೇ ಕುಟುಂಬದ ಅಷ್ಟೂ ಸದಸ್ಯರು ಭಾಗವಹಿಸಿದ್ದರು. ವಿಶೇಷ ಅಂದ್ರೆ ಇವರೆಲ್ಲಾ ಐದು ತಲೆ ಮಾರಿನವರು. ಇವರೆಲ್ಲಾ ಒಂದೇ ಸಲ ಒಂದೇ ಕಡೆ ಮೈಸೂರು ನ್ಯಾಯಾಲಯದಲ್ಲಿ ಸೇರಿ ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಹೌದು ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ (Lok Adalat) ಇವರೆಲ್ಲಾ ಒಟ್ಟಿಗೆ ಸೇರಿದ್ದರು. ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್. ರಘುನಾಥ್ ನೇತೃತ್ವದಲ್ಲಿ (Principal District and Sessions Judge M.L. Raghunath) ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಅತ್ಯಂತ ಹಳೆಯ ಹಾಗೂ ಜಟಿಲ ಪ್ರಕರಣ (Property Dispute) ಇತ್ಯರ್ಥ ಮಾಡಲಾಗಿದೆ(Mysuru District Legal Services Authority).
ಅದು ಮೈಸೂರಿನ ಹೃದಯ ಭಾಗ ಸಯ್ಯಾಜಿರಾವ್ ರಸ್ತೆಯ ಆಸ್ತಿ. ಇದೇ ಆಸ್ತಿ ಭಾಗ ಮಾಡಿಕೊಳ್ಳುವ ಸಂಬಂಧ 1953ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. 53 ವರ್ಷಗಳಿಂದ ಈ ಬಗ್ಗೆ ಮೈಸೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತಿತ್ತು. ಪ್ರಕರಣದಲ್ಲಿ ಒಟ್ಟು 40 ಮಂದಿ ಕಕ್ಷಿದಾರರು ಭಾಗಿಯಾಗಿದ್ದರು. ಪ್ರಕರಣ ಇತ್ಯರ್ಥವಾಗದೇ ನನೆಗುದಿಗೆ ಬಿದ್ದಿತ್ತು. ತಂದೆ, ಮಕ್ಕಳು, ಮೊಮ್ಮಕ್ಕಳು ಸಮೇತ ಕುಟುಂಬದ ಎಲ್ಲಾ ಸದಸ್ಯರು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದರು. ಇದೀಗ ವಕೀಲರು, ನ್ಯಾಯಾಧೀಶರ ಸಲಹೆಯಂತೆ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ!
ಇಡೀ ಪ್ರಕರಣದ ಮೂಲ ಪುರುಷ ಟಿ.ಎಲ್.ಉಪಾಧ್ಯಾಯ. ಇವರಿಗೆ 5 ಜನ ಗಂಡು ಮಕ್ಕಳು ಮತ್ತು 4 ಜನ ಹೆಣ್ಣು ಮಕ್ಕಳು. 1953ರಲ್ಲಿ ಮೈಸೂರಿನಲ್ಲಿರುವ ಮನೆ, ಅಂಗಡಿ ಮಳಿಗೆಗಳು ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಹತ್ತಾರು ಎಕರೆ ಜಮೀನನ್ನು 5 ಜನ ಗಂಡು ಮಕ್ಕಳಿಗೆ ಹಂಚಿಕೆ ಮಾಡಲಾಗಿತ್ತು. ಆಗ ಉಳಿದ ಹೆಣ್ಣು ಮಕ್ಕಳು ಕೂಡ ತಂದೆ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಪಾಲು ಇರಲಿಲ್ಲ. ಆದರೂ ಪ್ರಕರಣ ಇಲ್ಲಿವರೆಗೆ ಇತ್ಯರ್ಥ ಆಗದೆ ಹಾಗೆಯೇ ಉಳಿದುಬಿಟ್ಟಿತ್ತು.
ಆ ಆಸ್ತಿಗಾಗಿ ಆರಂಭದಲ್ಲಿ ಕೇಸ್ ಹಾಕಿದ ಒಬ್ಬರೂ ಈಗ ಉಳಿದಿಲ್ಲ. ಈಗಿರುವ ಮೂರನೇ ತಲೆಮಾರಿನವರಿಗೂ 80 ವರ್ಷ ದಾಟಿದೆ. ಈಗಾಗಿ ತಮ್ಮ ಮುಂದಿನ ಪೀಳಿಗೆಯಾದರೂ ನೆಮ್ಮದಿಯಾಗಿರಲೆಂದು ಲೋಕ್ ಅದಾಲತ್‌ನಲ್ಲಿ ವ್ಯಾಜ್ಯ ಬಗೆಹರಿಸಿಕೊಂಡು ಹೆಣ್ಣು ಮಕ್ಕಳ ಆದಿಯಾಗಿ ಎಲ್ಲರೂ ಆಸ್ತಿ ಹಂಚಿಕೊಂಡಿದ್ದಾರೆ.
ಆಸ್ತಿ ಹಂಚಿಕೆಯಿಂದಾಗಿ ಕುಟುಂಬದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 55,133 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. ಇದರಲ್ಲಿ 32 ಡೈವರ್ಸ್ ಕೇಸ್ ಕೂಡ ಸೇರಿದೆ. ಬಹುಶಃ ಈ ಜಟಿಲ ಪ್ರಕರಣ ಇಲ್ಲಿ ಬಗೆಹರಿಯದಿದ್ದರೆ 100 ವರ್ಷವಾದರೂ ಎಲ್ಲಿಯೂ ಬಗೆಹರಿಯುತ್ತಿರಲಿಲ್ಲ. ಒಟ್ಟಾರೆ ತಡವಾಗಿಯಾದರೂ ಸರಿ ಜಟಿಲ ಪ್ರಕರಣವೊಂದು ಅಂತ್ಯವಾಗಿದ್ದು ಎಲ್ಲರ ಖುಷಿಗೆ ಕಾರಣವಾಗಿದೆ. -ರಾಮ್, ಟಿವಿ9, ಮೈಸೂರು
Published On - 9:12 pm, Mon, 14 March 22
