ರಾಜಕೀಯ ಹೋರಾಟ ಕೋರ್ಟ್ ಹೊರಗೆ ಇಟ್ಟುಕೊಳ್ಳಿ: ಶಿವಾನಂದ ಪಾಟೀಲ್ ಗೆ ಸುಪ್ರೀಂ ಚಾಟಿ
ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಸಚಿವ ಶಿವನಾಂದ ಪಾಟೀಲ್ (Shivanand Patil) ಅವರ ನಡೆಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಸುಪ್ರೀಂಕೋರ್ಟ್ ಶಿವಾನಂದ ಪಾಟೀಲ್ ಅರ್ಜಿಯನ್ನು ವಜಾ ಮಾಡಿದೆ. ಅಲ್ಲದೇ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ, (ಆಗಸ್ಟ್ 04): ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಸಚಿವ ಶಿವನಾಂದ ಪಾಟೀಲ್ (Shivanand Patil) ಅವರ ನಡೆಗೆ ಸುಪ್ರೀಂ ಕೋರ್ಟ್ (supreme court) ಚಾಟಿ ಬೀಸಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಶಿವಾನಂದ ಪಾಟೀಲ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು ವಜಾಗೊಳಿಸಿದೆ. ವಿಚಾರಣೆ ವೇಳೆ, ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, “ನಿಮ್ಮ ರಾಜಕೀಯ ಹೋರಾಟಗಳನ್ನು ನ್ಯಾಯಾಲಯದ ಹೊರಗೆ ಮಾಡಿ, ಇಲ್ಲಿಗೆ ತರಬೇಡಿ,” ಎಂದು ಖಾರವಾಗಿ ಹೇಳುವ ಮೂಲಕ ರಾಜಕೀಯ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಸಂಬಂಧ ಸಚಿವ ಶಿವನಾಂದ ಪಾಟೀಲ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನಿಂದು ಸಿಜೆಐ ಬಿ.ಆರ್ ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಈ ವೇಳೆ ನಿಮ್ಮ ರಾಜಕೀಯ ಹೋರಾಟ ಕೋರ್ಟ್ ಹೊರಗೆ ಇಟ್ಟುಕೊಳ್ಳಿ. ಕೋರ್ಟ್‌ಗೆ ರಾಜಕೀಯ ವಿಚಾರ ಯಾಕೆ ತರುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ದಂಡ ಸಹಿತ ಯಾಕೆ ಈ ಅರ್ಜಿಯನ್ನ ವಜಾ ಮಾಡಬಾರದು? ಅರ್ಜಿದಾರರು ಸಚಿವರಲ್ಲವೇ 1 ಲಕ್ಷ ರೂ. ದಂಡ ಯಾಕೆ ವಿಧಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿತು. ಸಿಜೆಐ ಆಕ್ಷೇಪದ ಬೆನ್ನಲ್ಲೇ ಸಚಿವ ಶಿವಾನಂದ ಪಾಟೀಲ್ ಪರ ವಕೀಲರು ಅರ್ಜಿ ವಾಪಸ್ ಪಡೆದಿದ್ದಾರೆ.
ಇತ್ತೀಚಿನ ಲೋಕಸಭೆ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಯತ್ನಾಳ್ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶಿವಾನಂದ ಪಾಟೀಲ್ ಅವರು, ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಚಿವ ಶಿವಾನಂದ ಪಾಟೀಲ್ ಅವರು ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈ ಮೊಕದ್ದಮೆಯನ್ನು ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಾಟೀಲ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Mon, 4 August 25




