AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ನೇತೃತ್ವದಲ್ಲಿ ಮೊದಲ GBA ಸಭೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರ ಜಿಬಿಎಗೆ ಹಸ್ತಾಂತರ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ, 5 ಹೊಸ ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮೊದಲ ಸಭೆ ಮಾಡಲಾಗಿದ್ದು, ಬೆಂಗಳೂರಿನ 1.40 ಕೋಟಿ ಜನರಿಗೆ ಸುಗಮ ಆಡಳಿತ ಮತ್ತು ಸಮರ್ಪಕ ಅಭಿವೃದ್ಧಿ ಒದಗಿಸುವುದು ಇದರ ಮುಖ್ಯ ಉದ್ದೇಶವೆಂದು ತಿಳಿಸಿದ್ದಾರೆ.

ಸಿಎಂ ನೇತೃತ್ವದಲ್ಲಿ ಮೊದಲ GBA ಸಭೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರ ಜಿಬಿಎಗೆ ಹಸ್ತಾಂತರ
ಗ್ರೇಟರ್ ಬೆಂಗಳೂರು ಮೊದಲ ಸಭೆ
ಗಂಗಾಧರ​ ಬ. ಸಾಬೋಜಿ
|

Updated on:Oct 10, 2025 | 8:52 PM

Share

ಬೆಂಗಳೂರು, ಅಕ್ಟೋಬರ್​ 10: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾದ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಶುಕ್ರವಾರ ಮೊದಲು ಸಭೆ ನಡೆಯಿತು. ಈ ವೇಳೆ ಶುದ್ಧ ನೀರಿನ ಪೂರೈಕೆ, ಸ್ವಚ್ಚತೆ, ಸಂಚಾರ ವ್ಯವಸ್ಥೆ ಸೇರಿದಂತೆ ಬೆಂಗಳೂರಿಗರ ಜೀವನಮಟ್ಟ ಸುಧಾರಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಬೆಂಗಳೂರಿನ ಅಭಿವೃದ್ಧಿ ಒಲ್ಲದವರಿಗೆ ಸಭೆಯನ್ನು ವಿರೋಧಿಸುತ್ತಾರೆ ಎಂದು ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

ಐದು ಕಾರ್ಪೋರೇಷನ್‌ಗಳ ರಚನೆ

ಈ ಬಗ್ಗೆ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಮಸ್ತ ಜನರಿಗೆ ಸುಗಮ ಆಡಳಿತ, ಸಮರ್ಪಕ‌ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ತಂದು ಐದು ಕಾರ್ಪೋರೇಷನ್‌ಗಳನ್ನು ರಚನೆ ಮಾಡಿದ್ದೇವೆ ಎಂದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​

ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ತಲುಪಿದೆ. ಒಂದು ಕಾರ್ಪೋರೇಷನ್‌ನಿಂದ ಇಷ್ಟು ದೊಡ್ಡ ನಗರದ ಸಮರ್ಪಕ ಅಭಿವೃದ್ಧಿ ಬಹಳ ದೊಡ್ಡ ಸವಾಲಿನದ್ದು. ಈ ಚರ್ಚೆ ಹಲವು ವರ್ಷಗಳಿಂದ ಇದ್ದೇ ಇದೆ. ಒಂದಕ್ಕಿಂತ ಹೆಚ್ಚು ಕಾರ್ಪೋರೇಷನ್‌ಗಳಿದ್ದರೆ ವೇಗದ ಅಭಿವೃದ್ಧಿ ಸಾಧ್ಯ ಎನ್ನುವ ಕಾರಣಕ್ಕೆ ಈ ಬಗ್ಗೆ ವರದಿ ಕೊಡಲು ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಸಮಿತಿ ರಚಿಸಿದ್ದೆ. ನಂತರ ಬಂದ ಸರ್ಕಾರಗಳು ಈ ದಿಕ್ಕಿನಲ್ಲಿ ಗಮನ ಹರಿಸಲೇ ಇಲ್ಲ. ಹೀಗಾಗಿ ನಮ್ಮ ಸರ್ಕಾರವೇ ಪುನಃ ಅಧಿಕಾರಕ್ಕೆ ಬಂದ ಬಳಿಕ ಸಮಿತಿಯನ್ನು ಪುನರ್ ರಚಿಸಿತು. ಈ ಸಮಿತಿ ವರದಿಯಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 5 ನಗರ ಪಾಲಿಕೆಗಳ ರಚನೆಯಾಗಿವೆ ಎಂದು ಸಿಎಂ ತಿಳಿಸಿದ್ದಾರೆ.

ಸುಗಮ ಕಸ ವಿಲೇವಾರಿ ಆಗಬೇಕು. ಪಾಲಿಕೆಗಳ ಆದಾಯ ಹೆಚ್ಚಳ ಆಗಬೇಕು. ಟ್ರಾಫಿಕ್ ದಟ್ಟಣೆ ನಿವಾರಣೆ ಆಗಬೇಕು. ನಗರವನ್ನು ಚೊಕ್ಕವಾಗಿಡಬೇಕು. ರಸ್ತೆ, ಚರಂಡಿ, ಫುಟ್ಪಾತ್, ಪಾರ್ಕ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಮಾದರಿ ಪಾಲಿಕೆಗಳನ್ನಾಗಿ ರೂಪಿಸಬೇಕು ಎನ್ನುವ ಮಹತ್ತರ ಗುರಿ ಮತ್ತು ಉದ್ದೇಶಳನ್ನು ಇಟ್ಟುಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಾರ್ಡ್ ಪುನರ್ ವಿಂಗಡಣೆ: 198 ರ ಬದಲಿಗೆ ಅಸ್ತಿತ್ವಕ್ಕೆ ಬರಲಿವೆ 400 ವಾರ್ಡ್

ನಾವು ನಿರೀಕ್ಷೆ ಮಾಡಿರುವ ಈ ಗುರಿ ಮತ್ತು ಉದ್ದೇಶ ನೆರವೇರಲು ಬಿಡಬ್ಲ್ಯೂಎಸ್ಎಸ್​​ಬಿ, ಬಿಡಿಎ, ಬೆಸ್ಕಾಂ ಸೇರಿ ಎಲ್ಲಾ ಇಲಾಖೆಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜೊತೆ ಪರಸ್ಪರ ಸಹಕಾರ ಸಹಯೋಗವನ್ನು ಅತ್ಯಂತ ಕಡ್ಡಾಯವಾಗಿ ಆಚರಣೆಗೆ ತರಬೇಕು.

ಐದು ನಗರಪಾಲಿಕೆಗಳಿಗೆ ಸಮರ್ಪಕವಾದ ಆಡಳಿತ ಕಚೇರಿಗಳನ್ನು ನಿರ್ಮಿಸಲು ಸ್ಥಳವನ್ನು ಗುರುತಿಸಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಆಯಾ ಕಾರ್ಪೊರೇಶನ್‌ಗಳು ತಮ್ಮ ಹಂತದಲ್ಲಿಯೇ ಕಸ ವಿಲೇವಾರಿ ಸಮರ್ಪಕವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದೇನೆ.

ಎಲ್ಲಾ ನಗರಸಭೆ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು. ಕಸ ವಿಲೇವಾರಿ, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಫುಟ್‌ಪಾತ್‌ಗಳು ಸಾಧ್ಯವಾದಷ್ಟು ವಿಸ್ತಾರವಾಗಿರುವಂತೆ ನೋಡಿಕೊಳ್ಳಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾದರೆ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ. ಇದಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ್ದೇನೆ ಎಂದರು.

ಜಿಬಿಎ ರಚನೆ ಹಿಂದೆ ರಾಜಕೀಯ ಉದ್ದೇಶವಿಲ್ಲ

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೊ ಲೈನ್‌ನಲ್ಲಿ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿಯನ್ನು ಹೆಚ್ಚಿಸುವ ಕುರಿತು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ಸಣ್ಣ ಬಸ್ಸುಗಳನ್ನು ನಿಯೋಜಿಸುವ ಬಗ್ಗೆ ಪರಿಶೀಲಿಸಲು ಸಾರಿಗೆ ಸಚಿವರಿಗೆ ಸೂಚಿಸಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಜನರಿಗೆ ಅತ್ಯುತ್ತಮ ನಾಗರಿಕ ಸೌಲಭ್ಯ, ಉತ್ತಮ ಆಡಳಿತ ನೀಡಬೇಕೆಂಬ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದ್ದೇನೆ ಎಂದಿದ್ದಾರೆ.

ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಇಲ್ಲಿ ಅವಕಾಶವಿದೆ. ಆದರೆ ಕೆಲವು ಜನಪ್ರತಿನಿಧಿಗಳು ಈ ಅವಕಾಶ ಕಳೆದುಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ವಿರೋಧವಿರುವವರು, ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧವಿರುವವರು ಈ ಸಭೆಯನ್ನು ಬಹಿಷ್ಕರಿಸಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರು: ಇನ್ಮುಂದೆ ಜಿಬಿಎ ವ್ಯಾಪ್ತಿಯಲ್ಲಿ 1200 ಚದರ ಅಡಿ ವರೆಗಿನ ನಿವೇಶನಗಳ ವಸತಿ ಕಟ್ಟಡಗಳಿಗೆ ಒಸಿ, ಸಿಸಿ ಅಗತ್ಯವಿಲ್ಲ!

ಚರ್ಚೆ-ಸಂವಾದದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಏನೇ ವಿರೋಧಗಳಿದ್ದರೂ ಸಭೆಗೆ ಹಾಜರಾಗಿ ಚರ್ಚೆ ನಡೆಸಿ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಬೇಕು. ಅಧಿಕಾರ ವಿಕೇಂದ್ರೀಕರಣವನ್ನು ವಿರೋಧಿಸುವವರು ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಒಲ್ಲದವರು ಸಭೆಯನ್ನು ವಿರೋಧಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯಕ್ಕೆ ಇದು ಐತಿಹಾಸಿಕ ದಿನ: ಡಿಸಿಎಂ ಡಿ.ಕೆ.ಶಿವಕುಮಾರ್

ಜಿಬಿಎ ಮೊದಲ ಸಭೆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದು, ಇಡೀ ಬೆಂಗಳೂರು ನಗರಕ್ಕೆ, ಕರ್ನಾಟಕ ರಾಜ್ಯಕ್ಕೆ ಇದು ಐತಿಹಾಸಿಕ ದಿನ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಇದ್ದ ಅಧಿಕಾರ ಜಿಬಿಎಗೆ ಹಸ್ತಾಂತರಿಸಲಾಗಿದ್ದು, ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವೇ ಬಿಡಿಎ ಕೆಲಸ ನಿರ್ವಹಿಸುತ್ತೆ ಎಂದಿದ್ದಾರೆ.

ಲೋಕಲ್ ಪ್ಲ್ಯಾನಿಂಗ್ ವ್ಯಾಪ್ತಿಯಲ್ಲಿ ಬರುವ ಟಿಡಿಆರ್​ ಕೆಲಸವನ್ನೂ ಜಿಬಿಎ ಮಾಡುತ್ತೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಜೆಟ್ ಮಂಡನೆಗೂ ನಿರ್ಧರಿಸಿದ್ದೇವೆ. ಕರಡು ಯೋಜನೆ, ಕ್ರಿಯಾಯೋಜನೆಗೂ ಪ್ರಸ್ತಾವನೆ ಮಾಡಿದ್ದೇವೆ. ಬೆಸ್ಕಾಂ, ಬಿಎಂಟಿಸಿ, ಅಗ್ನಿಶಾಮಕ ದಳ ಜಿಬಿಎ ವ್ಯಾಪ್ತಿಯಲ್ಲೇ ಕೆಲಸ ಮಾಡುತ್ತೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:50 pm, Fri, 10 October 25

‘ಮಹಾನಟಿ’ ಶೋಗೆ ಫಿನಾಲೆ; ಪರ್ಫಾರ್ಮೆನ್ಸ್ ನೋಡಿ ಜಡ್ಜ್​​ಗಳು ಫಿದಾ
‘ಮಹಾನಟಿ’ ಶೋಗೆ ಫಿನಾಲೆ; ಪರ್ಫಾರ್ಮೆನ್ಸ್ ನೋಡಿ ಜಡ್ಜ್​​ಗಳು ಫಿದಾ
ಊರ ತುಂಬೆಲ್ಲ ಕುಂಕುಮ-ನಿಂಬೆಹಣ್ಣು, ಜಾನುವಾರುಗಳ ಆಕಸ್ಮಿಕ ಸಾವು!
ಊರ ತುಂಬೆಲ್ಲ ಕುಂಕುಮ-ನಿಂಬೆಹಣ್ಣು, ಜಾನುವಾರುಗಳ ಆಕಸ್ಮಿಕ ಸಾವು!
ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ವಿಳಂಬ
ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ವಿಳಂಬ
ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ: ಬಾಗಲಕೋಟೆಯಲ್ಲಿ ಹೆದ್ದಾರಿ ಬಂದ್
ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ: ಬಾಗಲಕೋಟೆಯಲ್ಲಿ ಹೆದ್ದಾರಿ ಬಂದ್
ಕ್ರಾಂತಿ ಚರ್ಚೆ ಮಧ್ಯೆ ರಾಜಣ್ಣ ನಿವಾಸದಲ್ಲಿಂದು ಡಿನ್ನರ್, ಸಿಎಂ ಭಾಗಿ
ಕ್ರಾಂತಿ ಚರ್ಚೆ ಮಧ್ಯೆ ರಾಜಣ್ಣ ನಿವಾಸದಲ್ಲಿಂದು ಡಿನ್ನರ್, ಸಿಎಂ ಭಾಗಿ
ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್
ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ
ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ
ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ
ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ