
ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಆದ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಸಜ್ಜಾಗಿದೆ. ಪ್ರತೀ ಲೀಟರ್‌ಗೆ ಬರೋಬ್ಬರಿ 10 ರೂ ಏರಿಕೆಗೆ ಒಕ್ಕೂಟ ಆಗ್ರಹಿಸಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಬೆನ್ನಲ್ಲೇ ಇತ್ತ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹಾಲಿನ ಕ್ವಾಲಿಟಿ ಚೆಕ್ಗೆ ಮುಂದಾಗಿದೆ.
ಹಾಲಿನ ದರ ಏರಿಕೆ ಚರ್ಚೆ ನಡುವೆಯೇ ಗುಣಮಟ್ಟದ ಮೇಲೂ ಎಫ್ಎಸ್ಎಸ್ಎಐ ಇಲಾಖೆ ಕಣ್ಣಿಟ್ಟಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ, ಸಂಯೋಜನೆ, ಲೇಬಲಿಂಗ್ ಸೇರಿದಂತೆ ಅಗತ್ಯ ಮಾನದಂಡಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಾಲು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಇಲಾಖೆ ಮುಂದಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಾಲಿನ ಉತ್ಪನ್ನಗಳಾದ ಹಾಲಿನ ಪೌಡರ್, ಪನ್ನೀರ್ ಸೇರಿದಂತೆ ವಿವಿಧ ಉತ್ಪನ್ನಗಳ ಮಾದರಿ ಸಂಗ್ರಹಿಸಿ ಲ್ಯಾಬ್ ಟೆಸ್ಟ್‌ಗೆ ಕಳುಹಿಸಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: ಕರ್ನಾಟಕದ ಜನತೆಗೆ ಮತ್ತೊಂದು ದರ ಏರಿಕೆ ಬರೆ: ನಂದಿನಿ ಹಾಲಿನ ದರ ಹೆಚ್ಚಳ ಬಹುತೇಕ ಖಚಿತ
ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿರುವ ಮಾದರಿಯನ್ನು ಪ್ರಯೋಗಾಲಯದಲ್ಲಿ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಬಗ್ಗೆ ಪರಿಶೀಲನೆ ನಡೆಯಲಿದೆ. ಇನ್ನು ಅಂಗನವಾಡಿಗಳಿಗೆ ಸರಬರಾಜು ಆಗುವ ಪೌಡರ್, ಪನ್ನೀರ್ ಗುಣಮಟ್ಟದ ಮೇಲೂ ನಿಗಾ ಇಡಲಾಗುತ್ತಿದೆ. ಹಾಲಿನಿಂದಲೇ ತಯಾರಾದ ಪನ್ನೀರಾ ಅಥವಾ ಹಾಲಿನ ಅಂಶವಿಲ್ಲದ ಪದಾರ್ಥ ಬಳಸಿ ತಯಾರಿಸಲಾಗಿದೆಯೇ ಎಂಬುವುದರ ಕುರಿತು FSSAI ಪರೀಕ್ಷೆ ನಡೆಸುತ್ತಿದೆ. ಒಂದೇ ವೇಳೆ ಲ್ಯಾಬ್ ವರದಿಯಲ್ಲಿ ಮಾನದಂಡ ಉಲ್ಲಂಘನೆ ಕಂಡು ಬಂದರೆ ಕ್ರಮಕೈಗೊಳ್ಳಲಾಗುತ್ತದೆ.
ಇನ್ನು ರಾಜ್ಯದಾದ್ಯಂತ ಹಾಲಿನ ಡೇರಿ ತಪಾಸಣೆಗೆ ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ಹಾಲಿನ ಗುಣಮಟ್ಟ ಪರಿಶೀಲನೆಗೆ ರಾಜ್ಯದಲ್ಲಿ 23 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಡೇರಿಗಳು, ಹಾಲು ಸಂಗ್ರಹ ಕೇಂದ್ರಗಳು ಹಾಗೂ ಹಾಲಿನ ಉತ್ಪನ್ನಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಹಾಲಿನಲ್ಲಿ ಕಲಬೆರಕೆ ಹಾಗೂ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಇಲಾಖೆ ಅಲರ್ಟ್ ಆಗಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವ ಹಾಲಿನ ಮೇಲೂ ತೀವ್ರ ನಿಗಾ ಇಡಲಾಗಿದೆ. ಆ ಮೂಲಕ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಹಾಲು ಸಿಗುವಂತೆ ಆಹಾರ ಸುರಕ್ಷತಾ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಹಾಲು, ನಂದಿನಿ ಉತ್ಪನ್ನಗಳ ದರ ಏರಿಕೆಯ ಸುಳಿವು ನೀಡಿದ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್
ಇನ್ನು ಹಾಲು, ಪನ್ನೀರ್, ಹಾಲಿನ ಪೌಡರ್ ಸೇರಿದಂತೆ ಉತ್ಪನ್ನಗಳ ಮಾದರಿ ಸಂಗ್ರಹಿಸಿ ಲ್ಯಾಬ್ ಪರೀಕ್ಷೆ ಮಾಡಲಾಗುವುದು. ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.