AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag News: ನಕಲಿ ಸೂರ್ಯಕಾಂತಿ ಬೀಜ ಕೊಟ್ಟು ಅನ್ನದಾತರಿಗೆ ಮೋಸ ಆರೋಪ; ಕಂಪನಿ, ಕೃಷಿ‌ ಇಲಾಖೆ ವಿರುದ್ಧ ಕೆಂಡಕಾರಿದ ರೈತರು

ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಬರಗಾಲದ ಛಾಯೆ ಆವರಿಸಿದೆ. ಇದ್ರಿಂದ ಕಂಗೆಟ್ಟ ರೈತರು ನೀರಾವರಿ ಮೂಲಕವಾದ್ರೂ ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳಬೇಕೆಂದು ಸೂರ್ಯಕಾಂತಿ ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಸಿಜೆಂಟಾ ಸೀಡ್ಸ್ ಕಂಪನಿ ಬೀಜ ಬಿತ್ತಿದ ರೈತರ ಬದುಕು ಇದೀಗ ಬೀದಿಗೆ ಬಂದಿದ್ದು, ಕಂಪನಿ ಹಾಗೂ ಕೃಷಿ‌ ಇಲಾಖೆ ವಿರುದ್ಧ ಕೆಂಡಕಾರಿದ್ದಾರೆ.

Gadag News: ನಕಲಿ ಸೂರ್ಯಕಾಂತಿ ಬೀಜ ಕೊಟ್ಟು ಅನ್ನದಾತರಿಗೆ ಮೋಸ ಆರೋಪ; ಕಂಪನಿ, ಕೃಷಿ‌ ಇಲಾಖೆ ವಿರುದ್ಧ ಕೆಂಡಕಾರಿದ ರೈತರು
ಸೂರ್ಯಕಾಂತಿ ಬೆಳೆ ಬೆಳೆದು ಕೈ ಸುಟ್ಟಿಕೊಂಡ ರೈತರು
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jun 25, 2023 | 12:39 PM

Share

ಗದಗ: ರೈತರ ಹಣೆಬರಹವೇ ಸರಿ ಇಲ್ಲವಂತೆ ಕಾಣುತ್ತಿದೆ. ಮಳೆ ಬಂದರೂ ಕಷ್ಟ, ಬರದಿದ್ದರು ಕಷ್ಟ ಎಂಬಂತಾಗಿದೆ. ಅಷ್ಟೋ ಇಷ್ಟೋ ನೀರಾವರಿ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡ ರೈತರ ಬದುಕು ಈಗ ಮಣ್ಣು ಪಾಲಾಗಿದೆ. ಹೌದು ಮಹಾರಾಷ್ಟ್ರ (Maharashtra) ಮೂಲದ ಕಂಪನಿಯೊಂದು ಕಳಪೆ ಬೀಜ ಕೊಟ್ಟು ರೈತರಿಗೆ ಮೋಸ ಮಾಡಿದೆ. ಈಗ ಸೂರ್ಯಕಾಂತಿ ಬೆಳೆದ(Sunflower Cultivation) ರೈತರು ಕಂಗಾಲಾಗಿದ್ದಾರೆ. ಭರ್ಜರಿ ಸೂರ್ಯಕಾಂತಿ ಹೂವು ಬಿಟ್ಟರೂ ಕಾಳು ಇಲ್ಲ. ಇದೀಗ ಬೀಜ ಕೊಟ್ಟ ಕಂಪನಿ ವಿರುದ್ಧ ರೈತರು ಕೆಂಡಾಮಂಡಲವಾಗಿದ್ದಾರೆ. ಆದ್ರೆ, ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ಕಂಪನಿಗೂ ನಮಗೂ ಸಂಬಂಧವಿಲ್ಲವೆಂದು ಕೈತೊಳೆದುಕೊಂಡಿದ್ದು, ರೈತರ ಕೋಪಕ್ಕೆ ಕಾರಣವಾಗಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆದ ಸೂರ್ಯಕಾಂತಿ ಸರ್ವನಾಶವಾಗಿದೆ. ಮಹಾರಾಷ್ಟ್ರ ಮೂಲದ ಕಂಪನಿಯಾದ ಸಿಜೆಂಟಾ ಕಂಪನಿಯ SB 293 ಬೀಜ ಬಿತ್ತನೆ ಮಾಡಿ ಪೇಠಾಲೂರ ಗ್ರಾಮದ ರೈತರು ಮೋಸ ಹೋಗಿದ್ದಾರೆ. ಕಳೆದು 3 ವರ್ಷಗಳಿಂದ ಅತಿವೃಷ್ಠಿಯಿಂದ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಈ ವರ್ಷ ಮೊದಲೇ ಮುಂಗಾರು ಮಳೆ ಇಲ್ಲದೇ ಅನ್ನದಾತರು ಕಂಗಾಲಾಗಿದ್ದಾರೆ. ಈ ನಡುವೆ ಅಷ್ಟೋ ಇಷ್ಟು ನೀರಾವರಿ ಮಾಡಿ ಬದುಕು ಕಟ್ಟಿಕೊಳ್ಳಬೇಕೆಂದುಕೊಂಡಿದ್ದರು.

ಇದನ್ನೂ ಓದಿ:Farmers Protest: ಸೂರ್ಯಕಾಂತಿ ಬೀಜಕ್ಕೆ ಎಂಎಸ್‌ಪಿ ಬೇಡಿಕೆ: ಕುರುಕ್ಷೇತ್ರದಲ್ಲಿ ಹರ್ಯಾಣ-ದೆಹಲಿ ಹೆದ್ದಾರಿಗೆ ತಡೆಯೊಡ್ಡಿ ರೈತರ ಪ್ರತಿಭಟನೆ

ಒಂದೇ ಗ್ರಾಮದಲ್ಲಿ 1200-1500 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೂರ್ಯಕಾಂತಿ ಬೆಳೆ

ಪೇಠಾಲೂರ ಒಂದೇ ಗ್ರಾಮದಲ್ಲಿ 1200-1500 ಎಕರೆ ಪ್ರದೇಶದಲ್ಲಿ ಸಿಜೆಂಟಾ ಕಂಪನಿಯ SB 293 ಬೀಜ ಬಿತ್ತನೆ ಮಾಡಿದ್ದಾರೆ. ಒಂದು ಎಕರೆಗೆ 20-25 ಸಾವಿರ ಖರ್ಚು ಮಾಡಿದ್ದಾರೆ. ಬೆಳೆ ಕೂಡ ಭರ್ಜರಿಯಾಗಿದೆ. ಹಳದಿ ಹೂವುಗಳ ನೋಡಿದ್ರೆ, ಭರ್ಜರಿ ಕಾಳು ಆಗಿರಬೇಕು ಅಂದ್ಕೊಂಡಿದ್ದರು. ಆದ್ರೆ, ಒಂದೇ ಒಂದು ಕಾಳು ಬಿಟ್ಟಿಲ್ಲ. ಹೀಗಾಗಿ ಸೂರ್ಯಕಾಂತಿ ಬೆಳೆದ ರೈತರ ಗೋಳಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೆ, ನಮಗೂ ಕಂಪನಿಗೂ ಸಂಬಂಧವಿಲ್ಲವೆಂದು ಅಧಿಕಾರಿಗಳು ಉಡಾಫೆ ಉತ್ತರ ನೀಡಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿ ನಮಗೆ ಮೋಸ ಮಾಡಿದೆ. ಹೀಗಾಗಿ ಕಠಿಣ ಕ್ರಮ ಆಗಬೇಕು ಎಂದು ರೈತ ವಿಶ್ವನಾಥ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೇಠಾಲೂರ ಮಾತ್ರವಲ್ಲ ಜಿಲ್ಲೆಯ ಬಹುತೇಕ ರೈತರು ಸಿಜೆಂಟಾ ಕಂಪನಿಯ ಎಸ್.ಬಿ 293 ಬಿತ್ತನೆ ಮಾಡಿದ್ದಾರೆ. ಆದ್ರೆ, ಕಾಳೇ ಹಿಡಿದಿಲ್ಲ. ಹೀಗಾಗಿ ಕಂಪನಿ ಅಸಲಿಯತ್ತು ಈಗ ಗೊತ್ತಾಗಿದೆ. ಇದೊಂದು ದೊಡ್ಡ ಜಾಲವೇ ಇದ್ದು, ಇದನ್ನ ಸರಿ ಮಾಡದೇ ಹೋದರೆ, ಎಲ್ಲರಿಗೂ ಕಂಟಕವಾಗುತ್ತೆ. ಇದರಿಂದ ನಕಲಿ ಬೀಜ ಕೊಟ್ಟು ರೈತರಿಗೆ ಟೋಪಿ ಹಾಕಿದ ಮಹಾರಷ್ಟ್ರ ಮೂಲದ ಸಿಜೆಂಟಾ ಕಂಪನಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ. ಸರ್ಕಾರ, ಕೃಷಿ ಇಲಾಖೆ ಗಮನಕ್ಕೆ ಬಾರದೇ ರಾಜ್ಯದಲ್ಲಿ ಬೀಜ ಮಾರಾಟ ಹೇಗೆ ಸಾಧ್ಯವೆಂದು ಅನ್ನದಾತರು ಪ್ರಶ್ನೆ ಮಾಡಿದ್ದಾರೆ. ಸಿಜೆಂಟಾ ಕಂಪನಿ ಕಡೆಯಿಂದ ಹಣ ಪಡೆದು ನಕಲಿ ಬೀಜ ಮಾರಾಟಕ್ಕೆ ಕೃಷಿ ಇಲಾಖೆ ಬೆಂಬಲ ಅಂತ ರೈತರು ಆರೋಪಿಸಿದ್ದಾರೆ. ತಕ್ಷಣ ನಕಲಿ ಬೀಜ ಕೊಟ್ಟು ಮೋಸ ಮಾಡಿದ ಸಿಜೆಂಟಾ ಕಂಪನಿ ವಿರುದ್ಧ ಕ್ರಮ ಆಗಬೇಕು. ಕೃಷಿ ಇಲಾಖೆ, ಸಂಶೋಧನಾ ಕೇಂದ್ರದಿಂದ ಸರ್ಟಿಫೈಡ್ ಆಗದೇ ಮಾರುಕಟ್ಟೆಯಲ್ಲಿ ಬೀಜ ಮಾರಾಟ ಆಗಿದ್ದು ಹೇಗೆ. ಇದಕ್ಕೆಲ್ಲ ಸರ್ಕಾರ, ಕೃಷಿ ಇಲಾಖೆ ಉತ್ತರ ಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಸೂರ್ಯಕಾಂತಿ ಜೊತೆ ಫೋಟೋಗಾಗಿ ಮುಗಿಬಿದ್ದ ಜನ, ಲಾಸ್ ತುಂಬಿಕೊಳ್ಳಲು‌ ಹೊಸ ಐಡಿಯಾ ಕಂಡುಕೊಂಡ ರೈತ

ಬೆಳೆ ಚೆನ್ನಾಗಿ ಬೆಳೆದರೆ ಮಾತ್ರ ಅನ್ನದಾತರ ಬದುಕು ಬಂಗಾರ. ಇಲ್ಲದಿದ್ರೆ, ರೈತರ ಬದುಕು ಮೂರಾಬಟ್ಟೆ. ಎರಡ್ಮೂರು ವರ್ಷ ಅತೀವೃಷ್ಠಿ ರೈತರ ಬದುಕು ನುಂಗಿ ನೀರು ಕುಡಿದ್ರೆ. ಇದೀಗ ಕಳೆಪೆ ಬೀಜದ ಜಾಲ ರೈತರ ಜೀವ ಹಿಂಡುತ್ತಿದೆ. ಸರ್ಕಾರ, ಕೃಷಿ ಇಲಾಖೆ ನಮ್ಮ ಸಹಾಯಕ್ಕೆ ಬರದಿದ್ರೆ, ಆತ್ಮಹತ್ಯೆಯೊಂದೆ ದಾರಿ ಎನ್ನುವಂತಾಗಿದೆ. ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದೇವೆ. ಈಗ ಸೂರ್ಯಕಾಂತಿ ಬೆಳೆ ಭರ್ಜರಿ ಬೆಳೆದ್ರು, ತೆನೆಯಲ್ಲಿ ಒಂದೂ ಕಾಳು ಇಲ್ಲ. ಹೀಗಾಗಿ ಸರ್ಕಾರ ಕಳಪೆ ಬೀಜ ಕೊಟ್ಟ ಕಂಪನಿ ವಿರುದ್ಧ ಕ್ರಮ ಕೈಗೊಂಡು ನಮಗೆ ಪರಿಹಾರ ನೀಡಿ, ನಮ್ಮನ್ನು ಬದುಕಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ