ಗದಗ ಜಿಲ್ಲೆಯಲ್ಲಿ ಕೊವಿಡ್​ ಚಿಕಿತ್ಸೆಗೆ ವೈದ್ಯರ ಅಭಾವ; ತಾತ್ಕಾಲಿಕ ನೇಮಕಾತಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನ

12 ಜನ ಎಮ್​ಬಿಬಿಎಸ್ ವೈದ್ಯರ ತಾತ್ಕಾಲಿಕ ನೇಮಕಾತಿಗೆ ಆರೋಗ್ಯ ಇಲಾಖೆ ಮುಂದಾಗಿದೆ. ಆರು ತಿಂಗಳ ಕಾಲ ಸೇವೆಗೆ ಬರುವಂತೆ ವೈದ್ಯರನ್ನು ಗದಗ ಜಿಲ್ಲಾಡಳಿತ ಆಹ್ವಾನಿಸಿದ್ದು, ಪ್ರತಿ ತಿಂಗಳು 60 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಆರೋಗ್ಯ ಇಲಾಖೆ ಸೂಚಿಸಿದೆ.

ಗದಗ ಜಿಲ್ಲೆಯಲ್ಲಿ ಕೊವಿಡ್​ ಚಿಕಿತ್ಸೆಗೆ ವೈದ್ಯರ ಅಭಾವ; ತಾತ್ಕಾಲಿಕ ನೇಮಕಾತಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನ
ಸಾಂಕೇತಿಕ ಚಿತ್ರ

ಗದಗ: ಕೊರೊನಾ ಎರಡನೇ ಅಲೆ ದೇಶದಾದ್ಯಂತ ಅತಿ ವೇಗವಾಗಿ ಪ್ರಸರಣವಾಗುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಅಷ್ಟೇ ಅಲ್ಲ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಿರುವಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಬೆಡ್​ ಇಲ್ಲ ಆಕ್ಸಿಜನ್ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಕುಮ್ಮಕ್ಕು ನೀಡುವಂತೆ ಸದ್ಯ ಗದಗ ಜಿಲ್ಲೆಯಲ್ಲಿ ಕೊರೊನಾಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಕಂಡುಬಂದಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ, ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಸೃಷ್ಟಿಯಾಗಿದೆ. ಜಿಲ್ಲೆಯ ರೋಣ, ಮುಂಡರಗಿ, ಶಿರಹಟ್ಟಿ, ನರಗುಂದ ತಾಲೂಕಿನಲ್ಲಿ ವೈದ್ಯರ ಕೊರತೆ ಉಂಟಾಗಿದ್ದು, ಈ ನಾಲ್ಕು ತಾಲೂಕು ಆಸ್ಪತ್ರೆಗೆ ತುರ್ತಾಗಿ ತಲಾ ಮೂರು ಜನ ವೈದ್ಯರ ಅವಶ್ಯಕತೆ ಇದೆ.

ಈ ನಿಟ್ಟಿನಲ್ಲಿ 12 ಜನ ಎಮ್​ಬಿಬಿಎಸ್ ವೈದ್ಯರ ತಾತ್ಕಾಲಿಕ ನೇಮಕಾತಿಗೆ ಆರೋಗ್ಯ ಇಲಾಖೆ ಮುಂದಾಗಿದೆ. ಆರು ತಿಂಗಳ ಕಾಲ ಸೇವೆಗೆ ಬರುವಂತೆ ವೈದ್ಯರನ್ನು ಗದಗ ಜಿಲ್ಲಾಡಳಿತ ಆಹ್ವಾನಿಸಿದ್ದು, ಪ್ರತಿ ತಿಂಗಳು 60 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಆರೋಗ್ಯ ಇಲಾಖೆ ಸೂಚಿಸಿದೆ.

ಹಾವೇರಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ
ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲ ಇದ್ದರೂ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಏನೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹದಿನೈದು ಹಳ್ಳಿಗಳಿಗೆ ಆಧಾರ ಈ ಸರ್ಕಾರಿ ಆಸ್ಪತ್ರೆ. ರಟ್ಟೀಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ ಕುಡುಪಲಿ ಸೇರಿದಂತೆ ಸುತ್ತಮುತ್ತಲಿನ ಹದಿನೈದು ಹಳ್ಳಿಗಳ ಜನರಿಗೆ ಆಧಾರವಾಗಿದೆ. ಒಂದು ಕೋಟಿ ಎಪ್ಪತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ಸುಸಜ್ಜಿತ ಸುಂದರ ಕಟ್ಟಡವಿದೆ. ಕಟ್ಟಡ ಉದ್ಘಾಟನೆಯಾಗಿ ಮೂರು ತಿಂಗಳುಗಳು ಕಳೆದಿವೆ. ದಿನದ ಇಪ್ಪತ್ತು ನಾಲ್ಕು ಗಂಟೆ ಕೆಲಸ ನಿರ್ವಹಿಸಬೇಕಾದ ಆಸ್ಪತ್ರೆ ಇದಾಗಿದ್ದರೂ, ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಹದಿನೈದು ಹಳ್ಳಿಗಳ ಜನರ ಪಾಲಿಗೆ ಆಸ್ಪತ್ರೆ ಇದ್ದರೂ ಇಲ್ಲದಂತಾಗಿದೆ.

ಎಂಬಿಬಿಎಸ್ ವೈದ್ಯರೆ ಇಲ್ಲ
ಪ್ರಾಥಮಿಕ ಆರೋಗ್ಯ ಕೇಂದ್ರ ದೊಡ್ಡ ಕಟ್ಟಡ ಹೊಂದಿರುವ ಆಸ್ಪತ್ರೆಯಾಗಿದೆ. ಆದರೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಎಂಬಿಬಿಎಸ್ ವೈದ್ಯರಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸೇರಿ ಒಟ್ಟು ಹತ್ತೊಂಬತ್ತು ಜನರಿರಬೇಕು. ಆದರೆ ಸದ್ಯ ವೈದ್ಯರು ಮತ್ತು ಸಿಬ್ಬಂದಿ ಸೇರಿ ಒಟ್ಟು ಹನ್ನೊಂದು ಜನರಿದ್ದಾರೆ. ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯವಾಗಿ ಇರಬೇಕಾದ ಎಂಬಿಬಿಎಸ್ ವೈದ್ಯರೆ ಇಲ್ಲ. ಹೀಗಾಗಿ ರೋಗಿಗಳಿಗೆ ಎಂಬಿಬಿಎಸ್ ವೈದ್ಯರ ಸೇವೆ ಸಿಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.

ಇದನ್ನೂ ಓದಿ:

ಸೋಂಕಿತರು ರೆಮ್‌ಡೆಸಿವರ್ ಇದ್ರೆ ಮಾತ್ರಾ ಬದುಕುತ್ತೀವಿ ಅನ್ನೋದನ್ನ ಬಿಡಬೇಕು.. ಇಂಜೆಕ್ಷನ್ ಕೊಡುವುದನ್ನ ವೈದ್ಯರು ನಿರ್ಧರಿಸುತ್ತಾರೆ

ಹಾವೇರಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ: ಜನರ ಪರದಾಟ