ಸರ್ಕಾರಿ ಸಬ್ಸಿಡಿ ಸಾಲದ ಹೆಸರಿನಲ್ಲಿ ಮಹಾ ವಂಚನೆ! ಬಡವರಿಂದ ಹಣ ಪಡೆದು ಎಸ್ಕೇಪ್
ಸ್ವಂತ ಉದ್ಯೋಗದ ಕನಸು ಕಂಡ ಬಡವರು ಸರ್ಕಾರಿ ಸಬ್ಸಿಡಿ ಸಾಲದ ಆಮಿಷಕ್ಕೆ ಬಿದ್ದು ವಂಚನೆಗೊಳಗಾಗಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಲಕ್ಷ್ಮಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಸರ್ಕಾರಿ ಯೋಜನೆಯಡಿ ಸಾಲ ಕೊಡಿಸುವ ನೆಪದಲ್ಲಿ ಹಲವರಿಂದ ಸಾವಿರಾರು ರೂ ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ಹಣ ಕಳೆದುಕೊಂಡ ಫಲಾನುಭವಿಗಳು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ.

ಮುಖ್ಯಾಂಶಗಳು
- ಸರ್ಕಾರಿ ಸಬ್ಸಿಡಿ ಸಾಲದ ಹೆಸರಿನಲ್ಲಿ ವಂಚನೆ
- ಹಣ ಪಡೆದು ಎಸ್ಕೇಪ್ ಆದ ಲಕ್ಷ್ಮೀ ಎಂಟರ್‌ಪ್ರೈಸಸ್ ಕಂಪನಿ
- ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಘಟನೆ
ಗದಗ, ಅಕ್ಟೋಬರ್ 18: ಸ್ವಂತ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳುವ ಕನಸು ಕಂಡ ಬಡ ಜನರು ವಂಚನೆಯ ಬಲೆಗೆ ಬಿದ್ದು ಒದ್ದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯ ಹೆಸರಿನಲ್ಲಿ ಲಕ್ಷಾಂತರ ರೂ ಸಾಲ ಕೊಡಿಸುವ ಬಣ್ಣಬಣ್ಣದ ಆಮಿಷಕ್ಕೆ ಮಾರುಹೋಗಿದ್ದಾರೆ. 5 ಲಕ್ಷ ರೂ.ದಿಂದ 25 ಲಕ್ಷ ರೂ.ವರೆಗೆ ಸಬ್ಸಿಡಿ ಸಹಿತ ಸಾಲ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ಸರ್ಕಾರದ ಯೋಜನೆಯನ್ನ ನಂಬಿ ಹಣ ಕಳೆದುಕೊಂಡ ಬಡ ಫಲಾನುಭವಿಗಳು ಇದೀಗ ನ್ಯಾಯಕ್ಕಾಗಿ ಬೀದಿಬೀದಿ ಅಲೆಯುವಂತಾಗಿದೆ.
ನಡೆದಿದ್ದೇನು?
ಸರ್ಕಾರಿ ಯೋಜನೆಯಡಿ ಲಕ್ಷಾಂತರ ರೂ ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿಯಲ್ಲಿ ಲಕ್ಷ್ಮೀ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಕಚೇರಿಯೊಂದನ್ನ ಆರಂಭಿಸಿ, ಟೈಲರಿಂಗ್, ರೊಟ್ಟಿ ತಯಾರಿಕಾ ಘಟಕ, ಸಿಮೆಂಟ್ ಇಟ್ಟಿಗೆ ತಯಾರಿಕೆಯಂತಹ ಸ್ವಯಂ ಉದ್ಯೋಗ ಆರಂಭಿಸಲು ಸರ್ಕಾರದಿಂದ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಬಣ್ಣಬಣ್ಣದ ಮಾತುಗಳನ್ನಾಡಿ ಜನರನ್ನು ನಂಬಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: ದೆಹಲಿ ವರ್ತಕನಿಂದ 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಫಲಾನುಭವಿಗಳಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು ಎಲ್ಲಾ ಪ್ರಕ್ರಿಯೆಗಳನ್ನು ತಾವೇ ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೆ ಇದಕ್ಕಾಗಿ ತಲಾ 10 ಸಾವಿರದಿಂದ 30 ಸಾವಿರ ರೂ.ದವರೆಗೆ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಸಾಲ ಮಂಜೂರಾದ ಬಳಿಕ ಮತ್ತಷ್ಟು ಹಣ ನೀಡುವಂತೆ ಷರತ್ತು ವಿಧಿಸಲಾಗಿತ್ತು ಎನ್ನಲಾಗಿದೆ. ಹಣ ನೀಡಿದವರಿಗೆ ಚೆಕ್ ಕೂಡ ನೀಡಲಾಗಿತ್ತು. ಆದರೆ ಈಗ ಸಾಲವೂ ಇಲ್ಲ, ಕೊಟ್ಟ ಹಣ ಕೂಡ ಇಲ್ಲ. ಅತ್ತ ಕಚೇರಿಯನ್ನ ಮುಚ್ಚಲಾಗಿದ್ದು, ಇತ್ತ ಹಣ ಕಳೆದುಕೊಂಡ ಬಡ ಕುಟುಂಬಗಳು ಕಂಗಾಲಾಗಿವೆ.
ಸಬ್ಸಿಡಿ ಸಾಲದ ಆಮಿಷವೊಡ್ಡಿ ಹಣ ಪಡೆದು ಪರಾರಿ
ಗ್ರಾಮೀಣ ಭಾಗದ ಜನರೇ ಲಕ್ಷ್ಮೀ ಎಂಟರ್ ಪ್ರೈಸಸ್ನ ಟಾರ್ಗೆಟ್. ಗ್ರಾಮೀಣ ಭಾಗದ ನೂರಾರು ಜನರಿಗೆ ಸಬ್ಸಿಡಿ ಸಾಲದ ಆಮಿಷವೊಡ್ಡಿ ಹಣ ವಸೂಲಿ ಮಾಡಿದ್ದಾರೆ. ನಿತ್ಯ ದುಡಿದ ಹಣದಲ್ಲೇ ಅಷ್ಟೊ ಇಷ್ಟೊ ಕೂಡಿಟ್ಟಿದ್ದ ಹಣವನ್ನು ನೀಡಿದ್ದರು. ಆದರೆ ಇದೀಗ ವಂಚಕರು ಕಚೇರಿಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾರೆ. ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಬಡ ಜನರು ಇದೀಗ ಹಣ ವಾಪಸ್ ಪಡೆಯಲು ಪರದಾಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂತ ಅಲೆದಾಡುತ್ತಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!
ಸಾವಿರಾರು ರೂ ಹಣ ಕಳೆದುಕೊಂಡ ಬಡ ಜನರು ಇದೀಗ ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ. ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಪೊಲೀಸರು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




