ಹಳ್ಳಿಗಳಲ್ಲಿ ಬಚ್ಚಲು ಗುಂಡಿ ನಿರ್ಮಾಣ: ಹಾವೇರಿ ಜನರಿಂದ ಉತ್ತಮ ಪ್ರತಿಕ್ರಿಯೆ
ಗ್ರಾಮೀಣ ಭಾಗವನ್ನು ಸಂಪೂರ್ಣ ಕೊಳಚೆ ಮುಕ್ತ ಮಾಡಲು ಹಾಗೂ ಬಚ್ಚಲು ಮನೆ ನೀರು ಚರಂಡಿ ಅಥವಾ ರಸ್ತೆಗೆ ಹರಿಯಬಿಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪ್ರತಿ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಕುರಿತು ಹಾವೇರಿ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿ : ಗ್ರಾಮಗಳನ್ನು ಕೊಳಚೆ ನೀರು ಮುಕ್ತ ಮಾಡಲು ಹಾಗೂ ಜಲಮೂಲ ಪುನಃಶ್ಚೇತನಗೊಳಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಬಚ್ಚಲು ಗುಂಡಿ ನಿರ್ಮಾಣ ವಿನೂತನ ಯೋಜನೆಗೆ ಹಾವೇರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಬಚ್ಚಲು ಗುಂಡಿ ನಿರ್ಮಾಣ ಬಲು ಜೋರಾಗಿ ನಡೆದಿದೆ. ತಾಲೂಕಿನ ಮೇಡ್ಲೇರಿ, ಅಂತರವಳ್ಳಿ, ಅರೇಮಲ್ಲಾಪುರ, ಅಸುಂಡಿ, ಬೇಲೂರು, ಚಳಗೇರಿ, ಬಿಲ್ಲಳ್ಳಿ, ಗುಡಗೂರು ಸೇರಿ 40 ಗ್ರಾಮ ಪಂಚಾಯತಿಗಳಲ್ಲಿ ಬಚ್ಚಲು ಗುಂಡಿ ನಿರ್ಮಾಣ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗೂ 50 ಬಚ್ಚಲು ಗುಂಡಿ ನಿರ್ಮಾಣಕ್ಕೆ ಗುರಿ ನೀಡಲಾಗಿದೆ. ಪ್ರತಿ ಫಲಾನುಭವಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 14 ಸಾವಿರ ರೂ. ವೆಚ್ಚದಲ್ಲಿ ಸಹಾಯ ಧನ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ತಾಲೂಕಿನ 40 ಗ್ರಾ.ಪಂ ವ್ಯಾಪ್ತಿಯಲ್ಲಿ ಎರಡು ಸಾವಿರ ಬಚ್ಚಲು ಗುಂಡಿ ನಿರ್ಮಾಣಕ್ಕೆ ಗುರಿ ನೀಡಲಾಗಿತ್ತು. ಆದರೆ, ಗ್ರಾಮೀಣ ಭಾಗದ ಜನರಿಂದ 2,484 ಬಚ್ಚಲು ಗುಂಡಿ ನಿರ್ಮಾಣದ ಬೇಡಿಕೆ ಬಂದಿದೆ. ಅದರಲ್ಲಿ ಈಗಾಗಲೇ 1,254 ಮನೆಗಳಿಗೆ ಬಚ್ಚಲು ಗುಂಡಿ ನಿರ್ಮಿಸಲಾಗಿದೆ. ಅವರಿಗೆ ಸರ್ಕಾರದಿಂದ ಸಹಾಯಧನ ಸಹ ನೀಡಲಾಗಿದ್ದು, ಶೇ. 62.07ರಷ್ಟು ಪ್ರಗತಿಯಾಗಿದೆ. 2021ರ ಮಾರ್ಚ್ ತಿಂಗಳಾಂತ್ಯದವರೆಗೆ ಬಚ್ಚಲು ಗುಂಡಿ ನಿರ್ಮಾಣಕ್ಕೆ ಅವಕಾಶವಿದ್ದು, ಅಷ್ಟರಲ್ಲಿ ಶೇ. 100ರಷ್ಟು ಗುರಿ ತಲುಪಬಹುದಾಗಿದೆ.
ಏನಿದು ಬಚ್ಚಲು ಗುಂಡಿ ನಿರ್ಮಾಣ?
ಗ್ರಾಮೀಣ ಭಾಗವನ್ನು ಸಂಪೂರ್ಣ ಕೊಳಚೆ ಮುಕ್ತ ಮಾಡಲು ಹಾಗೂ ಬಚ್ಚಲು ಮನೆ ನೀರು ಚರಂಡಿ ಅಥವಾ ರಸ್ತೆಗೆ ಹರಿಯಬಿಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪ್ರತಿ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ಯೋಜನೆ ಜಾರಿಗೊಳಿಸಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲ ಪುನಶ್ಚೇತನಗೊಳಿಸಿ ಅಭಿವೃದ್ಧಿಗೊಳಿಸುವುದು, ಕೊಳಚೆ ನೀರು ಸದ್ಬಳಕೆ ಮಾಡಿಕೊಳ್ಳುವುದು, ಬಚ್ಚಲು ಮನೆ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಗಟ್ಟುವುದು ಯೋಜನೆಯ ಉದ್ದೇಶವಾಗಿದೆ.
ರೋಗಗಳು ದೂರವಿರಬಹುದು:
ಗ್ರಾಮೀಣ ಭಾಗದಲ್ಲಿ ಶೇ. 70ರಷ್ಟು ಬಚ್ಚಲು ಮನೆ ನೀರು ಚರಂಡಿ, ರಸ್ತೆ ಮೇಲೆಯೇ ಹರಿಯುತ್ತಿದೆ. ಇದರಿಂದ ನೀರು ಅಲ್ಲಲ್ಲಿ ನಿಂತು ಸೊಳ್ಳೆಗಳ ತಾಣ ಆಗುತ್ತಿತ್ತು. ಇನ್ನು ಕೆಲವೆಡೆ ಕೊಳಚೆ ನೀರು ಕೆರೆ, ಹಳ್ಳ ಸೇರಿದಂತೆ ವಿವಿಧ ಜಲಮೂಲ ಸೇರಿ ನೀರು ಕಲುಷಿತಗೊಳಿಸುತ್ತಿದೆ. ಈ ನೀರನ್ನು ಜನ-ಜಾನುವಾರು ಸೇವಿಸಿ ಅನಾರೋಗ್ಯದ ಸಮಸ್ಯೆ ಎದುರಾಗುತ್ತಿತ್ತು. ಅಲ್ಲದೆ ಮಲೇರಿಯಾದಂತಹ ರೋಗಗಳು ಹೆಚ್ಚುತ್ತಿದ್ದವು.
ಅಂತರ್ಜಲಮಟ್ಟ ಏರಿಕೆ:
ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಮನೆಯವರ ಅಡುಗೆ ಹಾಗೂ ಬಚ್ಚಲು ಮನೆಯ ನೀರು ವ್ಯರ್ಥವಾಗುವುದನ್ನು ತಡೆಯಲು ಬಚ್ಚಲು ಗುಂಡಿಗೆ ಹರಿಯಬಿಡಲಾಗುವುದು. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಅಲ್ಲದೆ ಸಂಗ್ರಹಗೊಳ್ಳುವ ನೀರನ್ನು ಮರು ಬಳಕೆ ಮಾಡಿಕೊಳ್ಳಬಹುದು. ಅದಕ್ಕೆ ಪೂರಕವಾಗುವ ರೀತಿಯಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡು ಬಚ್ಚಲು ಗುಂಡಿಗಳನ್ನು ನಿರ್ಮಿಸಲಾಗಿದೆ.
ಬಚ್ಚಲು ಗುಂಡಿ ನಿರ್ಮಾಣ ಅಭಿಯಾನಕ್ಕೆ ರಾಣೆಬೆನ್ನೂರು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ರೀತಿಯಲ್ಲಿ ಬಚ್ಚಲು ಗುಂಡಿಗಳು ಅನುಕೂಲ ಆಗಲಿವೆ. ಆರಂಭದಲ್ಲಿ ಪ್ರತಿ ಗ್ರಾಪಂಗೆ 50 ಬಚ್ಚಲು ಗುಂಡಿ ನಿರ್ಮಾಣಕ್ಕೆ ಗುರಿ ನೀಡಲಾಗಿದೆ. ಇದರ ಬಗ್ಗೆ ಜಾಗೃತಿ ಹೆಚ್ಚಾದಂತೆ ಗ್ರಾಮದ ಪ್ರತಿ ಮನೆ ಮನೆಗೂ ಬಚ್ಚಲು ಗುಂಡಿ ನಿರ್ಮಿಸಲು ಗುರಿ ನೀಡಲಾಗುವುದು ಎಂದು ಟಿ.ಆರ್. ಮಲ್ಲಾಡದ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ Tv9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳಿಗೆ ಬಚ್ಚಲು ಗುಂಡಿಗಳನ್ನು ನಿರ್ಮಾಣ ಮಾಡುವುದರಿಂದ ಗ್ರಾಮಗಳಲ್ಲಿ ಸ್ವಚ್ಚತೆಗೆ ಜಾಗ ಸಿಕ್ಕಂತಾಗುತ್ತದೆ. ಜೊತೆಗೆ ಜನರು ಸೊಳ್ಳೆಗಳ ಕಾಟದಿಂದ ಮುಕ್ತಿ ಹೊಂದುವುದಲ್ಲದೆ ರೋಗಮುಕ್ತ ವಾತಾವರಣ ನಿರ್ಮಾಣ ಆಗುತ್ತದೆ. ಸರಕಾರ ಹಾಗೂ ಅಧಿಕಾರಿಗಳು ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೂ ಬಚ್ಚಲು ಗುಂಡಿ ನಿರ್ಮಾಣ ಆಗುವಂತೆ ಮಾಡಬೇಕು ಏಂಬುದು ರೈತ ಹನುಮಂತಪ್ಪನವರ ಅಭಿಪ್ರಾಯ.
ಧಾರವಾಡದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಸಭೆ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ