ಮನೆಗಾಗಿ ಅರ್ಜಿ ಕೊಟ್ಟು ಕೊಟ್ಟು ನನ್ನದು ತಬರನ ಕಥೆಯಾಗಿದೆ: ಆ್ಯಸಿಡ್ ದಾಳಿ ಸಂತ್ರಸ್ತೆಯ ನೋವಿನ ದನಿ
ಈ ವಿನಂತಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಶೀಘ್ರ ಮನೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರು: ‘ಜಾಗವಿದೆ, ವಾಸಿಸಲು ಒಂದು ಸೂರು ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಿ’ ಆ್ಯಸಿಡ್ ದಾಳಿ ಸಂತ್ರಸ್ತೆ ರತ್ನಾ ಎನ್ನುವವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಈ ವಿನಂತಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಶೀಘ್ರ ಮನೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಸರ್ ನಮಸ್ತೆ, ನನ್ನ ಹೆಸರು ರತ್ನ ಹಾವೇರಿ ತಾಲೂಕು ಗುತ್ತಲ ಪಟ್ಟಣದ ನಿವಾಸಿ. ನಾನು ಒಬ್ಬ ಆ್ಯಸಿಡ್ ದಾಳಿ ಸಂತ್ರಸ್ತೆ. ನನಗೆ 11 ವರ್ಷದ ಮಗಳು ಇದ್ದಾಳೆ. ಇರಲು ಮನೆ ಇಲ್ಲ. ನನಗೆ ಅಪ್ಪ ಅಮ್ಮ ಇಬ್ಬರೂ ಇಲ್ಲ. ಗುತ್ತಲ ಗ್ರಾಮದಲ್ಲಿ 19X13 ಅಳತೆಯ ಜಾಗ ಇದೆ. ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಸರ್ಕಾರದ ನೆರವು ಬೇಕಿದೆ. ಮನೆಗಾಗಿ ಅರ್ಜಿಯನ್ನು ಕೊಟ್ಟು ಕೊಟ್ಟು ಸಾಕಾಗಿದೆ. ದಯವಿಟ್ಟು ನಮಗೆ ಮನೆಯನ್ನು ನೀಡಿ’ ಎಂದು ಮುಖ್ಯಮಂತ್ರಿಗೆ ‘ಕೂ’ ಮೂಲಕ ಮನವಿ ಮಾಡಿದ್ದಾರೆ.
ಈ ವಿನಂತಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ‘ಬಡವರಿಗೆ ಮನೆ ಎಂಬುವುದು ಇರಬಾರದಾ? ಸರ್ಕಾರ ಇದೆಯಾ ಇಲ್ಲವಾ ತಿಳಿಯುತ್ತಿಲ್ಲ. ಹುಟ್ಟಿದಾಗಿನಿಂದ ಸಾಯುವವರೆಗೂ ಗುಡಿಸಲಲ್ಲಿ ವಾಸಿಸುತ್ತಲೇ ಸಾಯಬೇಕಾ? ಯಾಕೆ ಬಡವರು ಮನುಷ್ಯರಲ್ಲವೇ? ಬಡವರಿಗೆ ಮನಸ್ಸಿಲ್ಲವೇ ಯಾಕೆ ಸರ್ಕಾರಕ್ಕೆ ತಿಳಿಯುತ್ತಿಲ್ಲ’ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಣ್ಣಿನ ಮುಖದ ಮೇಲೆ ಆ್ಯಸಿಡ್ ಎರಚುವ ವಿಕೃತಿ ನಮ್ಮ ಮಧ್ಯೆ ಇನ್ನೂ ಜೀವಂತವಾಗಿದೆ. ಇಂತಹ ದಾಳಿಗೆ ಒಳಗಾಗಿರುವ ಎಷ್ಟೋ ಈ ತರಹದ ಹೆಣ್ಣುಮಕ್ಕಳು ಅದರ ನಂತರವೂ ಬದುಕು ಕಟ್ಟಿಕೊಳ್ಳುವ ದಿಟ್ಟತನ ತೋರಿದ್ದಾರೆ. ಅಂಥವರನ್ನು ಗುರುತಿಸಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ರತ್ನಾ ಚಲವಾದಿ ಎನ್ನುವ ಕಾವ್ಯನಾಮದಲ್ಲಿ ಕವಿತೆಗಳ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸುತ್ತಿರುವ ರತ್ನಾ ಹೇಳಿದ್ದಾರೆ.
ಮಮತಾ ಎನ್ನುವ ಶಿಕ್ಷಕಿಯೊಬ್ಬರು ಮುಖ್ಯಮಂತ್ರಿಗೆ ಕೈಬರಹದಲ್ಲಿ ಪತ್ರ ಬರೆದು, ‘ಒಬ್ಬ ಅವಿವೇಕಿ ಗಂಡಿನ ಆ್ಯಸಿಡ್ ದಾಳಿಗೆ ಬಲಿಯಾದ ಎಚ್.ಕೆ.ರತ್ನಾ ಅವರ ಜೀವನಕ್ಕೆ ನಮ್ಮ ಸರ್ಕಾರದಿಂದ ಅಗತ್ಯ ಸವಲತ್ತು ಒದಗಿಸಬೇಕು. ಸಂತ್ರಸ್ತೆಯು ನೆಲೆಯಿಲ್ಲದೆ ಅನಾಥೆಯಾಗಿ ಕಣ್ಣೀರಿಡುತ್ತಿದ್ದಾರೆ. ಮನೆಗಾಗಿ ಈಗಾಗಲೇ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಅವರಿ ಉದ್ಯೋಗ ಮತ್ತು ಆಶ್ರಯ ಒದಗಿಸಿಕೊಡಬೇಕು’ ಎಂದು ಮುಖ್ಯಮಂತ್ರಿಯನ್ನು ವಿನಂತಿಸಿದ್ದಾರೆ.
ಅಭಿಮಾನಿ ಎನ್ನುವವರು ಕೂ ಮಾಡಿ, ‘ಆ್ಯಸಿಡ್ ದಾಳಿಯಂತಹ ದಾರುಣ ಕುಕೃತ್ಯಗಳಿಗೆ ಗುರಿಯಾದರೂ ಬದುಕು ಕಟ್ಟಿಕೊಳ್ಳಲು ಇಚ್ಛಿಸುತ್ತಿರುವ ಹೆಣ್ಣುಮಗಳಿಗೆ ತನ್ನದೇ ಗೂಡು ಕಟ್ಟಿಕೊಳ್ಳಲು ಸರ್ಕಾರದ ಸಹಾಯಹಸ್ತ ಬೇಕಾಗಿದೆ’ ಎಂದು ಹೇಳಿದ್ದಾರೆ. ತಮ್ಮ ಪರವಾಗಿ ಧ್ವನಿ ಎತ್ತಿದವರಿಗೆ ಕೃತಜ್ಞತೆ ಸೂಚಿಸಿರುವ ಆ್ಯಸಿಡ್ ದಾಳಿ ಸಂತ್ರಸ್ತೆ ರತ್ನಾ, ‘ಬೆಂಬಲಿಸುತ್ತಿರುವ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದಿದ್ದಾರೆ. #ಛಲಗಾತಿಗೆ_ನೆರವು ಹ್ಯಾಷ್ಟ್ಯಾಗ್ ಬಳಸಿ ಸಾಕಷ್ಟು ಜನರು ರತ್ಯಾ ಅವರಿಗೆ ಮನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Published On - 7:01 pm, Thu, 7 October 21