ವರಮಹಾಲಕ್ಷ್ಮಿ ಪೂಜೆಗೆ ಹೋಗಿದ್ದಾಗ ಚಿನ್ನ ಕಳವು: ವಿಚಾರಣೆ ನೆಪದಲ್ಲಿ ಮಹಿಳೆಗೆ ಕರೆಂಟ್ ಶಾಕ್ ನೀಡಿದ ಪೊಲೀಸ್ರು
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದ ಮನೆಯೊಂದರಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆ ಸಂದರ್ಭದಲ್ಲಿ ದೇವಿಗೆ ಹಾಕಲಾಗಿದ್ದ ಸುಮಾರು 45 ಗ್ರಾಂ ಚಿನ್ನದ ಸರ ಕಳ್ಳತನವಾಗಿದೆ. ಅಕ್ಕಪಕ್ಕದ ಮನೆಯವರನ್ನು ಕರೆದು ಉಡಿ ತುಂಬಿಸಿ ಕಳುಹಿಸಿದ ಬಳಿಕ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಮಹಿಳೆಯನ್ನ ವಿಚಾರಣೆ ನೆಪದಲ್ಲಿ ಪೊಲೀಸರು ಕರೆಂಟ್ ಶಾಕ್ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಹಾವೇರಿ, ಸೆಪ್ಟೆಂಬರ್ 13: ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಅಂದರೆ ಅಕ್ಕಪಕ್ಕದ ಮನೆಯವರನ್ನ ಕರೆಸಿ ಉಡಿ ತುಂಬುವ ಕಾರ್ಯಕ್ರಮ ಮಾಡುವುದು ಸಾಮಾನ್ಯ. ಆದರೆ ಇದೇ ಪೂಜೆ ವೇಳೆ ದೇವಿಗೆ ಹಾಕಲಾಗಿದ್ದ ಸುಮಾರು 45ಗ್ರಾಂ ಚಿನ್ನದ ಸರ ಕಳ್ಳತನವಾದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನೆಪದಲ್ಲಿ ಓರ್ವ ಮಹಿಳೆಗೆ ಕರೆಂಟ್ ಶಾಕ್ ನೀಡಿರುವ ಆರೋಪ ಕೇಳಿಬಂದಿದೆ. ಸದ್ಯ ಅಸ್ವಸ್ಥಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
45 ಗ್ರಾಂ ಚಿನ್ನದ ಸರ ಕಳ್ಳತನ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದ ನಡೆದ ಪೊಲೀಸರ ಕಿರುಕುಳದ ಕಥೆ. ಶಿಡ್ಲಾಪುರ ಗ್ರಾಮದಲ್ಲಿ ಆಗಸ್ಟ್ 20ರಂದು ನಾಗರಾಜ್ ಸುಂಕದ ಎನ್ನುವವರು ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿದ್ದರು. ಅಕ್ಕಪಕ್ಕದ ಮನೆಯವರನ್ನ ಪೂಜೆಗೆ ಕರೆದು ಉಡಿ ತುಂಬಿಸಿ ಕಳಿಸಿದ್ದರು. ಆದರೆ ಇದೇ ವೇಳೆ ದೇವಿಗೆ ಹಾಕಿದ್ದ ಸುಮಾರು 45 ಗ್ರಾಂ ಚಿನ್ನದ ಸರವು ಕಳ್ಳತನವಾಗಿದೆ. ಇದರಿಂದ ಕುಟುಂಬ ಸದಸ್ಯರು ಬಂಕಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆ ಹೆಸರಲ್ಲಿ ಕರೆಂಟ್ ಶಾಕ್ ನೀಡಿ ಚಿತ್ರಹಿಂಸೆ
ಮನೆಗೆ ಬಂದ 11 ಜನರನ್ನ ಪೊಲೀಸರು ವಿಚಾರಣೆ ಮಾಡಿ ಕಳುಹಿಸಿದ್ದಾರೆ. ಆದರೆ 11 ಜನರ ಪೈಕಿ ಇಬ್ಬರಿಗೆ ಕರೆಂಟ್ ಶಾಕ್ ನೀಡಿ ಚಿಂತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಈ ವೇಳೆ ಪೂಜೆಗೆ ತೆರಳಿದ್ದ ನೀಲವ್ವ ಓಲೇಕಾರ ಹಾಗೂ ಮತ್ತೊಬ್ಬ ಮಹಿಳೆಗೆ ಪೊಲೀಸರು ತೀವ್ರ ಕಿರುಕುಳ ನೀಡಿ, ಕೈ ಮತ್ತು ತಲೆಯ ಭಾಗಕ್ಕೆ ಕರೆಂಟ್ ಶಾಕ್ ದೌರ್ಜನ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ.
ನಾವು ಬಡವರು, ಯಾವುದೇ ಕಳ್ಳತನ ಮಾಡಿಲ್ಲ: ನೀಲವ್ವ
ಇನ್ನು ಈ ಕುರಿತಾಗಿ ನೀಲವ್ವ ಮಾತನಾಡಿದ್ದು, ‘ವರಮಹಾಲಕ್ಷ್ಮಿ ಪೂಜೆ ಇದೆ ಬನ್ನಿ ಅಂತಾ ಕರೆದಿದ್ದರು. ಹಾಗಾಗಿ ನಾನು ಪೂಜೆಗೆ ಹೋಗಿ ವಾಪಸ್ ಬಂದಿದ್ದೆ. ಇದೀಗ ಏನೋ ಹೇಳಿದೆ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಿದ್ದಾರೆ. ಓರ್ವ ಪೊಲೀಸ್ ನನಗೆ ಕರೆಂಟ್ ಶಾಕ್ ನೀಡಿದ್ದಾರೆ. ಇನ್ನೊಬ್ಬ ಮಹಿಳೆಗೂ ಕರೆಂಟ್ ಶಾಕ್ ನೀಡಿದಲ್ಲದೆ, ಹೊಡೆದು ಕಳುಹಿಸಿದ್ದಾರೆ. ನಾವು ಬಡವರು, ಯಾವುದೇ ಕಳ್ಳತನ ಮಾಡಿಲ್ಲವೆಂದು ಗೋಗರೆದರೂ ಪೊಲೀಸರು ಬಿಡದೆ ಚಿತ್ರಹಿಂಸೆ ನೀಡಿದ್ದಾರೆ. ನಮಗೆ ನ್ಯಾಯಬೇಕು’ ಎಂದು ನೊಂದ ಮಹಿಳೆ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ: ಸಾರ್ವಜನಿಕರ ಆಕ್ರೋಶ
ಒಟ್ಟಿನಲ್ಲಿ ವರಮಹಾಲಕ್ಷ್ಮಿ ಪೂಜೆಗೆ ಹೋಗಿದ್ದ ಮಹಿಳೆಯರು ದೇವಿಯ ಚಿನ್ನದ ಸರ ಕಳ್ಳತನ ಆರೋಪ ಹೊತ್ತು ಪೊಲೀಸರಿಂದ ಕರೆಂಟ್ ಶಾಕ್ಗೆ ಒಳಗಾಗಿದ್ದಾರೆ. ಅಸ್ವಸ್ಥತಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಈ ಬಗ್ಗೆ ತನಿಖೆ ನಡೆಸಿ ತಪ್ಪು ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ಯಶೋಧಾ ವಂಟಗೋಡಿ’ ಹೇಳಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




