SIRಗೆ ಕೌಂಟರ್ ಕೊಡುತ್ತಾ ಗೃಹ ಜ್ಯೋತಿ ಪರಿಶೀಲನೆ? ಬಲವಾಯ್ತು ಅನುಮಾನ, ಕಾರಣ ಇಲ್ಲಿದೆ
ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಂದ ಎಪಿಕ್ ಕಾರ್ಡ್ ಹಾಗೂ ಜಾತಿ ವಿವರ ಸಂಗ್ರಹಿಸಲು ಸರ್ಕಾರ ಮುಂದಾಗಿದ್ದು, ಇದು ಚುನಾವಣಾ ಆಯೋಗ ನಡೆಸುತ್ತಿರುವ ‘ಎಸ್‌ಐಆರ್’ ಪ್ರಕ್ರಿಯೆಗೆ ಕೌಂಟರ್ ಕೊಡುವ ತಂತ್ರವೇ ಎಂಬ ಬಲವಾದ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಹಾಗಾದರೆ, ಈ ಕ್ರಮದಿಂದ ಸರ್ಕಾರಕ್ಕೆ ಏನು ಲಾಭ? ಇಲ್ಲಿದೆ ವಿವರ.

ಮುಖ್ಯಾಂಶಗಳು
- ಗೃಹ ಜ್ಯೋತಿಗೆ ವೋಟರ್ ಐಡಿ ಕಡ್ಡಾಯ
- ಫಲಾನುಭವಿಗಳ ಜಾತಿ ವಿವರ ಸಂಗ್ರಹ
- ಐಟಿ ಪಾವತಿದಾರರಿಗೆ ಯೋಜನೆ ಕಟ್
ಬೆಂಗಳೂರು, ಜುಲೈ 1: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಯೋಜನೆ ‘ಗೃಹ ಜ್ಯೋತಿ’ ಫಲಾನುಭವಿಗಳ ಮನೆ ಬಾಗಿಲಿಗೆ ಎಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದೆ. ಇದರ ಬೆನ್ನಲ್ಲೇ ಹೊಸದೊಂದು ರಾಜಕೀಯ ಹಾಗೂ ಸಾಮಾಜಿಕ ಚರ್ಚೆ ಮುನ್ನೆಲೆಗೆ ಬಂದಿದೆ. ಯಾವುದೇ ಸರ್ಕಾರಿ ಯೋಜನೆಗೆ ಕಡ್ಡಾಯವಲ್ಲದ ಎಪಿಕ್ (EPIC) ಕಾರ್ಡ್ ಅಥವಾ ವೋಟರ್ ಐಡಿಯನ್ನು ಈಗ ಗೃಹ ಜ್ಯೋತಿ ಯೋಜನೆಗೆ ಕಡ್ಡಾಯಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದರೊಂದಿಗೆ ಫಲಾನುಭವಿಗಳ ಜಾತಿ ಹಾಗೂ ಪ್ರವರ್ಗಗಳ (ಎಸ್‌ಸಿ, ಎಸ್‌ಟಿ, ಓಬಿಸಿ, ಅಲ್ಪಸಂಖ್ಯಾತ) ವಿವರಗಳನ್ನೂ ಅಪ್‌ಡೇಟ್ ಮಾಡಲಾಗುತ್ತಿದ್ದು, ಸರ್ಕಾರ ಪರೋಕ್ಷವಾಗಿ ಮತದಾರರ ಇಂಚಿಂಚೂ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಮತದಾರರ ಅಧಿಕೃತ ದತ್ತಾಂಶ ಕ್ರೂಢೀಕರಣ ತಂತ್ರವೇ?
ಚುನಾವಣಾ ಆಯೋಗದ ಬಳಿ ಇರುವ ಮತದಾರರ ಅಧಿಕೃತ ದತ್ತಾಂಶವನ್ನು ತಾನೂ ಕ್ರೋಢೀಕರಿಸಿಕೊಳ್ಳಲು ಸರ್ಕಾರ ಈ ಹೊಸ ಮಾರ್ಗವನ್ನು ಕಂಡುಕೊಂಡಿದೆ ಎನ್ನಲಾಗುತ್ತಿದೆ. ಇದರ ಮೂಲಕ ಕರ್ನಾಟಕದ ನೈಜ ಮತದಾರರು ಎಷ್ಟು ಎಂಬ ಅಧಿಕೃತ ವಿವರ ಸರ್ಕಾರದ ಕೈಸೇರಲಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆಯ ಕಟ್ಟುನಿಟ್ಟಿನ ‘ಎಸ್‌ಐಆರ್’ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ನಡೆಯುತ್ತಿದೆ. ಈ ಪರಿಷ್ಕರಣೆ ವೇಳೆ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಸಾರ್ವಜನಿಕರೇ ಎಚ್ಚೆತ್ತುಕೊಳ್ಳಲಿ ಮತ್ತು ಯೋಜನೆಯ ಲಾಭ ಪಡೆಯುವವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿ ಎಂಬ ಗುಪ್ತ ಯೋಜನೆ ಇದರ ಹಿಂದಿದೆ ಎನ್ನಲಾಗಿದೆ.
ಹೊರ ರಾಜ್ಯದವರಿಗೆ ಸಿಗಲ್ಲ ಗ್ಯಾರಂಟಿ
ಈ ಸಮೀಕ್ಷೆಯಿಂದಾಗಿ ಕರ್ನಾಟಕದ ಮೂಲ ಮತದಾರರಲ್ಲದವರು ಮತ್ತು ಹೊರರಾಜ್ಯದವರು ಯೋಜನೆಯಿಂದ ಹೊರಗುಳಿಯಲಿದ್ದಾರೆ. ಇದರ ಜೊತೆಗೆ, ಆದಾಯ ತೆರಿಗೆ (ಐಟಿ) ಪಾವತಿಸುತ್ತಿರುವ ಶ್ರೀಮಂತ ವರ್ಗದವರನ್ನು ಪತ್ತೆ ಹಚ್ಚಿ ಅವರಿಗೆ ಗೃಹ ಜ್ಯೋತಿ ಯೋಜನೆಯಿಂದ ಕೊಕ್ ನೀಡಲು ಸರ್ಕಾರ ಈ ಪರಿಶೀಲನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಜು.1ರಿಂದ ಗೃಹ ಜ್ಯೋತಿ ಯೋಜನೆ ಪರಿಶೀಲನೆ: ನಿಮ್ಮ ಮನೆಗೆ ಬರುವ ಸಿಬ್ಬಂದಿಗೆ ಯಾವೆಲ್ಲಾ ದಾಖಲೆ ತೋರಿಸ್ಬೇಕು?
ಒಟ್ಟಿನಲ್ಲಿ ಉಚಿತ ವಿದ್ಯುತ್ ನೆಪದಲ್ಲಿ ನಡೆಯುತ್ತಿರುವ ಈ ಹಠಾತ್ ಜಾತಾವಾರು ಮತ್ತು ವೋಟರ್ ಐಡಿ ಮಾಹಿತಿ ಸಂಗ್ರಹ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




