ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೆಚ್ಚಾಯಿತು ಅನೈತಿಕ ಚಟುವಟಿಕೆಗಳ ಆರೋಪ; ಎಲ್ಲಾ ತಿಳಿದರು ಮೌನವಾಗಿದೆ ಆಡಳಿತ ಮಂಡಳಿ

ಒಂದೇ ವಿಭಾಗದ ಪ್ರಾಧ್ಯಾಪಕರು ಕಚ್ಚಾಡಿಕೊಂಡ ಘಟನೆ ನಡೆದಿದೆ. ಇನ್ನು ಒಂದು ವಿಭಾಗದ ಪ್ರಾಧ್ಯಾಪಕ ಮತ್ತೊಂದು ವಿಭಾಗದ ಪ್ರಾಧ್ಯಾಪಕರ ಕಚೇರಿಗೆ ಹೋಗಿ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಮೌಲ್ಯಮಾಪನ ಮಾಡುವ ಕುಲಸಚಿವರ ಕಚೇರಿಗೆ ಹೋಗಿ, ಅವರ ಮೇಲೆ ಕೆಲವರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

  • ಸಂಜಯ್ ಚಿಕ್ಕಮಠ
  • Published On - 15:17 PM, 7 Apr 2021
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೆಚ್ಚಾಯಿತು ಅನೈತಿಕ ಚಟುವಟಿಕೆಗಳ ಆರೋಪ; ಎಲ್ಲಾ ತಿಳಿದರು ಮೌನವಾಗಿದೆ ಆಡಳಿತ ಮಂಡಳಿ
ಗುಲ್ಬರ್ಗ ವಿಶ್ವವಿದ್ಯಾಲಯ

ಕಲಬುರಗಿ: ವಿಶ್ವವಿದ್ಯಾಲಯಗಳನ್ನು ಜ್ಞಾನ ದೇಗುಲ ಎಂದು ಕರೆಯುತ್ತಾರೆ. ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ, ಸರಿದಾರಿಯತ್ತ ಕರೆದೊಯ್ಯುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕು. ಆದರೆ ಕಲಬುರಗಿ ನಗರದಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯ, ತನ್ನ ಕಾರ್ಯಚಟುವಟಿಕೆ, ಶೈಕ್ಷಣಿಕ ಚಟುವಟಿಕೆ, ಸಂಶೋಧನಗಳಿಂದ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ, ಕಳೆದ ಅನೇಕ ವರ್ಷಗಳಿಂದ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಸಂಶೋಧಾನ ವಿದ್ಯಾರ್ಥಿಗಳಿಗೆ ಹಣದ ಬೇಡಿಕೆ, ಪ್ರಾಧ್ಯಾಪಕರ ಮಾರಮಾರಿ, ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬ್ಬಂದಿಯಿಂದಲೇ ಗ್ರಂಥಾಲಯಕ್ಕೆ ಬೆಂಕಿ ಹೀಗೆ ಹತ್ತು ಹಲವು ನಡೆಯಬಾರದ ಘಟನೆಗಳು ವಿವಿಯಲ್ಲಿ ಕೆಲ ವರ್ಷಗಳಿಂದ ನಡೆಯುತ್ತಾ ಬಂದಿವೆ.

ಇದಕ್ಕೆ ಮತ್ತೊಂದು ಘಟನೆ ಇದೀಗ ಸೇರಿಕೊಂಡಿದೆ. ಅದು ವಿಶ್ವವಿದ್ಯಾಲಯದ ಗ್ರಂಥಾಲಯದ ಅಧಿಕ್ಷಕ, ಗುತ್ತಿಗೆ ನೌಕರಳ ಬೆತ್ತಲೆ ವಿಡಿಯೋ ಹರಿಬಿಟ್ಟಿರುವುದಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಿಯ ಗ್ರಂಥಾಲಯಯ ಅಧಿಕ್ಷಕ ಶರಣಪ್ಪ ಮಾಕುಂಡಿ ಎನ್ನುವವರ ವಿರುದ್ಧ ವಿವಾಹಿತ ಮಹಿಳೆಯೋರ್ವಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರು ನೀಡಿದ ಮಹಿಳೆ ಕೂಡ ವಿವಿಯಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುತ್ತಿದ್ದಾಳೆ.  ಈ ಸಂತ್ರಸ್ತ ಮಹಿಳೆ ನೀಡಿದ ದೂರಿನ ಪ್ರಕಾರ ಕೆಲಸವನ್ನು ಖಾಯಂ ಮಾಡುವುದಾಗಿ ಹೇಳಿ, ಗ್ರಂಥಾಲಯ ಅಧೀಕ್ಷಕ ಶರಣಪ್ಪ ಎನ್ನುವವರು, ಬೆತ್ತಲೆ ವಿಡಿಯೋ ಹಾಕುವಂತೆ ಹೇಳಿದ್ದರು. ನಾನು ಕೆಲಸ ಖಾಯಂ ಅಗುತ್ತೆ ಎನ್ನುವ ಆಸೆಯಿಂದ ಬೆತ್ತಲೆ ವಿಡಿಯೋ ಹಾಕಿದ್ದೆ. ಅದನ್ನು ಬೇರೆ ಗ್ರೂಪ್​ಗಳಿಗೆ ಶೇರ್ ಮಾಡಿದ್ದಾರೆ ಎಂದು ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಸಂತ್ರಸ್ತ ಮಹಿಳೆ 2012 ರಿಂದ ವಿವಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸದ್ಯ ಬೇರೊಂದು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ಹಿಂದೆ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಗ್ರಂಥಾಲಯ ಅಧಿಕ್ಷಕ ಶರಣಪ್ಪ ಮಾಕುಂಡಿಗೆ ಮಹಿಳೆಯ ಪರಿಚಯವಾಗಿದೆ. ಹೀಗಾಗಿ ಇಬ್ಬರ ನಡುವೆ ಸಲುಗೆ ಬೆಳದಿದೆ. ಕೆಲ ದಿನಗಳ ಹಿಂದೆ ಮಹಿಳೆಗೆ ಪೋನ್ ಮಾಡಿದ್ದ ಶರಣಪ್ಪ, ಇಂದು ನನ್ನ ಬರ್ತಡೆ ಇದೆ. ಏನು ಗಿಪ್ಟ್ ಇಲ್ಲವಾ ಎಂದು ಮಾತು ಪ್ರಾರಂಭಿಸಿದ್ದನಂತೆ. ಕೊನೆಗೆ ನಿನ್ನ ನೌಕರಿ ಖಾಯಂ ಮಾಡಿಸುತ್ತೇನೆ, ಬೆತ್ತಲೇ ವಿಡಿಯೋ ಮಾಡಿ ಕಳಿಸುವಂತೆ ಹೇಳಿದ್ದನಂತೆ.  ತಾನು ಆತನ ಮಾತನ್ನು ನಂಬಿ ಬೆತ್ತಲೆ ವಿಡಿಯೋ ಮಾಡಿ ಕಳುಹಿಸಿದೆ ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ತಿಳಿಸಿದ್ದಾಳೆ.

gulbarga university

ಗ್ರಂಥಾಲಯದ ಚಿತ್ರಣ

ಇನ್ನು ಶರಣಪ್ಪ ಆ ವಿಡಿಯೋವನ್ನು ಏನೋ ಮಾಡಲು ಹೋಗಿ, ವಾಟ್ಸಪ್ ಗ್ರೂಪ್​ನಲ್ಲಿ ಶೇರ್ ಮಾಡಿದ್ದಾನೆ. ನಂತರ ತಾನು ಶೇರ್ ಮಾಡಿರುವ ವಿಡಿಯೋ ಬಗ್ಗೆ ಅನೇಕರು ನೋಡಿ ಹೇಸಿಗೆ ಪಟ್ಟುಕೊಂಡು, ಶರಣಪ್ಪನಿಗೆ ಕೆರೆ ಮಾಡಿದ್ದಾರೆ. ಆಗ ಶರಣಪ್ಪ ಡಿಲಿಟ್ ಪಾರ್ ಆಲ್ ಹೊಡೆಯದೇ, ಡಿಲಿಟ್ ಪಾರ್ ಮಿ ಹೊಡೆದಿದ್ದಾನೆ. ಹೀಗಾಗಿ ವಿಡಿಯೋ ಅನೇಕರಿಗೆ ಶೇರ್ ಆಗಿದೆ. ಇದರ ಬಗ್ಗೆ ತಿಳಿದ ಸಂತ್ರಸ್ತ ಮಹಿಳೆ ಇದೀಗ ಶರಣಪ್ಪ ವಿರುದ್ಧ ದೂರು ದಾಖಲಿಸಿದ್ದಾಳೆ.

ಶರಣಪ್ಪ ವಿರುದ್ಧ ವಿಶ್ವವಿದ್ಯಾಲಯದ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ ಇಂತಹ ಘಟನೆಗಳು ವಿವಿಗೆ ಮಾತ್ರ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿವೆ. ಏಕೆಂದರೆ ಇಂತಹ ಘಟನೆ ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಸಂಶೋಧನಾ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರಿಂದ ಲೈಂಗಿಕ ಕಿರುಕುಳ ಪ್ರಕರಣ ನಡೆದಿತ್ತು. ಆಗ ಪ್ರಾಧ್ಯಾಪಕರು ಕೆಲ ತಿಂಗಳ ಕಾಲ ಜೈಲುವಾಸ ಕೂಡ ಅನುಭವಿಸಿ ಬಂದಿದ್ದಾರೆ. ಇದೇ ವಿಶ್ವವಿದ್ಯಾಲಯದಲ್ಲಿ ಸಂಶೋಧಾನ ವಿದ್ಯಾರ್ಥಿಗಳಿಂದ ಗೈಡ್​ಗಳು ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆಗಳು ನಡೆದಿವೆ. ಗ್ರಂಥಾಲಯ ಅಧಿಕ್ಷಕರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ವಿವಿಗೆ ಯಾರು ದೂರು ನೀಡಿಲ್ಲ. ಪೊಲೀಸರಿಂದಲು ಕೂಡ ನಮಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಪಡೆದು, ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ವಿಶ್ವವಿದ್ಯಾಲಯದ ಘನತೆ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗುಲ್ಬರ್ಗ ವಿವಿಯ ಕುಲಪತಿ ದಯಾನಂದ್ ಅಗಸರ್ ಹೇಳಿದ್ದಾರೆ.

ವಿಶ್ವವಿದ್ಯಾಲಯವನ್ನು ಬಿಡದ ವಿವಾದದ ಸರಣಿ 

ಒಂದೇ ವಿಭಾಗದ ಪ್ರಾಧ್ಯಾಪಕರು ಕಚ್ಚಾಡಿಕೊಂಡ ಘಟನೆ ನಡೆದಿದೆ. ಒಂದು ವಿಭಾಗದ ಪ್ರಾಧ್ಯಾಪಕ ಮತ್ತೊಂದು ವಿಭಾಗದ ಪ್ರಾಧ್ಯಾಪಕರ ಕಚೇರಿಗೆ ಹೋಗಿ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಮೌಲ್ಯಮಾಪನ ಮಾಡುವ ಕುಲಸಚಿವರ ಕಚೇರಿಗೆ ಹೋಗಿ, ಅವರ ಮೇಲೆ ಕೆಲವರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಂತು ಆಗಿಂದಾಗ ನಡೆಯುತ್ತಲೇ ಇದೆ. ಇವು ಇತ್ತೀಚಿನ ಕೆಲ ವರ್ಷಗಳಲ್ಲಿ ಬೆಳಕಿಗೆ ಬಂದಿರುವ ಘಟನೆಗಳು. ಇನ್ನು ಬೆಳಕಿಗೆ ಬಾರದೇ ಇರುವ, ಬೆಳಕಿಗೆ ಬಂದರು ದೂರು ದಾಖಲಾಗದೇ ಇರುವ ಅನೇಕ ಘಟನೆಗಳು ವಿವಿಯಲ್ಲಿ ನಡೆದಿವೆ.

ನಮಗೆ ಮೊದಲು ವಿವಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಹೆಮ್ಮೆಯಿತ್ತು. ಆದರೆ ಇದೀಗ ವಿವಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಮುಜುಗರ ಪಡುವಂತಾಗಿದೆ. ಮೇಲಿಂದ ಮೇಲೆ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಇನ್ನಾದರು, ತಪ್ಪಿತಸ್ಥರ ವಿರುದ್ಧ ಕಠೀಣ ಕ್ರಮಗಳನ್ನು ಕೈಗೊಂಡು, ಕೆಟ್ಟ ಕೆಲಸಗಳಿಗೆ ವಿವಿ ಬೆಂಬಲಿಸುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸುವ ಕೆಲಸ ವಿವಿಯ ಕುಲಪತಿಗಳು ಮಾಡಬೇಕಿದೆ ಎಂದು ಉಪನ್ಯಾಸಕ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲ ಅನಿಸಿಕೊಂಡಿರುವ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅನೈತಿಕ, ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ವಿಷಾಧನಿಯ. ಇನ್ನಾದರು ವಿವಿಯನ್ನು ಸರಿದಾರಿಯಲ್ಲಿ ತಗೆದುಕೊಂಡು ಹೋಗುವ ಕೆಲಸವನ್ನು ಪ್ರಮುಖ ಹುದ್ದೆಯಲ್ಲಿರುವವರು ಮಾಡಬೇಕಿದೆ. ಇಲ್ಲದಿದ್ದರೆ ಗುಲ್ಬರ್ಗ ವಿಶ್ವವಿದ್ಯಾಲಯದ ಘನತೆಗೆ ಮತ್ತಷ್ಟು ಕಪ್ಪು ಚುಕ್ಕೆಗಳು ಸೇರಿಕೊಂಡರು ಅಚ್ಚರಿಯಿಲ್ಲ.

(ವರದಿ: ಸಂಜಯ್ ಚಿಕ್ಕಮಠ-9980510149)

ಇದನ್ನೂ ಓದಿ: ಜೈವಿಕ ತಂತ್ರಜ್ಞಾನ; ಕೀಟಭಾದೆಗೆ ರಾಮಬಾಣ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸೃಷ್ಟಿಸಿದ ಕೀಟನಾಶಕ

( Illegal activities cases increased in Gulbarga University but administration maintain silence instead of take action)