ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು (ಏಪ್ರಿಲ್ 24) ನಡೆದ ವಿಶೇಷ ಸಂಪುಟ ಸಭೆ ಅಂತ್ಯವಾಗಿದ್ದು, ಬಿಸಿ ತುಪ್ಪವಾಗಿದ್ದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದರೊಂದಿಗೆ ಹಲವು ವರ್ಷಗಳಿಂದ ಇದ್ದ ಗೊಂದಲಕ್ಕೆ ಸಿದ್ದರಾಮಯ್ಯ ಸರ್ಕಾರ ತೆರೆ ಎಳೆದಿದೆ. ಹಾಗಾದ್ರೆ, ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ಯಾರಿಗೆ ಎಷ್ಟು ಹಂಚಿಕೆ ಮಾಡಲಾಗಿದೆ ಎನ್ನುವ ಡಿಟೇಲ್ಸ್ ಈ ಕೆಳಗಿನಂತಿದೆ.

ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು?
Vidhana Soudha
Edited By:

Updated on: Apr 24, 2026 | 8:39 PM

ಬೆಂಗಳೂರು, (ಏಪ್ರಿಲ್ 24): ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ (SC Internal Reservation)  ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ದಲಿತ ಎಡಗೈ ಸಮುದಾಯಕ್ಕೆ ಶೇ. 5.25, ಬಲಗೈ ಸಮುದಾಯಕ್ಕೆ ಶೇ. 5.25 ಮತ್ತು ಇತರರಿಗೆ ಶೇ. 4.5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಳಗ ಪೈಕಿ ಅವಕಾಶ ವಂಚಿತ ಉಪಜಾತಿಗಳಿಗೆ ಒಳಮೀಸಲು ಕಲ್ಪಿಸಬೇಕೆಂಬ ಸುಮಾರು ದಶಕಗಳ ಹಕ್ಕೋತ್ತಾಯ ಹಾಗೂ ಹೋರಾಟಗಳು ನಡೆದಿದ್ದು, ಇದೀಗ ಈ ಸಂಬಂಧ ಸಿದ್ದರಾಮಯ್ಯ ಸರ್ಕಾರ, ಅಳೆದು ತೂಗಿ ಕೊನೆಗೂ ಮಹತ್ವದ ನಿರ್ಣಯ ಕೈಗೊಂಡು ಒಳಮೀಸಲಾತಿ ಜಾರಿಗೆಗೆ ತೀರ್ಮಾನಿಸಿದೆ.

ರಾಷ್ಟ್ರಕ್ಕೆ ಮಾದರಿ ಆಗಬಲ್ಲ ತೀರ್ಮಾನ

ವಿಶೇಷ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್​​ಕೆ ಪಾಟೀಲ್ ಪ್ರತಿಕ್ರಿಯಿಸಿ, ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ವಾರಗಳಿಂದ ಚರ್ಚೆ ನಡೆದಿತ್ತು. ರಾಷ್ಟ್ರಕ್ಕೆ ಮಾದರಿ ಆಗಬಲ್ಲ ಮಹತ್ವವಾದ ಜನರ ಬದುಕಿಗೆ ವಿಶೇಷ ತಿರುವನ್ನು ನೀಡುವ ತೀರ್ಮಾನ ತೆಗೆದುಕೊಂಡಿದೆ. ರೋಸ್ಟರ್ ವಿಚಾರದಲ್ಲಿ ಗೊಂದಲ ಸೃಷ್ಡಿ ಆಗಿತ್ತು. ಸೂಕ್ತವಾದ ಪರಿಪೂರ್ಣ ಪರಿಹಾರ ಕಂಡು ಮಾರ್ಗದರ್ಶನ ಮಾಡಿ ಪರಿಹಾರ ಕಂಡುಕೊಳ್ಳಲು ಸಿಎಂ ಯಶಸ್ವಿಯಾಗಿದ್ದಾರೆ ಎಂದರು.

ಎ-5.25, ಬಿ-5.25, ಸಿ-4.5 ಮೀಸಲಾತಿಯೊಂದಿಗೆ  ನೇಮಕಾತಿ

ವಿಶೇಷ ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಂತಿಮವಾಗಿ ನಾವು ಸಂಪುಟದಲ್ಲಿ ಒಂದು ನಿರ್ಧಾರ ಕೈಗೊಂಡಿದ್ದೇವೆ. ಪ್ರವರ್ಗ ಎ-5.25, ಬಿ-5.25, ಸಿ-4.5 ಎಂದು ನಿರ್ಧಾರ ಮಾಡಿದ್ದು,ವಿಶೇಷ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ಯಾವುದೇ ಅಪಸ್ವರ ಇಲ್ಲದೆಯೇ ಸಂಪುಟದಲ್ಲಿ ಒಪ್ಪಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅನುಪಾತ ಅನ್ವಯವಾಗಲಿದ್ದು, ನೇಮಕಾತಿ ವೇಳೆ ಪ್ರವರ್ಗ ಎ-5.25, ಬಿ-5.25, ಸಿ-4.5 ಮೀಸಲಾತಿಯೊಂದಿಗೆ ಅಧಿಸೂಚನೆಯನ್ನು ಮತ್ತೊಮ್ಮೆ ಪ್ರಕಟ ಮಾಡುತ್ತೇವೆ. ಬಜೆಟ್​ನಲ್ಲಿ 56,432 ಹುದ್ದೆಗಳ ಭರ್ತಿ ಮಾಡುವುದಾಗಿ ಘೋಷಿಸಿದ್ದೇವೆ. ಈ 56,432 ಹುದ್ದೆಗಳ ಭರ್ತಿ ವೇಳೆ ಇದೇ ಮೀಸಲಾತಿ ಅನುಪಾತ ಅನ್ವಯವಾಗಲಿದೆ. ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಿದ ಅನುಪಾತ ಮುಂದುವರಿಯಲಿದೆ ಎಂದು ಮಾಹಿತಿ ಎಂದು ಸ್ಪಷ್ಟಪಡಿಸಿದರು.

ಹಂತ ಹಂತವಾಗಿ ಹುದ್ದೆ ಭರ್ತಿ

ಖಾಲಿ ಇರುವ ಹುದ್ದೆಗಳನ್ನ ಹಂತ ಹಂತವಾಗಿ ಭರ್ತಿ ಮಾಡುತ್ತೇವೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ.
ಈಗ ನಿರ್ಧಾರ ಆಯಿತಲ್ಲ, ಇನ್ಮುಂದೆ ಶುರು ಮಾಡುತ್ತೇವೆ. ನಮ್ಮ ಪಕ್ಷದ ನಿಲುವು ಸಮಬಾಳು-ಸಮಪಾಲು. ಯಾರಿಗೂ ಅನ್ಯಾಯವಾಗಬಾರದು ಎಂಬುವುದು ನಮ್ಮ ನಿಲುವು. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಎಲ್ಲ ದಲಿತ ಸಂಘಟನೆಗಳು ಒಪ್ಪಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು

ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಸಮುದಾಯಗಳು ಭಾಗಿಯಾಗಿದ್ದು, ಒಳ ಮೀಸಲಾತಿ ಜಾರಿಗೆ ಸಮಾವೇಶದಲ್ಲಿ ಎಲ್ಲರೂ ಒಪ್ಪಿಕೊಂಡಿದ್ದೆವು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂಕೋರ್ಟ್​ನ 7 ನ್ಯಾಯಮೂರ್ತಿಗಳ ಪೀಠ ಆದೇಶ ನೀಡಿತ್ತು. ಆ ತೀರ್ಪು ಬಂದ ನಂತರ ನಾವು ನಿವೃತ್ತ ನ್ಯಾ.ನಾಗಮೋಹನ ದಾಸ್ ಸಮಿತಿ ರಚನೆ ಮಾಡಿದ್ದೆವು. ವರದಿಯನ್ನು ಸಂಪುಟದಲ್ಲಿಟ್ಟು ಸರ್ವಾನುಮತದಿಂದ ಅಂಗೀಕರಿಸಿದ್ದು, ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ ಒಳಮೀಸಲಾತಿ ನಿಗದಿ ಮಾಡಿದ್ದೆವು. ಒಳಮೀಸಲಾತಿ ಪ್ರಮಾಣ 6, 6, 5 ಎಂದು ವರ್ಗೀಕರಣ ಮಾಡಿದ್ದೆವು. ನಂತರ ರೋಸ್ಟರ್ ಬಿಂದುವಿನಲ್ಲಿ ಗೊಂದಲ ಉಂಟಾಯಿತು. ನಂತರ ಅಲೆಮಾರಿ ಸಮುದಾಯ ನ್ಯಾಯಾಲಯದ ಮೊರೆ ಹೋದರು. ಮೀಸಲಾತಿ ಪ್ರಮಾಣ 50% ಮೀರಬಾರದೆಂದು ಕೋರ್ಟ್ ಆದೇಶಿಸಿತು. ಇಂದ್ರಾ ಸಹಾನಿ ಕೇಸ್​ನಲ್ಲಿ ಮೀಸಲಾತಿ ಪ್ರಮಾಣ 50% ಆದೇಶವಿತ್ತು. SC ಮೀಸಲಾತಿ ಪ್ರಮಾಣ 17% ಅನ್ವಯ. ನಾವು ಪ್ರವರ್ಗ ಎ-6, ಬಿ-6, ಸಿ-5 ಎಂದು ವರ್ಗೀಕರಣ ಮಾಡಿದ್ದೆವು. ಆದರೆ ಕೋರ್ಟ್ ಮೀಸಲಾತಿ ಪ್ರಮಾಣ 50% ಮೀರುವಂತಿಲ್ಲ ಎಂದಿದೆ. ಏ.16ರ ಕ್ಯಾಬಿನೆಟ್​ನಲ್ಲಿ ಒಳಮೀಸಲಾತಿ ವಿಚಾರ ಚರ್ಚೆಗೆ ಬಂದಿತ್ತು. ಒಳಮೀಸಲಾತಿ ವಿಚಾರವಾಗಿ ವಿಶೇಷ ಸಂಪುಟ ಸಭೆಗೆ ನಿರ್ಧರಿಸಿದೆವು ಎಂದರು.

Published On - 5:04 pm, Fri, 24 April 26

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us