AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲ್ಯಾಕ್ ಫಂಗಸ್ ನಿರ್ವಹಣೆ: ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಚಿಕಿತ್ಸೆ ನಂತರದ ಆರೈಕೆಯನ್ನು ಬದಲಾಯಿಸಲು ಸರ್ಕಾರ ನಿರ್ಧಾರ

‘ಸೋಂಕು ದೃಢಪಟ್ಟ ಮೊದಲ ವಾರದಲ್ಲಿ ರೋಗಿಗೆ ಸ್ಟಿರಾಯ್ಡ್​ ಕೊಡುತ್ತಿರುವುದು ಬ್ಲ್ಯಾಕ್​ ಫಂಗಸ್ ಸೋಂಕಿಗೆ ಕಾರಣವಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗೆಯ ಚಿಕಿತ್ಸೆಯನ್ನು ನಾವು ನಿಲ್ಲಿಸಿ ಎರಡನೇ ವಾರದಿಂದ ಸ್ಟಿರಾಯ್ಡ್​​ಗಳನ್ನು ನೀಡುವುದನ್ನು ಪ್ರಾರಂಭಿಸಿಸಬೇಕಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬ್ಲ್ಯಾಕ್ ಫಂಗಸ್ ನಿರ್ವಹಣೆ: ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಚಿಕಿತ್ಸೆ ನಂತರದ ಆರೈಕೆಯನ್ನು ಬದಲಾಯಿಸಲು ಸರ್ಕಾರ ನಿರ್ಧಾರ
ತಜ್ಞರೊಂದಿಗೆ ಸಭೆ ನಡೆಸುತ್ತಿರುವ ಡಾ ಸುಧಾಕರ್
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: May 27, 2021 | 4:39 PM

Share

ಬೆಂಗಳೂರು: ಬ್ಲ್ಯಾಕ್ ಫಂಗಸ್ ಅಥವಾ ಮ್ಯುಕರ್​ಮೈಕೊಸಿಸ್ ಪ್ರಕರಣಗಳು ಕರ್ನಾಟಕದಲ್ಲಿ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೋವಿಡ್-19 ಪಿಡುಗಿನ ಮೂಲಕ ಶುರುವಾಗಿರುವ ಈ ಪೀಡೆಯನ್ನು ನಿಭಾಯಿಸಲು ಚಿಕಿತ್ಸಾ ವಿಧಾನವನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ. ಗುರುವಾರದಂದು ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿದ ನಂತರ ಬೆಂಗಳೂರಿನಲ್ಲಿ ಮಧ್ಯಮದವರೊಂದಿಗೆ ಮಾತಾಡಿದ ಕರ್ನಾಟಕದ ಆರೋಗ್ಯ ಸಚಿವ ಡಾ. ಸುಧಾಕರ್, ‘ಕೊವಿಡ್-19 ಸೋಂಕು ದೃಢಪಟ್ಟ ಮೊದಲ ವಾರದಲ್ಲಿ ರೋಗಿಗೆ ಸ್ಟಿರಾಯ್ಡ್​ ಕೊಡುತ್ತಿರುವುದು ಬ್ಲ್ಯಾಕ್​ ಫಂಗಸ್ ಸೋಂಕಿಗೆ ಕಾರಣವಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗೆಯ ಚಿಕಿತ್ಸೆಯನ್ನು ನಾವು ನಿಲ್ಲಿಸಿ ಎರಡನೇ ವಾರದಿಂದ ಸ್ಟಿರಾಯ್ಡ್​​ಗಳನ್ನು ನೀಡುವುದನ್ನು ಪ್ರಾರಂಭಿಸಿಸಬೇಕಿದೆ’ ಎಂದು ಹೇಳಿದರು.

ಕೋವಿಡ್​ ಚಿಕಿತ್ಸೆಯ ನಂತರ ಸೋಂಕಿತರನ್ನು ಬಿಡುಗಡೆ ಮಾಡುವಾಗ ಅವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿನ ಲಕ್ಷಣಗಳಿವೆಯೇ ಎನ್ನುವುದನ್ನು ಸಹ ಪರೀಕ್ಷಿಸಲಾಗುವುದು ಎಂದು ಹೇಳಿದ ಸಚಿವರು,‘ ಕೋವಿಡ್-19 ಸೋಂಕಿತರ ಡಿಸ್ಚಾರ್ಜ್ ಪಾಲಿಸಿ ಮತ್ತು ಕೋವಿಡ್-ನಂತರದ ಮುಂಜಾಗ್ರತೆಗಳನ್ನು ಹೊಸದಾಗಿ ರೂಪಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ಸಚಿವರು ಹೇಳಿರುವ ಪ್ರಕಾರ ಕೋವಿಡ್​ ರೋಗಿಗಳನ್ನು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಅವರಲ್ಲಿ ಫಂಗಸ್ ಲಕ್ಷಣಗಳನ್ನು ತಪಾಸಣೆ ಮಾಡುವುದರ ಜೊತೆಗೆ ಅಗತ್ಯಬಿದ್ದಲ್ಲಿ ಎಮ್​ಆರ್​ಐ ಸ್ಕ್ಯಾನ್ ಮಾಡಿಸುವುದಾಗಿ ವೈದ್ಯರು ಹೇಳಿದರು. ಕೊವಿಡ್​-19 ಸೋಂಕಿತರು ಡಿಸ್ಚಾರ್ಜ್​ ಆದ ನಂತರವೂ ಅವರ ಆರೈಕೆ ಮುಂದುವರಿಯಲಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಒಂದು ಪ್ರತ್ಯೇಕ ಪೋಸ್ಟ್​-ಕೋವಿಡ್​ ವಾರ್ಡ್​ ಮೀಸಲಿಡಲು ಸೂಚಿಸಲಾಗಿದೆ. ಕೊವಿಡ್-19 ಸೋಂಕಿನಿಂದ ಗುಣಹೊಂದಿದವರು ಒಂದು ವಾರದ ನಂತರ ಇಂಥ ವಾರ್ಡ್​ಗಳಲ್ಲಿ ತಮ್ಮ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ ಇಲ್ಲವೇ ಟೆಲಿ-ಸಲಹೆಯನ್ನು ಪಡೆಯಬಹುದಾಗಿದೆ.

‘ಕೊವಿಡ್-19 ಸೋಂಕಿನಿಂದ ಚೇರಿಸಿಕೊಂಡ ಪ್ರತಿ ವ್ಯಕ್ತಿಯನ್ನು ಸಂಪರ್ಕಿಸಿ ಅವರಲ್ಲಿ ಫಂಗಸ್ ಲಕ್ಷಣಗಳಿವೆಯೇ ಅಂತ ವಿಚಾರಿಸಲಾಗುವುದು. ಅವರು ಲಕ್ಷನ ಕಂಡ ಬಗ್ಗೆ ಮಾಹಿತಿ ನೀಡಿದರೆ ಹೆಚ್ಚಿನ ತಪಾಸಣೆಗಾಗಿ ಅವರನ್ನು ಆಸ್ಪತ್ರೆಗಳಿಗೆ ಕರೆಸಲಾಗುವುದು’ ಎಂದು ಡಾ ಸುಧಾಕರ್ ಹೇಳಿದರು.

ರಾಜ್ಯದಲ್ಲಿ ಸುಮಾರು 95 ಜನ ಬ್ಲ್ಲ್ಯಾಕ್ ಫಂಗಸ್ ಸೋಂಕಿನಿಂದ ನರಳುತ್ತಿದ್ದು ಅವರಿಗೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಇವರಲ್ಲಿ ಸುಮಾರು 75 ಜನ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿದ್ದಾರೆ ಇಲ್ಲವೆ ಕೊವಿಡ್​ ಚಿಕಿತ್ಸೆ ನೀಡುವಾಗ ಅವರಿಗೆ ಸ್ಟಿರಾಯ್ಡ್​ಗಳನ್ನು ನೀಡಲಾಗಿತ್ತು.

ಪ್ರಾಥಮಿಕ ವರದಿಗಳ ಪ್ರಕಾರ ಬ್ಲ್ಯಾಕ್ ಫಂಗಸ್ ಸೋಂಕು ಚಿಕ್ಕ ಅಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಕೆಲವು ಪ್ರಕರಣಗಳಲ್ಲಿ ಹೋಮ್ ಐಸೋಲೇಶನಲ್ಲಿರುವ ರೋಗಿಗಳಲ್ಲಿ ಕಂಡುಬಂದಿದೆ. ‘ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಅಂತಿಮ ವರದಿಯಲ್ಲಿ ನಮಗೊಂದು ಸ್ಪಷ್ಟತೆ ಸಿಗಲಿದೆ. ಡಾ ಅಂಬಿಕಾ ಅವರ ನೇತೃತ್ವದ ಸಮಿತಿಯು ಆದಷ್ಟು ಬೇಗ ಅಂತಮ ವರದಿಯನ್ನು ಸಲ್ಲಿಸಲಿದೆ, ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದರು.

ಇದನ್ನೂ ಓದಿ: Black Fungus ಕೊವಿಡ್ ರೋಗ ಇಲ್ಲದವರಿಗೂ ಬ್ಲಾಕ್ ಫಂಗಸ್ ರೋಗ ಬರುತ್ತದೆಯೇ; ತಜ್ಞರು ಏನಂತಾರೆ?