ಬಿಸಿಲ ಝಳಕ್ಕೆ ಬೆಂದ ಕರ್ನಾಟಕ: ಆಸ್ಪತ್ರೆಗೆ ಫ್ಯಾನ್ ತಂದ ಪೋಷಕರು, ಪೊಲೀಸ್ ಶ್ವಾನಗಳಿಗೂ ಕೂಲರ್-ಎಳನೀರು ಭಾಗ್ಯ!
ರಾಜ್ಯದಲ್ಲಿ ಬಿಸಿಲಿನ ತಾಪ 42 ಡಿಗ್ರಿ ತಲುಪಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಫ್ಯಾನ್ ಇಲ್ಲದೆ ಪೋಷಕರು ಮನೆಯಿಂದಲೇ ಫ್ಯಾನ್ ತರುತ್ತಿದ್ದಾರೆ. ಬೀದರ್‌ನಲ್ಲಿ ತಂಪು ಪಡೆಯಲು ಮನೆ ಛಾವಣಿಗಳ ಮೇಲೆ ನೀರು ಹಾಯಿಸಲಾಗುತ್ತಿದ್ದರೆ, ಕಲಬುರಗಿಯಲ್ಲಿ ಶ್ವಾನದಳಕ್ಕೆ ಏರ್ ಕೂಲರ್ ಮತ್ತು ಎಳನೀರು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು, ಏಪ್ರಿಲ್ 20: ಕರ್ನಾಟಕದಲ್ಲಿ ಬಿಸಿಲಿನ ತಾಪ (Karnataka Heatwave) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೂರ್ಯನ ರಣಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಪರಿಸ್ಥಿತಿ ಕೈಮೀರಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನಸಾಮಾನ್ಯರು ಮತ್ತು ಪ್ರಾಣಿಗಳು ಪರದಾಡುವಂತಾಗಿದೆ. ಕೊಪ್ಪಳ, ಕಲಬುರಗಿ, ಯಾದಗಿರಿಯಲ್ಲಿ ಜನ ಬಿಸಿಲ ಝಳಕ್ಕೆ ಕಂಗೆಟ್ಟಿದ್ದು, ಫ್ಯಾನ್‌ಗಳು, ಎಸಿ, ಏರ್ ಕೂಲರ್ಗಳ ಮೊರೆ ಹೋಗುತ್ತಿದ್ದಾರೆ.
ಆಸ್ಪತ್ರೆಗೆ ಮನೆಯಿಂದಲೇ ಫ್ಯಾನ್ ತಂದ ಪೋಷಕರು!
ಕೊಪ್ಪಳ ಜಿಲ್ಲೆಯಲ್ಲಿ ತಾಪಮಾನ 38ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಎಸಿ ಮತ್ತು ಫ್ಯಾನ್‌ಗಳು ಕೆಟ್ಟು ನಿಂತಿರುವ ಕಾರಣ, ತಾಪಮಾನಕ್ಕೆ ತತ್ತರಿಸಿದ ಪುಟ್ಟ ಪುಟ್ಟ ಮಕ್ಕಳು ಉಸಿರುಗಟ್ಟುವ ವಾತಾವರಣದಲ್ಲಿ ನರಳುತ್ತಿದ್ದಾರೆ. ಅನಿವಾರ್ಯವಾಗಿ ಆಸ್ಪತ್ರೆಗೆ ಮನೆಯಿಂದಲೇ ಫ್ಯಾನ್ ತಂದ ಪೋಷಕರು, ಮಕ್ಕಳ ಬೆಡ್ ಪಕ್ಕದಲ್ಲಿ ಇರಿಸಿ ಧಗೆಯಿಂದ ರಕ್ಷಿಸಲು ಮುಂದಾಗಿದ್ದಾರೆ. ಐಸಿಯುನಲ್ಲಿಯೂ ಎಸಿ ಕೆಲಸ ಮಾಡುತ್ತಿಲ್ಲ ಎಂಬ ಅಳಲನ್ನು ಪೋಷಕರು ತೋಡಿಕೊಂಡಿದ್ದಾರೆ.
ರಾಯಚೂರು: ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪನೆ
ಬಿಸಿಲೂರು ರಾಯಚೂರಿನಲ್ಲಿ ಉಷ್ಣಾಂಶ 42 ಡಿಗ್ರಿ ದಾಟುತ್ತಿದ್ದು, ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ‘ಹೀಟ್ ಸ್ಟ್ರೋಕ್ ವಾರ್ಡ್’ ಸ್ಥಾಪಿಸಲಾಗಿದೆ. ವಾಂತಿ, ಭೇದಿ ಮತ್ತು ಜ್ವರದ ಲಕ್ಷಣವಿರುವವರಿಗೆ ಇಲ್ಲಿ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ.
ಬೀದರ್: ಮನೆ ಮೇಲ್ಚಾವಣಿ ಮೇಲೆ ನೀರು!
ಬೀದರ್ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ವಿಭಿನ್ನ ಹಾದಿ ತುಳಿದಿದ್ದಾರೆ. ಮರ್ಕಲ್ ಗ್ರಾಮದ ಕುಟುಂಬವೊಂದು ತನ್ನ ಮೇಲ್ಚಾವಣಿ ಮೇಲೆ ನೀರು ತುಂಬಿಸಿದ ಜನ! ಎಂಬಂತೆ ಮನೆ ಮೇಲೆ ಟಾರ್ಪಲ್ ಹೊದಿಸಿ ಅದರಲ್ಲಿ ನೀರು ನಿಲ್ಲಿಸಿದ್ದಾರೆ. ಇದರಿಂದ ಮನೆಯೊಳಗೆ ಬರುವ ಬಿಸಿಲಿನ ತಾಪ ಕಡಿಮೆಯಾಗುತ್ತಿದೆ.
ಕಲಬುರಗಿ: ಶ್ವಾನದಳಕ್ಕೆ ವಿಶೇಷ ವ್ಯವಸ್ಥೆ
ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳೂ ಬಿಸಿಲಿಗೆ ಹೈರಾಣಾಗಿವೆ. ಕಲಬುರಗಿಯಲ್ಲಿ ಪೊಲೀಸ್ ಇಲಾಖೆಯು ತನ್ನ ಶ್ವಾನದಳದ 5 ಶ್ವಾನಗಳಿಗೆ ಶ್ವಾನಗಳಿಗೆ ಏರ್ಕೂಲರ್ ವ್ಯವಸ್ಥೆ ಮಾಡಿದೆ. ಅಲ್ಲದೆ, ಶ್ವಾನಗಳಿಗೆ ಪೊಲೀಸರು ಎಳನೀರು ಕುಡಿಸಿದ್ದಾರೆ. ಶ್ವಾನಗಳನ್ನು ತಂಪಾಗಿರಿಸಲು ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಕಾಪಾಡಲು ಎಳನೀರು ಕುಡಿಸಲಾಗುತ್ತಿದೆ.
ಇದನ್ನೂ ಓದಿ: ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ ‘ಕೂಲ್’ ಟ್ರೀಟ್ಮೆಂಟ್!
ಒಟ್ಟಾರೆಯಾಗಿ ರಾಜ್ಯಾದ್ಯಂತ ಬಿಸಿಲಿನ ಪ್ರಕೋಪ ಹೆಚ್ಚಾಗಿದ್ದು, ತಂಪು ಪಾನೀಯ, ಎಸಿ, ಫ್ಯಾನ್‌ಗಳ ಮೊರೆ ಹೋದರೂ ಜನರ ಸಂಕಷ್ಟ ಮಾತ್ರ ತೀರದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




