Karnataka Dam Water Level: ಕೆಆರ್‌ಎಸ್ ಡ್ಯಾಂಗೆ ಭರ್ಜರಿ ಒಳಹರಿವು, ಜಲಾಶಯಗಳ ನೀರಿನ ಮಟ್ಟದ ವಿವರ
ಕರ್ನಾಟಕದ ಜಲಾಶಯಗಳ ಆಗಸ್ಟ್ 27 ರ ನೀರಿನ ಮಟ್ಟ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯದ ಒಳಹರಿವು 17,427 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ 109.75 ಅಡಿ ನೀರಿದ್ದು, 31.471 ಟಿಎಂಸಿ ಸಂಗ್ರಹವಿದೆ. ಒಳಹರಿವು ಮುಂದುವರಿದರೆ ಮಂಡ್ಯ ರೈತರಿಗೆ ನೀರು ಲಭ್ಯವಾಗುವ ನಿರೀಕ್ಷೆ ಹೆಚ್ಚಾಗಿದೆ.

ಬೆಂಗಳೂರು, ಆಗಸ್ಟ್ 27: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿರುವ (Monsoon Rain) ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್ (KRS Dam) ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು ಇದೀಗ 17,427 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ. ಕೇವಲ ಎರಡು ದಿನಗಳ ಹಿಂದೆ 1,682 ಕ್ಯೂಸೆಕ್‌ನಷ್ಟಿದ್ದ ಒಳಹರಿವು ಇದೀಗ ಹಲವು ಪಟ್ಟು ಹೆಚ್ಚಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಜತೆಗೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಾಳತೆ ಮೂಡಿಸಿದೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 109.75 ಅಡಿ ನೀರಿನ ಮಟ್ಟ ದಾಖಲಾಗಿದೆ. ಜಲಾಶಯದ ಒಟ್ಟು 49.452 ಟಿಎಂಸಿ ಸಾಮರ್ಥ್ಯದಲ್ಲಿ ಪ್ರಸ್ತುತ 31.471 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಆರ್‌ಎಸ್‌ನಿಂದ ಸದ್ಯ 4,514 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಉತ್ತಮ ಮಳೆ ಮುಂದುವರಿದು ಒಳಹರಿವು ನಿರಂತರವಾಗಿ ಬಂದರೆ, ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆ ಇದೆ. ಜಲಾಶಯಕ್ಕೆ ಹೆಚ್ಚಿನ ನೀರು ಬಂದರೆ ಮಂಡ್ಯ ಜಿಲ್ಲೆಯ ರೈತರ ಬೆಳೆಗಳಿಗೂ ನೀರು ಸಿಗುವ ನಿರೀಕ್ಷೆ ಹೆಚ್ಚಾಗಿದೆ.
ಇನ್ನೊಂದೆಡೆ, ರಾಜ್ಯ ಸರ್ಕಾರ ಸದ್ಯ ನಾಲ್ಕು ಕಟ್ಟು ಪದ್ಧತಿಯಲ್ಲಿ ಮಾತ್ರ ನೀರು ಪೂರೈಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭತ್ತ ಹಾಗೂ ಕಬ್ಬು ಬೆಳೆ ಬೆಳೆಯದಂತೆ ರೈತರಿಗೆ ಸರ್ಕಾರ ಮನವಿ ಮಾಡಿದೆ. ಆದರೆ ಕೆಆರ್‌ಎಸ್‌ಗೆ ಒಳಹರಿವು ಇದೇ ಪ್ರಮಾಣದಲ್ಲಿ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ನೀರು ಲಭ್ಯವಾಗುವ ನಿರೀಕ್ಷೆ ರೈತರಲ್ಲಿ ಮೂಡಿದೆ.
ಕಬಿನಿ ಜಲಾಶಯದ ನೀರಿನ ಮಟ್ಟ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಉತ್ತಮ ಒಳಹರಿವು ಮುಂದುವರಿದಿದೆ. ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಸದ್ಯ 72.76 ಅಡಿ ನೀರಿನ ಮಟ್ಟವಿದೆ. ಜಲಾಶಯದಲ್ಲಿ 13.07 ಟಿಎಂಸಿ ನೀರು ಸಂಗ್ರಹವಿದ್ದು, ಒಳಹರಿವು 7,676 ಕ್ಯೂಸೆಕ್‌ನಷ್ಟಿದೆ. ನದಿ ಹಾಗೂ ವಿವಿಧ ಕಾಲುವೆಗಳಿಗೆ ಒಟ್ಟು 7,760 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.
ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 109.75 ಅಡಿ
- ಒಳಹರಿವು: 17,427 ಕ್ಯೂಸೆಕ್
- ಹೊರಹರಿವು: 4,514 ಕ್ಯೂಸೆಕ್
- ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ಸಂಗ್ರಹ: 31.471 ಟಿಎಂಸಿ
ಮೈಸೂರು ಕಬಿನಿ ಜಲಾಶಯದ ನೀರಿನ ಮಟ್ಟ
- ಗರಿಷ್ಠ ನೀರಿನ ಮಟ್ಟ: 84.00 ಅಡಿ
- ಇಂದಿನ ನೀರಿನ ಮಟ್ಟ: 72.76 ಅಡಿ
- ಸಂಗ್ರಹ: 13.07 ಟಿಎಂಸಿ
- ಲೈವ್ ಸ್ಟೋರೇಜ್: 3.26 ಟಿಎಂಸಿ
- ಒಳಹರಿವು: 7,676 ಕ್ಯೂಸೆಕ್
- ನದಿಗೆ ಹೊರಹರಿವು: 6,100 ಕ್ಯೂಸೆಕ್
- LBC ಕಾಲುವೆ: 60 ಕ್ಯೂಸೆಕ್
- RBC ಕಾಲುವೆ: 1,600 ಕ್ಯೂಸೆಕ್
- ಒಟ್ಟು ಕಾಲುವೆ ಹೊರಹರಿವು: 1,660 ಕ್ಯೂಸೆಕ್
- ಒಟ್ಟು ಹೊರಹರಿವು: 7,760 ಕ್ಯೂಸೆಕ್
- ಮಳೆ: 10 ಮಿ.ಮೀ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ
- ಗರಿಷ್ಠ ಮಟ್ಟ (FRL): 1,633.00 ಅಡಿ
- ಪ್ರಸ್ತುತ ಮಟ್ಟ: 1,630.41 ಅಡಿ
- ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
- ಪ್ರಸ್ತುತ ಸಂಗ್ರಹ: 95.619 ಟಿಎಂಸಿ
- ಕಳೆದ 24 ಗಂಟೆಗಳ ಸರಾಸರಿ ಒಳಹರಿವು: 15,952 ಕ್ಯೂಸೆಕ್
- ತಕ್ಷಣದ ಒಳಹರಿವು: 14,525 ಕ್ಯೂಸೆಕ್
- ಕಳೆದ 24 ಗಂಟೆಗಳ ಸರಾಸರಿ ಹೊರಹರಿವು: 8,551 ಕ್ಯೂಸೆಕ್
- ಒಟ್ಟು ಕಾಲುವೆ ಹೊರಹರಿವು: 8,551 ಕ್ಯೂಸೆಕ್
ಲಿಂಗನಮಕ್ಕಿ ಜಲಾಶಯ
- ಪ್ರಸ್ತುತ ನೀರಿನ ಮಟ್ಟ: 1,797.20 ಅಡಿ
- ಒಳಹರಿವು: 9,245 ಕ್ಯೂಸೆಕ್
- ಲೈವ್ ಸ್ಟೋರೇಜ್: 58.83%
- ಇಂದಿನ ಏರಿಕೆ: 0.20 ಅಡಿ
- 2025ರ ಇದೇ ದಿನದ ಮಟ್ಟ: 1,817.30 ಅಡಿ
- 2025ರ ಲೈವ್ ಸ್ಟೋರೇಜ್: 96.23%
ಹಾಸನದ ಹೇಮಾವತಿ ಜಲಾಶಯ ನೀರಿನ ಮಟ್ಟ
- ಗರಿಷ್ಠ ಮಟ್ಟ: 2922 ಅಡಿ (37 TMC)
- ಇಂದಿನ ನೀರಿನ ಮಟ್ಟ: 2914.30 ಅಡಿ (30.092 TMC)
- ಒಳಹರಿವು: 2,210 ಕ್ಯೂಸೆಕ್
- ನದಿಗೆ ಹೊರಹರಿವು: 1,800 ಕ್ಯೂಸೆಕ್
- ಕಾಲುವೆಗೆ ಹೊರಹರಿವು: 3,700 ಕ್ಯೂಸೆಕ್
- ಕಳೆದ ವರ್ಷ ಇದೇ ದಿನದ ನೀರಿನ ಮಟ್ಟ: 2921.78 ಅಡಿ (36.890 TMC)
- ಕಳೆದ ವರ್ಷ ಒಳಹರಿವು: 7,005 ಕ್ಯೂಸೆಕ್
- ಕಳೆದ ವರ್ಷ ನದಿಗೆ ಹೊರಹರಿವು: 2,600 ಕ್ಯೂಸೆಕ್
- ಕಳೆದ ವರ್ಷ ಕಾಲುವೆಗೆ ಹೊರಹರಿವು: 5,075 ಕ್ಯೂಸೆಕ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




