ಕೊಡಗು: ಜುಲೈ ತಿಂಗಳಲ್ಲಿ ಕರ್ನಾಟಕದಾದ್ಯಂತ ಅಬ್ಬರಿಸಿದ ಮಳೆಯಿಂದಾಗಿ ಜನಜೀವನ ದುಸ್ತರಗೊಂಡಿದೆ. ಕಳೆದ ಕೆಲ ದಿನಗಳಿಂದ ಮಳೆ ಆರ್ಭಟ (Karnataka Rain) ಕೊಂಚ ತಗ್ಗಿದಂತೆ ಕಾಣುತ್ತಿತ್ತಾದರೂ ಈಗ ಆರಂಭವಾಗಿರುವ ಆಶ್ಲೇಷಾ ಮಳೆ ಮತ್ತೆ ಜೋರಾಗಿ ಸುರಿಯಲಾರಂಭಿಸಿದೆ. ಈ ಬಾರಿಯಂತೂ ಮೇ ತಿಂಗಳಿನಿಂದಲೇ ಮಳೆಗಾಲದ ವಾತಾವರಣವಿತ್ತಾದ್ದರಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಭೂಮಿ ಒಣಗಲು ಅವಕಾಶವೇ ಸಿಕ್ಕಿಲ್ಲ ಎಂಬಂತಾಗಿ ಕೃಷಿಕರು ಅತಿಯಾದ ಮಳೆಯಿಂದ (Heavy Rain) ಕಂಗಾಲಾಗಿದ್ದಾರೆ. ಅದರಂತೆ ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆಯ ಜನರು ತತ್ತರಿಸಿದ್ದು, ಹಲವು ಕಡೆ ಸಂಪರ್ಕ ಕಡಿತವಾಗಿದೆ. ಹೀಗಿರುವಾಗಲೇ ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಹೆಮ್ಮತ್ತಾಳು-ಮುಕ್ಕೋಡ್ಲು ಮಧ್ಯೆಯ ಸಂಪರ್ಕ ಸೇತುವೆ ಕುಸಿತವಾಗಿದೆ.
ಗದಗ: ಮಲಪ್ರಭಾ ನದಿ ಪ್ರವಾಹಕ್ಕೆ ತತ್ತರಿಸಿದ ರೈತರು ಜಿಲ್ಲೆಯ ರೋಣ, ಗಾಡಗೋಳಿ, ಹೊಳೆಮಣ್ಣೂರ ತಾಲೂಕಿನ ರೈತರು ಬೆಳೆ ಕಳೆದುಕೊಂಡಿದ್ದು, ಕಳೆದ ವರ್ಷ ಪರಿಹಾರ ನೀಡುವುದಾಗಿ ಅಧಿಕಾರಿಗಳು ನೂರಾರು ರೂಪಾಯಿ ಖರ್ಚು ಮಾಡಿಸಿ ನೈಯಾಪೈಸೆ ಪರಿಹಾರ ನೀಡಿಲ್ಲ. ಈ ವರ್ಷವೂ ಇತ್ತ ನಮ್ಮ ಗೋಳು ಕೇಳಲು ಯಾರು ಬಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲಪ್ರಭಾ ನದಿ ತೀರದ ನೂರಾರು ಎಕರೆಯಲ್ಲಿನ ಹೆಸರು, ಗೋವಿನ ಜೋಳ, ಕಬ್ಬು, ಸೂರ್ಯಕಾಂತಿ ಸೇರಿ ಹಲವು ಬೆಳೆ ಹಾನಿಯಾಗಿದೆ. ಸೌಜನ್ಯಕ್ಕೂ ರೋಣ ತಾಲೂಕಿನ ತಹಶಿಲ್ದಾರ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಭೇಟಿ ನೀಡಿಲ್ಲ. ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ತವರು ಕ್ಷೇತ್ರದಲ್ಲೇ ನಿರ್ಲಕ್ಷ್ಯ ವಹಿಸಿದ್ದಾರೆ. ಅವರು ತಮ್ಮ ಸ್ಥಾನದ ಭದ್ರತೆಗಾಗಿ ಬೆಂಗಳೂರು, ದೆಹಲಿಗೆ ಹೋಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಕೆಆರ್ಎಸ್ ಡ್ಯಾಂ ಭರ್ತಿಗೆ 7 ಅಡಿ ಬಾಕಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಹಿನ್ನಲೆಯಲ್ಲಿ ಕೆಆರ್ಎಸ್ ಡ್ಯಾಂ ಭರ್ತಿಗೆ 7 ಅಡಿ ಬಾಕಿ ಇದೆ. ಒಳ ಹರಿವು 21,454 ಕ್ಯೂಸೆಕ್ಗೆ ಏರಿಕೆಯಾದರೆ, 5437 ಕ್ಯೂಸೆಕ್ ಹೊರ ಹರಿವು ಉಂಟಾಗಿದೆ. ಸಧ್ಯ ನೀರಿನ ಮಟ್ಟ 117.54 ಅಡಿಗೆ ಏರಿಕೆಯಾಗಿದ್ದು, ಡ್ಯಾಂ ಗರಿಷ್ಠ ಮಟ್ಟ 124.80 ಅಡಿಯಾಗಿದೆ.
ಇದನ್ನೂ ಓದಿ: Karnataka Rain: ಅಬ್ಬರಿಸಲಾರಂಭಿಸಿದ ಆಶ್ಲೇಷಾ; ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಮಳೆ
ಭಾರೀ ಮಳೆಗೆ ಬೆಳಗಾವಿ ಜಿಲ್ಲೆಯ ಬಹುತೇಕ ಸೇತುವೆಗಳು ಜಲಾವೃತ