ಹಲವು ತಿಂಗಳುಗಳಿಂದ ಕೊಡಗಿನ ಅಂಗನವಾಡಿಗಳಿಗಿಲ್ಲ ಮೊಟ್ಟೆ ಪೂರೈಕೆ: ಅಧಿಕಾರಿಗಳು ಹೇಳುವುದೇನು?
Anganwadi: ಕೊಡಗು ಜಿಲ್ಲೆಯ ಅಂಗನವಾಡಿಗಳಲ್ಲಿ ಕಳೆದ ಮೂರು ತಿಂಗಳಿನಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಹೇಳುವ ಪ್ರಕಾರ, ಮೊಟ್ಟೆ ಪೂರೈಕಿಯೊಂದಿಗೆ ನಮಗೆ ಮೂರು ತಿಂಗಳಿನಿಂದ ಸಂಬಳ ಬಂದಿಲ್ಲ ಎಂದಿದ್ದಾರೆ.

ಕೊಡಗು, ಡಿಸೆಂಬರ್ 08: ಜಿಲ್ಲೆಯ ಅಂಗನವಾಡಿಗಳಲ್ಲಿ (Anganwadi) ಕಳೆದ ಮೂರು ತಿಂಗಳಿನಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಅಂಗನವಾಡಿಗಳು ಈ ಪ್ರದೇಶಗಳಲ್ಲಿನ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಉತ್ತಮ ಆರೋಗ್ಯವನ್ನು ವಿಸ್ತರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಆದರೆ, ಕೊಡಗಿನಲ್ಲಿ ಮಾತ್ರ ಪೌಷ್ಠಿಕ ಆಹಾರ ಪೂರೈಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಅಂಗನವಾಡಿಗಳಿವೆ. ಅಂಗನವಾಡಿ ಕಾರ್ಯಕರ್ತೆಯರು ಹೇಳುವ ಪ್ರಕಾರ, ಜುಲೈ-ಆಗಸ್ಟ್ ತಿಂಗಳಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಂದ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಲಾಗುತ್ತಿತ್ತು. ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ದೋಷಪೂರಿತ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಿದ್ದರು. ಅಂದಿನಿಂದ ಕೊಡುಗೆ ಜಿಲ್ಲೆಯ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ನಿಂತುಹೋಗಿದೆ.
ಮಡಿಕೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಪ್ರಕಾರ, ಅವರು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗೆ ಈ ವರ್ಷದ ಮಾರ್ಚ್‌ನಿಂದ ಮೊಟ್ಟೆಗಳು ಪೂರೈಕೆಯಾಗಿಲ್ಲ ಎಂಬುವುದು ವರದಿ ಆಗಿದೆ. ಮೊಟ್ಟೆ ಖರೀದಿಸುವ ಮೊತ್ತವನ್ನು ಅಂಗನವಾಡಿ ಖಾತೆಗೆ ಜಮಾ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ. ಆದರೆ, ಬಜೆಟ್ ಇಲ್ಲವಿಲ್ಲ ಎಂಬುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಹಂಚಿಕೊಂಡಿದ್ದರಿಂದ ಅದು ಕೂಡ ಸಾಧ್ಯವಾಗಿಲ್ಲ.
ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಹಲವು ತಿಂಗಳುಗಳಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ನಮಗೆ ಮೂರು ತಿಂಗಳಿನಿಂದ ಸಂಬಳ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಯ ಅಂಗನವಾಡಿಗಳಿಗೆ ಹಾಲೇ ಸಿಗ್ತಿಲ್ಲಾ! ಯಾಕೆ ಹೀಗೆ?
‘ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಮೊಟ್ಟೆ ಪೂರೈಸಿದ ಹಿಂದಿನ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಲಾಗಿದೆ. ನಾವು ಶೀಘ್ರದಲ್ಲೇ ಮೊಟ್ಟೆಗಳನ್ನು ಖರೀದಿಸುವ ಮೊತ್ತವನ್ನು ಸಂಬಂಧಪಟ್ಟ ಬಾಲಿಕಾ ಸಮೃದ್ಧಿ ಖಾತೆಗಳಿಗೆ ವರ್ಗಾಯಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಬಸವರಾಜ್ ಎಎಂ ಅವರು ಹೇಳಿರುವುದಾಗಿ ವರದಿ ಆಗಿದೆ.
ಮಡಿಕೇರಿ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಹಣ ಡ್ರಾ ಮತ್ತು ವಿಲೇವಾರಿ ಮಾಡುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲ್ಲ ಎಂದು ವಿವರಿಸಿದ್ದಾರೆ.
‘ಸದ್ಯ ಉಸ್ತುವಾರಿ ಅಧಿಕಾರಿಯನ್ನು ನೇಮಿಸಿದ್ದೇವೆ ಮತ್ತು ಹಣವನ್ನು ವರ್ಗಾಯಿಸಲು ಅವರು ಯಾವುದೇ ತರಹದ ಡಿಜಿಟಲ್ ವ್ಯವಸ್ಥೆಯನ್ನು ಹೊಂದಿಲ್ಲ. ಈ ಡಿಜಿಟಲ್ ಕೀ ಪಡೆದ ನಂತರ ಮೊಟ್ಟೆ ಖರೀದಿ ಮತ್ತು ಸಂಬಳ ಎರಡಕ್ಕೂ ಹಣವನ್ನು ತಕ್ಷಣವೇ ವರ್ಗಾಯಿಸಲಾಗುತ್ತದೆ’ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 am, Fri, 8 December 23




