
ಕೋಲಾರ, ಸೆಪ್ಟೆಂಬರ್ 14: ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ವರುಣ ತಂಪೆರೆದಿದ್ದಾನೆ. ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ. ಮಳೆ ಇಲ್ಲದೆ ಬೆಳೆಗಳು ಒಣಗಲಾರಂಭಿಸಿದ್ದವು. ಬಿತ್ತನೆ ಮಾಡಿ ಮಳೆಗಾಗಿ ರೈತರು ಕಾದು ಕುಳಿತಿದ್ದರು. ಇದೀಗ ಗಣೇಶ ಹಬ್ಬದ ಬೆನ್ನಲ್ಲೇ ಮಳೆರಾಯ ಎಂಟ್ರಿ ಕೊಟ್ಟಿದ್ದು, ಮಳೆಯ ಸಿಂಚನದಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಈ ಬಾರಿ ಸಕಾಲಕ್ಕೆ ಮಳೆಯಾಗದೆ ತೀವ್ರ ಬರಗಾಲದ ಪರಿಸ್ಥಿತಿ ಉಂಟಾಗಿದ್ದು, ಜನರು ಮತ್ತು ರೈತರು ಹೈರಾಣಾಗಿದ್ದಾರೆ. ಹೀಗಿರುವಾಗ ಗಣೇಶ ಹಬ್ಬದಂದೇ ಮಳೆರಾಯ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾನೆ. ಜಿಲ್ಲೆಯಲ್ಲಿ ಬೆಳಿಗ್ಗೆ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಮಳೆ ಸುರಿದಿದೆ. ಇನ್ನು ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳು ಸಂಭವಿಸಿವೆ.
ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಗಾಳಿ ಮತ್ತು ಮಳೆಯ ರಭಸಕ್ಕೆ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ನಗರದ ಅಂಬೇಡ್ಕರ್ ನಗರ, ತ್ಯಾಗರಾಜ ಕಾಲೋನಿ ಹಾಗೂ ಮಲ್ಲನಾಯಕನಹಳ್ಳಿ ರಸ್ತೆ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದ ಪರಿಣಾಮ ಮಳೆ ನೀರು ಸರಾಗವಾಗಿ ಹರಿದುಹೋಗದೆ ರಸ್ತೆಗಳ ಮೇಲೆ ನದಿಯಂತೆ ಹರಿದಿದೆ. ಅಲ್ಲದೆ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ತೀವ್ರ ಪರದಾಡಿದ್ದಾರೆ.
ಇದನ್ನೂ ಓದಿ: ಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್
ವಿಷಯ ತಿಳಿಯುತ್ತಿದ್ದಂತೆ ಮುಳಬಾಗಿಲು ನಗರಸಭೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ಕಾರ್ಯ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 pm, Mon, 14 September 26