ಅಂಗಾಂಗ, ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕ ಮೆರೆದ ವೈದ್ಯ ಕುಟುಂಬ
ಅಪಘಾತದಲ್ಲಿ ಗಾಯಗೊಂಡಿದ್ದ ಕೋಲಾರದ 24 ವರ್ಷದ ವೈದ್ಯೆ ಸಂಧ್ಯಾ ಮೃತಪಟ್ಟಿದ್ದಾರೆ. ಸಂಧ್ಯಾ ಅವರ ಅಂಗಾಂಗಗಳನ್ನು ಹಾಗೂ ದೇಹವನ್ನು ದಾನ ಮಾಡುವ ಮೂಲಕ ಅವರ ಕುಟುಂಬ ಸಾರ್ಥಕತೆ ಮೆರೆದಿದೆ. ಬೂದಿಕೋಟೆ ಸರ್ಕಾರಿ ಆಸ್ಪತ್ರೆಯ ವೈದ್ಯೆಯಾಗಿದ್ದ ಸಂಧ್ಯಾ ಅವರು ಅವೈಜ್ಞಾನಿಕ ಸ್ಪೀಡ್ ಹಂಪ್‌ನಿಂದಾಗಿ ಅಪಘಾತಕ್ಕೀಡಾಗಿದ್ದರು.
ಕೋಲಾರ, ಡಿಸೆಂಬರ್ 10: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯ ಸಂಧ್ಯಾ (24) ನಿಧನರಾಗಿದ್ದಾರೆ. ಅವರ ದೇಹದ ಅಂಗಾಂಗಳನ್ನು ಹಾಗೂ ದೇಹವನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೂಲತಃ ಬೆಂಗಳೂರಿನವರಾದ (Bengaluru) ವೈದ್ಯ ಸಂಧ್ಯಾ ಕುಟುಂಬಸ್ಥರು ಕೋಲಾರದ ಕೆಜಿಎಫ್ನಲ್ಲಿ ವಾಸವಾಗಿದ್ದರು.
ಸಂಧ್ಯಾ ಅವರು ಬಂಗಾರಪೇಟೆ ತಾಲೂಕು ಬೂದಿಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವೈದ್ಯ ಸಂಧ್ಯಾ ಅವರು ಕೆಜಿಎಫ್ನಿಂದ ಬೂದಿಕೋಟೆ ಮೆಡಿಕಲ್ ಕಾಲೇಜಿಗೆ ನಿತ್ಯ ಬಸ್ನಲ್ಲಿ ಹೋಗುತ್ತಿದ್ದರು. ಆದರೆ, ಡಿಸೆಂಬರ್ 6 ರಂದು ಬಸ್ ಮಿಸ್ ಆಗಿದ್ದರಿಂದ ತಂದೆಯೊಂದಿಗೆ ಬೈಕ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಗಾಜಗ ಗ್ರಾಮದ ಬಳಿ ಅವೈಜ್ಞಾನಿಕ ಸ್ಪೀಡ್ ಹಂಪ್ ದಾಟುವ ವೇಳೆ ಬೈಕ್ ನಿಂದ ಬಿದ್ದು ಸಂಧ್ಯಾ ಅವರ ತಲೆಗೆ ಗಾಯವಾಗಿತ್ತು. ಕೂಡಲೆ ಅವರನ್ನು ಕೋಲಾರದ ಜಾಲಪ್ಪ ಹಾಗೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ಡಿ.09) ರಾತ್ರಿ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಣಿಪಾಲ್ ಆಸ್ಪತ್ರೆಗೆ ಅಂಗಾಂಗ ದಾನ ಮಾಡಲಾಗಿದ್ದು, ಕೋಲಾರದ ಜಾಲಪ್ಪಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ದೇಹದಾನ ಮಾಡಲಾಗಿದೆ. ಈ ಮೂಲಕ ಸಂಧ್ಯಾ ಕುಟುಂಬದವರು ಸಾವಿನಲ್ಲೂ ಸಾರ್ಥಕತೆ ಮೆರೆದ್ದಾರೆ.
ಸಂಧ್ಯಾ ಅವರು ಕಳೆದ 11 ತಿಂಗಳಿಂದ ಬೂದಿಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಸೇವೆಯಿಂದಲೇ ಸಂಧ್ಯಾ ಅವರು ಜನರ ಪ್ರೀತಿ ಗಳಿಸಿದ್ದರು. ಸಂಧ್ಯಾ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:22 am, Tue, 10 December 24