ಕೊಪ್ಪಳ: ಆ ಜಲಾಶಯ ಮೂರು ಜಿಲ್ಲೆ ಜನರ ಜೀವನಾಡಿ. ಇಷ್ಟು ದಿನ ಆ ಜಲಾಶಯದ ಸುತ್ತ ಮರಳು ಮಾಫಿಯಾ, ಗಣಿ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿತ್ತು. ಮರಳು ದಂಧೆಕೋರರು ತುಂಗೆಯ ಒಡಲನ್ನ ಬಗೆಯುತ್ತಿದ್ರು. ಆದ್ರೆ ಇದೀಗ ತುಂಗೆ ಒಡಲಲ್ಲಿ ಮತ್ತೊಂದು ಮಾಫಿಯಾ ಕಾಲಿಟ್ಟಿದೆ. ಅದು ಸ್ಥಳೀಯರನ್ನ ತುತ್ತನ್ನೇ ಕಿತ್ತುಕೊಂಡಿದೆ.
ಕಗ್ಗತ್ತಲ ಸಮಯ.. ಒಬ್ಬರ ಮುಖ ಒಬ್ರಿಗೆ ಕಾಣಲ್ಲ.. ಇಂಥಾದ್ರಲ್ಲಿ ಗುಂಪು ಕಟ್ಕೊಂಡು ಒಂದೇ ಸಮನೇ ಹಗ್ಗ ಎಳೆದಿದ್ದೇ ಎಳೆದಿದ್ದು. ಯಾಕೆ ಈ ಪರಿ ಹಗ್ಗ ಎಳೀತಾವ್ರೆ. ಇವರಿಗೇನ್ ತಲೆ ಕೆಟ್ಟಿದ್ಯಾ ಅಂತಾ ಕನ್ಫ್ಯೂಸ್ ಆಗಬಹುದು. ಆದ್ರೆ, ಇವರು ಎಳೆದಿದ್ದು ಹಗ್ಗಾನೇ ಇರಬಹುದು. ಆದ್ರೆ, ಬಂದಿದ್ದು ರಾಶಿ ರಾಶಿ ಮೀನು. ನೋಡಿ ರಾಶಿ ರಾಶಿ ಮೀನು. ಒಬ್ಬೊಬ್ಬರೇ ಇಷ್ಟೊಂದು ಮೀನು ಹಿಡಿದು ಮಾರಾಟ ಮಾಡ್ತಿದ್ದಾರೆ. ಆದ್ರೆ, ಬೇರೆಯವರ ಬಗ್ಗೆ ಇವ್ರೆಲ್ಲಾ ಯೋಚಿಸಿಯೇ ಇಲ್ಲ. ತಾವೇ ಅಂತಿಮ.. ತಮ್ಮ ಜೀವನವಷ್ಟೇ ಮುಖ್ಯ ಅನ್ಕೊಂಡು ಫಿಶಿಂಗ್ ಮಾಡ್ತಿದ್ದಾರೆ.
ತುಂಗಭದ್ರಾ ಡ್ಯಾಂ ಹಿನ್ನೀರಿನಲ್ಲಿ ಫಿಶ್ ಮಾಫಿಯಾ..! ಕೊಪ್ಪಳದಲ್ಲಿ ಫಿಶ್ ಮಾಫಿಯಾ ಎಗ್ಗಿಲ್ಲದೇ ನಡೀತಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಡ್ಯಾಂನ ಹಿನ್ನೀರು ಪ್ರದೇಶವನ್ನ ಮೀನುಗಾರಿಕೆಗಾಗಿ ಟೆಂಡರ್ ನೀಡಲಾಗುತ್ತೆ. ಆದ್ರೆ, ಮೀನುಗಾರರ ಸಹಕಾರ ಸಂಘದವರು, ತಮ್ಮ ಮೀನುಗಾರರಿಗೆ ಅವಕಾಶ ಮಾಡಿಕೊಡದೇ, ಒಡಿಶಾ ಮೂಲದ ಮೀನುಗಾರರಿಗೆ ಹಸ್ತಾಂತರಿಸಿದೆ. ಅವರೆಲ್ಲಾ ಇಲ್ಲೇ ನೆಲೆಯೂರಿ ಮನಸ್ಸಿಗೆ ಬಂದಂತೆ, ನಿಯಮಗಳನ್ನು ಗಾಳಿಗೆ ತೂರಿ ಮೀನಿನ ಸಂತತಿ ದೋಚ್ತಿದ್ದಾರೆ. ಇದು ಸ್ಥಳೀಯ ಮೀನುಗಾರರ ಹೊಟ್ಟೆ ಮೇಲೆ ಹೊಡೆದಂತಾಗ್ತಿದೆ.
ಇನ್ನು 20X40 ಅಳತೆಯ ಬಲೆಯನ್ನು ಬಳಸಬೇಕಾಗಿ ಸರ್ಕಾರದ ನಿಯಮವಿದೆ. ಆದ್ರೆ, ಇಲ್ಲಿ ಅದ್ಯಾವುದೂ ಪಾಲನೆ ಆಗುತ್ತಿಲ್ಲ. ಸಣ್ಣಸಣ್ಣ ಮೀನುಗಳನ್ನು ಹಿಡಿದು ಎಲ್ಲವನ್ನು ರಾಜ್ಯಗಳಿಗೆ ಮಾರಾಟ ಮಾಡ್ತಿದ್ದಾರೆ. ಇದಕ್ಕೆಲ್ಲ ತುಂಗಭದ್ರಾ ವಲಯ ಕಚೇರಿಯ ಅಧಿಕಾರಿಗಳ ಬೆಂಬಲ ಇದೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ, ಕೆಲವರಿಂದ ಈ ಬಗ್ಗೆ ದೂರು ಬಂದಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆಂದು ಅಂತಿದ್ದಾರೆ.
ಮೀನು ದಂಧೆಕೋರರು ಇಡೀ ಜಲಾಶಯವನ್ನೇ ಜಾಲಾಡಿ ಎಲ್ಲ ಮೀನನ್ನೂ ದೋಚಿಕೊಳ್ತಿದ್ದಾರೆ. ಇದು ಬಡಪಾಯಿ ಮೀನುಗಾರರ ಹೊಟ್ಟೆ ಮೇಲೆ ಕಲ್ಲು ಹೊಡೆಯುತ್ತಿದೆ. ನೂರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ನಡೆಯುತ್ತಿದ್ರೂ ಅಧಿಕಾರಿಗಳು ಗಪ್ಚುಪ್ ಕುಳಿತಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.