ಹುಲಿಗೆಮ್ಮ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಜೀವಂತ? ಮಾತಂಗಿ ದೇವಿ ದರ್ಶನಕ್ಕೆ ತಡೆ!
ಕೊಪ್ಪಳ ತಾಲೂಕಿನ ಐತಿಹಾಸಿಕ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಾತಂಗಿ ದೇವಿ ದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಅರ್ಚಕರು ಗಂಭೀರ ಆರೋಪ ಮಾಡಿದ್ದಾರೆ. ನೂತನ ಆಡಳಿತಾಧಿಕಾರಿ ಪ್ರಕಾಶ್ ರಾವ್ ವಿರುದ್ಧ ಅಸ್ಪೃಶ್ಯತೆ ಆಚರಿಸುತ್ತಿರುವ ದೂರು ಕೇಳಿಬಂದಿದ್ದು, ಇಲಾಖೆಯು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು
- ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದಲ್ಲಿ ದಲಿತರ ಮಾತಂಗಿ ದೇವಿ ದರ್ಶನಕ್ಕೆ ನಿಷೇಧ.
- ಆಡಳಿತಾಧಿಕಾರಿ ಪ್ರಕಾಶ್ ರಾವ್ ವಿರುದ್ಧ ಅಸ್ಪೃಶ್ಯತೆ ಆಚರಿಸುತ್ತಿರುವ ಗಂಭೀರ ಆರೋಪ.
- ಅರ್ಚಕರಿಂದ ಆಕ್ರೋಶ, ತಪ್ಪಿತಸ್ಥರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಆಗ್ರಹ.
ಕೊಪ್ಪಳ, ಅಕ್ಟೋಬರ್ 26: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಮುಜರಾಯಿ ಇಲಾಖೆಯ ತಕ್ಷಣದ ಗಮನ ಸೆಳೆದಿದೆ. ದೇವಸ್ಥಾನದ ಆವರಣದಲ್ಲಿರುವ, ದಲಿತ ಸಮುದಾಯಕ್ಕೆ ಸೇರಿದ ‘ಮಾತಂಗಿ ದೇವಿ’ ದರ್ಶನಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆಡಳಿತಾಧಿಕಾರಿ ವಿರುದ್ಧ ಆಕ್ರೋಶ
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಹುಲಿಗೆಮ್ಮ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಸಾಂಪ್ರದಾಯಿಕವಾಗಿ ಭಕ್ತರು ಮೊದಲು ಮಾತಂಗಿ ದೇವಿಗೆ ಮೀಸಲು ಬುತ್ತಿ ಅರ್ಪಿಸಿ, ಸ್ನಾನ ಮಾಡಿ ನಂತರ ಹುಲಿಗೆಮ್ಮ ದೇವಿಯ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ, ಇತ್ತೀಚೆಗೆ ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ್ ರಾವ್ ಎಂಬುವರು ಮಾತಂಗಿ ದೇವಸ್ಥಾನದ ದರ್ಶನಕ್ಕೆ ದಿಢೀರ್ ನಿಷೇಧ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.
ಅರ್ಚಕರ ಅಸಮಾಧಾನ
ಈ ವಿಷಯವಾಗಿ ಮಾತಂಗಿ ದೇವಿ ದೇವಸ್ಥಾನದ ಅರ್ಚಕರು ಸ್ವತಃ ಆಡಳಿತಾಧಿಕಾರಿ ಪ್ರಕಾಶ್ ರಾವ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ದೇವಸ್ಥಾನದಲ್ಲಿ ಇಂದಿಗೂ ಅಸ್ಪೃಶ್ಯತೆಯನ್ನು ಜೀವಂತವಾಗಿಡಲಾಗಿದೆ. ದಲಿತ ಸಮುದಾಯದ ಜನರಿಗೆ ಹಾಗೂ ಇತರ ಭಕ್ತರಿಗೆ ಮಾತಂಗಿ ದೇವಿಯ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಪ್ರಕಾಶ್ ರಾವ್ ಅವರು ಬಂದ ಮೇಲೆಯೇ ಈ ರೀತಿಯ ತಾರತಮ್ಯ ಆರಂಭವಾಗಿದೆ. ಸರ್ಕಾರ ಹಾಗೂ ಮುಜರಾಯಿ ಇಲಾಖೆಯು ಇವರ ವಿರುದ್ಧ ತಕ್ಷಣವೇ ಸುಮೊಟೊ (ಸುವೊ ಮೋಟೊ) ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಅರ್ಚಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸ್ಥಳೀಯ ದಲಿತ ಸಂಘಟನೆಗಳು ಹಾಗೂ ಭಕ್ತಾದಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಮುಜರಾಯಿ ಸಚಿವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




