ಹುಬ್ಬಳ್ಳಿಯಲ್ಲಿ ನಿಲ್ಲದ ಮಾಂಜಾ ದಾರ ಹಾವಳಿ: ಪೊಲೀಸ್ ಕಾರ್ಯಾಚರಣೆ ಚುರುಕು, ಎರಡೇ ದಿನಗಳಲ್ಲಿ 124 ಕಡೆ ದಾಳಿ
ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಎರಡು ದಿನಗಳಲ್ಲಿ 124 ಸ್ಥಳಗಳಲ್ಲಿ ಪರಿಶೀಲನೆ ನಡೆಸಿ, 67 ಅಂಗಡಿಗಳನ್ನು ತಪಾಸಣೆ ಮಾಡಿ, 63 ಸ್ಥಳಗಳಿಂದ ಅಪಾಯಕಾರಿ ದಾರ ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಗೋಲ್ಡನ್ ಪಾರ್ಕ್‌ನಲ್ಲಿ ಮಾಂಜಾ ದಾರಕ್ಕೆ ಸಿಲುಕಿದ್ದ ಗೂಬೆಯನ್ನು ರಕ್ಷಿಸಲಾಗಿದೆ.

ಮುಖ್ಯಾಂಶಗಳು
- ಮಾಂಜಾ ದಾರಕ್ಕೆ ಮಹಿಳೆ ಬಲಿ, ಪೊಲೀಸರ ಕಾರ್ಯಾಚರಣೆ ಚುರುಕು
- 63 ಸ್ಥಳಗಳಿಂದ ಅಪಾಯಕಾರಿ ದಾರ ವಶಕ್ಕೆ
- ಗೂಬೆಯನ್ನು ರಕ್ಷಿಸಿ ಮತ್ತೆ ಹಾರಿಬಿಟ್ಟ ಯುವಕ
ಹುಬ್ಬಳ್ಳಿ, ಅಕ್ಟೋಬರ್ 26: ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರ ಮನುಷ್ಯರಿಗಷ್ಟೇ ಅಲ್ಲ, ಪಕ್ಷಿಗಳ ಜೀವಕ್ಕೂ ಕಂಟಕವಾಗಿ ಪರಿಣಮಿಸಿದೆ. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಮಾಂಜಾ ದಾರಕ್ಕೆ ಸಿಲುಕಿ 38 ವರ್ಷದ ವಿದ್ಯಾ ಗೌಡರ್ ಮೃತಪಟ್ಟಿರುವ ಘಟನೆ ಬೆನ್ನಲ್ಲೇ ಪೊಲೀಸರು ನಿಷೇಧಿತ ದಾರದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಮತ್ತೊಂದೆಡೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೂಡ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದೇ ವೇಳೆ, ಮರದಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ ಗೂಬೆಯೊಂದನ್ನು ಯುವಕನೊಬ್ಬ ರಕ್ಷಿಸಿದ್ದು, ಚಿಕಿತ್ಸೆ ನೀಡಿ ಮತ್ತೆ ಸ್ವತಂತ್ರವಾಗಿ ಹಾರಲು ನೆರವಾಗಿದ್ದಾರೆ.
ಮಾಂಜಾ ದಾರದ ವಿರುದ್ಧ ಪೊಲೀಸರ ಕಾರ್ಯಾಚರಣೆ ಚುರುಕು
ಮಾಂಜಾ ದಾರದಿಂದ ಸಂಭವಿಸುವ ಅಪಘಾತಗಳಿಗೆ ಕಡಿವಾಣ ಹಾಕಲು ಹುಬ್ಬಳ್ಳಿ-ಧಾರವಾಡ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈವರೆಗೆ ಮಾಂಜಾ ದಾರಕ್ಕೆ ಸಂಬಂಧಿಸಿದಂತೆ 16 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 124 ಸ್ಥಳಗಳಲ್ಲಿ ಪರಿಶೀಲನೆ ನಡೆಸಿ, 67 ಮಾಂಜಾ ದಾರ ಮಾರಾಟದ ಅಂಗಡಿಗಳನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ 63 ಸ್ಥಳಗಳಿಂದ ಅಪಾಯಕಾರಿ ದಾರವನ್ನು ವಶಪಡಿಸಿಕೊಂಡಿದ್ದಾರೆ.
ಮಾಂಜಾ ದಾರದ ಬಳಕೆಯಿಂದ ಸಂಭವಿಸುವ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲೂ ವಿಡಿಯೋ ಮತ್ತು ಪೋಸ್ಟರ್‌ಗಳನ್ನು ಪ್ರಕಟಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ಈ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿದೆ.
82 ವಾರ್ಡ್‌ಗಳಲ್ಲಿ ಪಾಲಿಕೆಯಿಂದ ಜಾಗೃತಿ ಅಭಿಯಾನ
ಮಾಂಜಾ ದಾರದಿಂದ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಜಾಗೃತವಾಗಿದೆ. ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಮನೆಮನೆಗೆ ಕಸ ಸಂಗ್ರಹಿಸಲು ತೆರಳುವ ವಾಹನಗಳ ಧ್ವನಿವರ್ಧಕಗಳ ಮೂಲಕ ಜಾಗೃತಿ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಮಾಂಜಾ ದಾರ ಬಳಕೆಯಿಂದ ಉಂಟಾಗುವ ಅಪಾಯಗಳು ಹಾಗೂ ಅದನ್ನು ಬಳಸಿದರೆ ಎದುರಾಗಬಹುದಾದ ಪೊಲೀಸ್ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಗಾಳಿಪಟ ಹಾರಿಸುವಾಗ ಅಪಾಯಕಾರಿ ದಾರ ಬಳಸದಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ.
ಮಾಂಜಾ ದಾರಕ್ಕೆ ಸಿಲುಕಿ ಮರದಲ್ಲಿ ನೇತಾಡುತ್ತಿದ್ದ ಗೂಬೆ
ಮಾಂಜಾ ದಾರ ಪಕ್ಷಿಗಳಿಗೂ ಎಷ್ಟು ಅಪಾಯಕಾರಿ ಎಂಬುದಕ್ಕೆ ಹುಬ್ಬಳ್ಳಿಯ ವಿಜಯನಗರದ ಗೋಲ್ಡನ್ ಪಾರ್ಕ್‌ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಮರದಲ್ಲಿ ನೇತಾಡುತ್ತಿದ್ದ ಮಾಂಜಾ ದಾರಕ್ಕೆ ಸಿಲುಕಿದ ಗೂಬೆಯೊಂದು ಹೊರಬರಲಾಗದೆ ಒದ್ದಾಡುತ್ತಿತ್ತು. ಗೂಬೆಯ ಚೀರಾಟ ಗಮನಿಸಿದ ಗೋಲ್ಡನ್ ಪಾರ್ಕ್‌ನ ಎನೋಸ್ ಎಂಬ ಯುವಕ ತಕ್ಷಣ ಅದರ ರಕ್ಷಣೆಗೆ ಮುಂದಾಗಿದ್ದಾರೆ. ಗೂಬೆಯನ್ನು ಮಾಂಜಾ ದಾರದಿಂದ ಬಿಡಿಸಿ, ಅದಕ್ಕೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಗೂಬೆ ಚೇತರಿಸಿಕೊಂಡಿರುವುದನ್ನು ಖಚಿತಪಡಿಸಿಕೊಂಡು ಆಕಾಶಕ್ಕೆ ಹಾರಿಬಿಟ್ಟಿದ್ದಾರೆ. ಯುವಕನ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಂಜಾ ದಾರ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನೋಸ್ ಆಗ್ರಹಿಸಿದ್ದಾರೆ. ಮನುಷ್ಯರಷ್ಟೇ ಅಲ್ಲದೆ ಪಕ್ಷಿಗಳಿಗೂ ಅಪಾಯಕಾರಿಯಾಗಿರುವ ಈ ದಾರವನ್ನು ಯಾರೂ ಬಳಸಬಾರದು ಎಂದು ಮನವಿ ಮಾಡಿದ್ದಾರೆ.
ಐದು ವರ್ಷಗಳಲ್ಲಿ ಮಾಂಜಾ ದಾರಕ್ಕೆ 11 ಮಂದಿ ಬಲಿ
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಮಾಂಜಾ ದಾರಕ್ಕೆ ಸಿಲುಕಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಇಂತಹ ಘಟನೆಗಳಿಂದ ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ನೋವು ಅನುಭವಿಸುವಂತಾಗಿದೆ. ಮಾಂಜಾ ದಾರದಿಂದ ಮನುಷ್ಯರಿಗೆ ಗಾಯವಾಗುವುದರ ಜತೆಗೆ ಪಕ್ಷಿಗಳ ಜೀವಕ್ಕೂ ಅಪಾಯ ಎದುರಾಗುತ್ತಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಬ್ರೇಕ್: ಆನ್‌ಲೈನ್‌ನಲ್ಲಿ ಭರ್ಜರಿ ಮಾರಾಟ; ವ್ಯಾಪಾರಿಗಳು ಆಕ್ರೋಶ
ಹೀಗಾಗಿ, ನಿಷೇಧಿತ ಮಾಂಜಾ ದಾರದ ಮಾರಾಟ ಮತ್ತು ಬಳಕೆಯನ್ನು ತಡೆಯಲು ಕಾರ್ಯಾಚರಣೆ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ. ಪೊಲೀಸರು ಕೈಗೊಂಡಿರುವ ಕ್ರಮಗಳ ಜತೆಗೆ ಸಾರ್ವಜನಿಕರೂ ಜವಾಬ್ದಾರಿಯಿಂದ ವರ್ತಿಸಿ, ಅಪಾಯಕಾರಿ ದಾರ ಬಳಕೆಯಿಂದ ದೂರವಿರಬೇಕು. ಗಾಳಿಪಟ ಹಾರಿಸುವ ಸಂಭ್ರಮ ಮತ್ತೊಬ್ಬರ ಜೀವಕ್ಕೆ ಅಥವಾ ಪಕ್ಷಿಗಳ ಬದುಕಿಗೆ ಕಂಟಕವಾಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Mon, 26 October 26




