ಕಾಂಗ್ರೆಸ್ ಪ್ರತಿಭಟನೆಯಲ್ಲೇ ASI ಮಾಂಗಲ್ಯ ಸರ ಕಳವು, ಲೇಡಿ ಪೊಲೀಸ್ ಚೈನ್ ಕದ್ದ ಆ ಕೈ ಯಾವುದು?
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೇರಿಕೊಂಡು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆ ವೇಳೆ ನೂಕುನುಗ್ಗಲಿನಲ್ಲಿ ಬಂದೋಬಸ್ತ್ನಲ್ಲಿದ್ದ ಲೇಡಿ ಪೊಲೀಸ್ ಅಧಿಕಾರಿಯ ಮಾಂಗಲ್ಯ ಸರ ಮಿಸ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ವೇಳೆಯಲ್ಲೇ ಎಎಸ್ಐ ಚಿನ್ನದ ಸರ ಕಳ್ಳತನವಾಗಿದ್ದು, ಮಹಿಳಾ ಪೊಲೀಸ್ ಕಣ್ಣೀರಿಟ್ಟಿದ್ದಾರೆ.

ಶಿವಮೊಗ್ಗ, (ಡಿಸೆಂಬರ್ 18): ಕಾಂಗ್ರೆಸ್ ಪ್ರತಿಭಟನೆಯ (Congress Protest) ಬಂದೋಬಸ್ತ್ ವೇಳೆ, ಕರ್ತವ್ಯ ನಿರತ ಮಹಿಳಾ ಪೊಲೀಸ್ (Lady Police) ಅಧಿಕಾರಿಯೊಬ್ಬರ 60 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಇಡಿ ಮೇಲೆ ಪ್ರಭಾವ ಬೀರಿ ಅನಗತ್ಯ ಆರೋಪ ಸೃಷ್ಟಿಸಿರುವುದು ಹಾಗೂ ಮನ್ರೇಗಾ ಹೆಸರು ಬದಲಾವಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು (ಡಿಸೆಂಬರ್ 18) ಬೆಳಗ್ಗೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಪೊಲೀಸರು ಮಧ್ಯೆ ಪ್ರವೇಶಿಸಿದ್ದು, ಪ್ರತಿಭಟನೆಕಾರರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದರಿಂದ ಸ್ಥಳದಲ್ಲಿ ಹೈಡ್ರಾಮಾವೇ ನಡೆದಿದ್ದು, ತಳ್ಳಾಟ ನೂಕಾಟದಲ್ಲಿ ಬಂದೋಬಸ್ತ್ ನಲ್ಲಿದ್ದ ಮಹಿಳಾ ಎಎಸ್ಐ ಅಮೃತಬಾಯಿ ಅವರ ಕೊರಳಿನಲ್ಲಿದ್ದ ಬಂಗಾರದ ತಾಳಿಯನ್ನೇ ಕಿರಾತಕರು ಎಗರಿಸಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅಧಿಕಾರಿ ಸ್ಥಳದಲ್ಲೇ ಕಣ್ಣೀರು ಹಾಕಿದ್ದು, ಈ ಸಂಬಂಧ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಮಾಂಗಲ್ಯ ಸರ ಕಳೆದುಕೊಂಡು ಕಣ್ಣೀರಿಟ್ಟ ಎಎಸ್ಐ
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಬಂದೋಬಸ್ತ್‌ನಲ್ಲಿ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಎಎಸ್ಐ ಆಗಿರುವ ಅಮೃತಾ ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಈ ವೇಳೆ ಎಎಸ್‍ಐ ಅಮೃತಾಬಾಯಿಯವರ ಕೊರಳಲ್ಲಿ ಇದ್ದ 60 ಗ್ರಾಂ ತೂಕದ 8 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕಳ್ಳತನವಾಗಿದೆ. ಮಾಂಗಲ್ಯ ಸರ ಕಳುವಾಗಿರುವುದು ತಿಳಿಯುತ್ತಿದ್ದಂತೆಯೇ ಎಎಸ್‌ಐ ಅಮೃತಾ ಅವರು ಸ್ಥಳದಲ್ಲೇ ಕಣ್ಣೀರಿಟ್ಟರು.ಕರ್ತವ್ಯ ನಿರತ ಅಧಿಕಾರಿಯೊಬ್ಬರ ಸರವೇ ಕಳುವಾಗಿರುವುದು ಇಲಾಖೆಗೆ ಮತ್ತು ಸಹೋದ್ಯೋಗಿಗಳಿಗೆ ಭಾರೀ ಮುಜುಗರ ಹಾಗೂ ಆತಂಕ ತಂದಿದೆ. ಕೂಡಲೇ ಸ್ಥಳದಲ್ಲಿದ್ದ ಇತರೆ ಪೊಲೀಸ್ ಅಧಿಕಾರಿಗಳು ಅಮೃತಾ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಇದನ್ನೂ ನೋಡಿ: Shivamogga: ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಪೊಲೀಸರು ಎಂಬ ಭಯವೂ ಇಲ್ಲವೇ?
ಪೊಲೀಸರನ್ನೇ ದೋಚಿರುವುದು ಅಚ್ಚರಿಗೆ ಕಾರಣವಾಗಿದ್ದು, ಖದೀಮರಿಗೆ ಪೊಲೀಸರು ಎಂಬ ಭಯವೂ ಇಲ್ಲದಂತಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಯಾಕಂದ್ರೆ ಓರ್ವ ಮಹಿಳಾ ಪೊಲೀಸ್ ಕುತ್ತಿಗೆ ಕೈಹಾಕಿ ಕದ್ದಿರುವುದು ಅಂದ್ರೆ ಸಾಮಾನ್ಯ ಅಲ್ಲ. ಮೊದಲೇ ಕರ್ನಾಟಕದಲ್ಲಿ ಅಪರಾಧ ಚಟುವಟಕೆಗಳು ಎಗ್ಗಿಲ್ಲದೇ ನಡೆದಿದ್ದು, ಕೆಲ ಅಪರಾಧ ಪ್ರಕರಣಲ್ಲಿ ಪೊಲೀಸರು ಸಹ ಶಾಮೀಲಾಗಿರುವ ಉದಾಹರಣೆಗಳು ಇವೆ. ಇಂತಹ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಸರ ಕದ್ದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಪೊಲೀಸರು ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.ಪ್ರತಿಭಟನೆಯ ವೇಳೆ ಸೆರೆಹಿಡಿಯಲಾದ ವಿಡಿಯೋ ತುಣುಕುಗಳು ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಕಾಂಗ್ರೆಸ್ ಪ್ರತಿಭಟನೆಯ ಗದ್ದಲದ ನಡುವೆ ಈ ದುಷ್ಕೃತ್ಯ ಎಸಗಿದವರು ಯಾರು? ಪ್ರತಿಭಟನೆಯಲ್ಲಿದ್ದವರೇ ಕದ್ದರೇ ಅಥವಾ ಬೇರೆ ಕಳ್ಳ ಗುಂಪಿನಲ್ಲಿ ನುಸುಳಿ ಕದ್ದುಕೊಂಡು ಹೋಗಿದ್ದಾನೆಯೇ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Thu, 18 December 25



