ಮಂತ್ರ ಮಾಂಗಲ್ಯ ಅರ್ಥ ಮಾಡಿಕೊಂಡಲ್ಲಿ ನೆಮ್ಮದಿ ನಿಶ್ಚಿತ; ಕುವೆಂಪು ಅವರ ಸರಳ ಮದುವೆ ಪದ್ಧತಿ ನಿಯಮ ಹೇಗಿದೆ?

ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ಎಂದು ಕರೆಸಿಕೊಳ್ಳುವ ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯೇ ಮಂತ್ರ ಮಾಂಗಲ್ಯ. ವರದಕ್ಷಿಣೆ, ಗೊಡ್ಡು ಸಂಪ್ರದಾಯ, ಅರ್ಥವಿಲ್ಲದ ಆಚರಣೆ, ಆಡಂಬರವನ್ನು ಒಳಗೊಂಡ ಮದುವೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಕುವೆಂಪುರವರು 1960ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ ಮದುವೆ.

ಮಂತ್ರ ಮಾಂಗಲ್ಯ ಅರ್ಥ ಮಾಡಿಕೊಂಡಲ್ಲಿ ನೆಮ್ಮದಿ ನಿಶ್ಚಿತ; ಕುವೆಂಪು ಅವರ ಸರಳ ಮದುವೆ ಪದ್ಧತಿ ನಿಯಮ ಹೇಗಿದೆ?
ಏನಿದು ಮಂತ್ರ ಮಾಂಗಲ್ಯ? ಇದು ಹೇಗೆ ನಡೆಯುತ್ತೆ?
Follow us
ಆಯೇಷಾ ಬಾನು
|

Updated on: Apr 16, 2024 | 5:04 PM

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಈ ಮಾತಿನ ಅರ್ಥ ಮನೆ ಕಟ್ಟುವುದಾಗಲೀ, ಮಕ್ಕಳ ಮದುವೆ ಮಾಡುವ ವಿಚಾರವಾಗಲಿ ಸುಲಭದ್ದಲ್ಲ. ಹಲವು ಬಗೆಯ ಕಷ್ಟಗಳು, ಸವಾಲುಗಳನ್ನು ಎದುರಿಸಬೇಕಾಗುತ್ತೆ. ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದ ಜನರಿಗೆ ಈ ಮಾತಿನ ಅರ್ಥದ ಅನುಭವ ಚೆನ್ನಾಗಿಯೇ ಆಗಿರುತ್ತೆ. ಮಕ್ಕಳ ಮದುವೆ ಮಾಡಲು ಪೋಷಕರು ಹಗಲು-ರಾತ್ರಿ ದುಡಿಯುವುದನ್ನು ನೋಡಿದ್ದೇವೆ. ಚೀಟಿ, ಸಾಲ ಅಂತೆಲ್ಲ ಮಾಡಿಕೊಂಡು ಮದುವೆ ಮಾಡಿಸಿದ ನಂತರವೂ ಗಂಜಿ ಕುಡ್ಕೊಂಡು ಹತ್ತಾರು ವರ್ಷ ಸಾಲ ತೀರಿಸುವುದುಂಟು. ಅದೆಷ್ಟೋ ತಂದೆ-ತಾಯಿ ಸಾಲ ತೀರಿಸಲಾಗದೆ, ನೆಮ್ಮದಿಯಿಂದ ಬದುಕು ನಡೆಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದನ್ನೂ ನಾವು ನೋಡಿದ್ದೇವೆ. ಹೀಗಾಗಿ ಈ ಜಂಜಾಟಗಳೇ ಬೇಡ ಎನ್ನುವವರು ಮಂತ್ರ ಮಾಂಗಲ್ಯ ಪದ್ಧತಿಯ ಮೂಲಕ ಹೊಸ ಜೀವನ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕುವೆಂಪು ಅವರ ‘ ಮಂತ್ರ ಮಾಂಗಲ್ಯ ‘ ನಿಜಕ್ಕೂ ಪ್ರಸ್ತುತ. ಅರ್ಥ ಮಾಡಿಕೊಂಡಲ್ಲಿ ನೆಮ್ಮದಿ ನಿಶ್ಚಿತ.

ಕುವೆಂಪು ಅವರು ಸಾಹಿತಿ, ಕವಿ, ಬರಹಗಾರ, ಪ್ರಾಧ್ಯಾಪಕರಷ್ಟೇ ಅಲ್ಲ ಶ್ರೇಷ್ಠ ಸಮಾಜ ಸುಧಾರಕರೂ ಹೌದು. ಸಮಾಜದಲ್ಲಿದ್ದ ಮೇಲು ಕೀಳು, ಅಸಮಾನತೆ, ಮೌಢ್ಯ, ದುಂದುವೆಚ್ಚ, ಪುರೋಹಿತಶಾಹಿಗಳ ವಿರುದ್ಧ ಧ್ವನಿ ಎತ್ತಿದ್ದವರು. ವಿಶ್ವಮಾನವ ಕುವೆಂಪು ಅವರು ಮದುವೆ ಎಂಬುವುದು ಅದ್ದೂರಿತನ ಮತ್ತು ಮೌಢ್ಯಗಳಿಂದ ತುಂಬಿದೆ ಎಂದು ಆ ಆಚರಣೆಗೆ ಬೇರೆಯದ್ದೇ ರೂಪ ಕೊಟ್ಟು, ಅದನ್ನು ಪ್ರಚಾರ ಮಾಡಲು ಶ್ರಮವಹಿಸಿದರು.

ಮದುವೆಗಾಗಿ ಜನರು ದುಂದುವೆಚ್ಚ ಮಾಡುತ್ತಿದ್ದಾರೆ. ಅದರಿಂದ ಸಾಲಬಾಧೆಗೆ ಸಿಲುಕುತ್ತಿದ್ದಾರೆ. ಅಲ್ಲಿದ್ದ ಕಂದಾಚಾರವಿದೆ, ಪುರೋಹಿತಶಾಹಿ ವ್ಯವಸ್ಥೆ ಇದೆ ಎಂದು ಅವುಗಳ ವಿರುದ್ಧ ದನಿಯೆತ್ತಿದ ಕುವೆಂಪು ಅವರು, ಜನರು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಹಂಬಲಿಸಿದ್ದರು. ಇದಕ್ಕಾಗಿ ’ಮಂತ್ರ ಮಾಂಗಲ್ಯ’ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದರು.

“ನೀವು ಲೋಕವನ್ನಾಗಲಿ ಪುರೋಹಿತಶಾಹಿಯನ್ನಾಗಲಿ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ. ನಿಮ್ಮಲ್ಲಿ ಪ್ರಾಮಾಣಿಕತೆ ಏನಾದರೂ ಇದ್ದರೆ ನಾನು ಹೇಳುವ ಸಣ್ಣ ಸುಧಾರಣೆ ನಿಮ್ಮ ಜೀವನದಲ್ಲಿ ಮಾಡಿಕೊಳ್ಳಿ ನಿಮ್ಮ ಮದುವೆಯನ್ನು ವರದಕ್ಷಿಣೆ ತೆಗೆದುಕೊಳ್ಳದೆ ಶಾಸ್ತ್ರ, ಕಂದಾಚಾರಗಳಿಗೆ ಕಟ್ಟುಬೀಳದೆ ನಿಮ್ಮ ಅಂತಸ್ತಿನ ಪ್ರದರ್ಶನ ಮಾಡಲು ದುಂದು ವೆಚ್ಚ ಮಾಡದೆ ಸರಳವಾಗಿ ಮದುವೆ ಮಾಡಿಕೊಳ್ಳಿ. ಇದ್ಯಾವ ಮಹಾಕ್ರಾಂತಿ ಎಂದು ನಿಮಗನಿಸಬಹುದು. ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ನೀವು ನಂಬಿದ ಆದರ್ಶಗಳ ಮೌಲ್ಯಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ. ಆಗ ಅದರ ಅದ್ಭುತ ಅನುಭವ ಆನಂದ ನಿಮಗೆ ಗೊತ್ತಾಗುತ್ತದೆ. ಆದರ್ಶಗಳು ನಾವು ದಿನ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳನ್ನು ಹಾಗೂ ನಮ್ಮ ಜೀವನದ ಉಸಿರು”. -ಕುವೆಂಪು

ಮಂತ್ರ ಮಾಂಗಲ್ಯದ ಸರಳ ಆಚರಣೆಗಳನ್ನು ಜನರಿಗೆ ತಿಳಿಸಲು ಕುವೆಂಪು ಅವರು ಮಂತ್ರ ಮಾಂಗಲ್ಯ ಎಂಬ ಪುಟ್ಟ ಪುಸ್ತಕವೊಂದನ್ನು ಹೊರತಂದಿದ್ದರು. ಈ ಪುಸ್ತಕದಲ್ಲಿ ಮದುವೆಯಾಗುವುದಕ್ಕೆ ಕೆಲವು ನಿಯಮಗಳನ್ನು ಮಾಡಲಾಗಿದೆ. ದುಂದುವೆಚ್ಚ ಇಲ್ಲದೆ, ಅದ್ದೂರಿತನವಿಲ್ಲದೆ, ವರದಕ್ಷಿಣೆ ಇಲ್ಲದೆ, ಕಡಿಮೆ ಜನರನ್ನು ಕರೆಸಿ ಪುಟ್ಟ ಮಂಟಪದ ಅಥವಾ ಅರಳಿ ಕಟ್ಟೆಯ ಮುಂದೆ ಉಡುಗೊರೆ, ಆಡಂಬರ, ದೊಡ್ಡತನದ ಪ್ರದರ್ಶನವಿಲ್ಲದೆ ಮದುವೆಯಾಗುವುದನ್ನು ವಿವರಿಸಲಾಗಿದೆ.

Kuvempu Concept of mantra mangalya Only oath taking no muhurat for wedding, No dowry, a unique and altogether different wedding!

ಮಂತ್ರ ಮಾಂಗಲ್ಯ ವಿವಾಹ ಸಂಹಿತೆ

ಮಂತ್ರ ಮಾಂಗಲ್ಯ ಪುಸ್ತಕದಲ್ಲಿ ಕುವೆಂಪು ಅವರು ತಾವು ದಿನವೂ ದೇವರ ಮನೆಯಲ್ಲಿ ಧ್ಯಾನಮಾಡುತ್ತಾ ಹೇಳುತ್ತಿದ್ದ ದೇವಿಸ್ತೋತ್ರಗಳನ್ನು ಸೇರಿಸಿದ್ದರು. ನಂತರ ಈ ಮಂತ್ರಗಳನ್ನು ಸೇರಿಸಿರುವುದರಿಂದ ಸಾಂಪ್ರದಾಯಿಕ ಮದುವೆಯಂತಾಗಬಹುದು ಮತ್ತು ಸಾಮಾನ್ಯ ಜನರಿಗೆ ಇದು ಅರ್ಥವಾಗುವುದಿಲ್ಲ ಎಂಬುದನ್ನು ಮನಗಂಡ ಕುವೆಂಪು ಅವರ ಪುತ್ರ, ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಇದನ್ನು ಕುವೆಂಪುರವರ ಗಮನಕ್ಕೆ ತಂದರು. ಮದುವೆಗೆ ಒಂದು ಸಾಂಸ್ಕೃತಿಕ ಅರ್ಥ ಬರಲೆಂದು ಸೇರಿಸಿದ್ದ ಶ್ಲೋಕಗಳಲ್ಲಿ ಇಡೀ ಮನುಕುಲದ ಶ್ರೇಯಸ್ಸನ್ನು ಕೋರುವ ಮಹೋನ್ನತ ಆಶಯಗಳಿರುವುದರಿಂದ ಶ್ಲೋಕಗಳ ಜೊತೆಗೆ ಅದರ ಸಾರಾಂಶವನ್ನು ಗದ್ಯ ರೂಪಕ್ಕೆ ಇಳಿಸಲು ತೇಜಸ್ವಿಯವರಿಗೆ ತಿಳಿಸುತ್ತಾರೆ.

ತೇಜಸ್ವಿಯವರು ರೈತಸಂಘದ ಮುಖಂಡ ಹಾಗೂ ಸ್ನೇಹಿತರಾದ ಎಂ.ಡಿ.ನಂಜುಂಡಸ್ವಾಮಿ ಅವರ ಜೊತೆ ಸೇರಿ ಗದ್ಯದ ರೂಪದಲ್ಲಿ ವಿವಾಹ ಸಂಹಿತೆಯೊಂದನ್ನು ಬರೆದು ಕುವೆಂಪು ಅವರ ಒಪ್ಪಿಗೆಯ ಮೆರೆಗೆ ಮಂತ್ರ ಮಾಂಗಲ್ಯ ಪುಸ್ತಕಕ್ಕೆ ಸೇರಿಸುತ್ತಾರೆ. ಕನ್ನಡ ಗದ್ಯದಲ್ಲಿದ್ದ ಈ ಹೊಸ ವಿವಾಹ ಸಂಹಿತೆಯನ್ನು ಓದಿ ಉಪದೇಶಿಸುವುದು ಸಂಸ್ಕೃತ ಶ್ಲೋಕಗಳನ್ನು ಹೇಳುವುದಕ್ಕಿಂತ ಸುಲಭವಾದ್ದರಿಂದ ಆಮೇಲಿನ ಮಂತ್ರಮಾಂಗಲ್ಯ ಮದುವೆಗಳೆಲ್ಲಾ ಗದ್ಯರೂಪದ ವಿವಾಹ ಸಂಹಿತೆಯನ್ನು ಹೆಚ್ಚಾಗಿ ಉಪಯೋಗಿಸಿ ಆರಂಭಸಿದವು.

ಇನ್ನು ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯು ಮದುವೆಯನ್ನು, ವಧೂವರರ ಮತ್ತು ಅವರ ಕುಟುಂಬದ ಖಾಸಗಿ ಸಂದರ್ಭವೆಂದು ಪರಿಗಣಿಸುತ್ತದೆ. ಇದು ಎರಡು ಕುಟುಂಬಗಳ ಆತ್ಮಾವಲೋಕನ, ಅಂತಃಸಾಕ್ಷಿಯ ಸಂದರ್ಭವಾದ್ದರಿಂದ ವಿವಾಹವು ಪ್ರಶಾಂತವಾದ, ಗಂಭೀರ ವಾತಾವರಣದಲ್ಲಿ ನಡೆಯಬೇಕು. ವಾದ್ಯ, ಓಲಗ, ತಮಟೆ, ಧ್ವನಿವರ್ಧಕಗಳಿರಬಾರದು ಎಂದು ತಿಳಿಯ ಹೇಳಿದರು.

ಮಂತ್ರ ಮಾಂಗಲ್ಯಕ್ಕೆ ಮುಹೂರ್ತ ನೋಡುವಂತಿಲ್ಲ. ಮನುಷ್ಯ ಜೀವಿತವೇ ಒಂದು ಸುಮುಹೂರ್ತ ಎಂದು ಭಾವಿಸಿರುವುದರಿಂದ ಗುಳಿಕಕಾಲ, ಯಮಗಂಡಕಾಲ, ರಾಹುಕಾಲಗಳಿಗೆ ಅಲ್ಲಿ ಸ್ಥಳವಿಲ್ಲ. ಪುಸ್ತಕದಲ್ಲಿ ನೀಡಲಾಗಿರುವ ಮಂತ್ರಗಳು, ಪ್ರತಿಜ್ಞಾವಿಧಿ ಬಿಟ್ಟು ಬೇರೆ ಶಾಸ್ತ್ರಗಳಾಗಲೀ, ಜೋಯಿಸರಿಂದ ಜಾತಕ ನೋಡಿಸುವುದು ಎಲ್ಲವೂ ನಿಷಿದ್ಧ.

ಜಾತಿಪದ್ಧತಿ, ಸ್ತ್ರೀ ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳುಗಳು ತುಂಬಿರುವ ಭಾರತೀಯ ಶಾಸ್ತ್ರಗಳು ಮತ್ತು ಆಚಾರಗಳಿಂದ ಮನುಷ್ಯರನ್ನು ವಿಮುಕ್ತರಾಗಿಸುವುದೇ ಮಂತ್ರಮಾಂಗಲ್ಯದ ಮುಖ್ಯ ಉದ್ದೇಶ. ಇಲ್ಲಿ ಪೌರೋಹಿತ್ಯ ನಿಷಿದ್ಧ. ಓದುಬರಹ ಬರುವ ಯಾರಾದರೂ ಮಂತ್ರ ಮಾಂಗಲ್ಯದ ಮಂತ್ರಗಳನ್ನು ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಬಹುದು. ಪ್ರತಿಜ್ಞಾ ವಿಧಿಗಳನ್ನು ಜೋರಾಗಿ ಎಲ್ಲರಿಗೂ ಕೇಳಿಸುವ ಹಾಗೆ ವಧೂವರರು ಪುನರುಚ್ಚರಿಸಬೇಕು. ಎಲ್ಲರ ಮುಂದೆ ತಾವು ಪ್ರಮಾಣ ಮಾಡುವುದನ್ನು ದೃಢವಾಗಿ ಹೇಳಬೇಕು. ಯಾವ ರೂಪದಿಂದಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವರದಕ್ಷಿಣೆಯನ್ನಾಗಲಿ ವಧುದಕ್ಷಿಣೆಯನ್ನಾಗಲಿ ಯಾರು ಸ್ವೀಕರಿಸಬಾರದು

ವೇದಿಕೆ ಮೇಲೆ ’ಮಂತ್ರ ಮಾಂಗಲ್ಯ’ ಮದುವೆಯ ಪರಿಕಲ್ಪನೆಯ ಬಗ್ಗೆ ನಾಲ್ಕೈದು ನಿಮಿಷದಲ್ಲಿ ಸರಳವಾಗಿ ವಿವರಿಸಬಹುದು. ವೇದಿಕೆ ಮೇಲಿರುವ ತಮಗೆ ಆದರ್ಶ ದಂಪತಿ ಎಂದು ಭಾವಿಸುವ ನಾಲ್ವರು ಮಹಾಪುರುಷರ ಚಿತ್ರಗಳನ್ನು ವೇದಿಕೆಯ ಮೇಲೆ ಅಲಂಕರಿಸಬೇಕು (ಸಾಮಾನ್ಯವಾಗಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಬಸವಣ್ಣ, ಅಂಬೇಡ್ಕರ್, ಬುದ್ಧ, ರಾಮಕೃಷ್ಣ ಪರಮಹಂಸರು, ವಿವೇಕಾನಂದ ಹೀಗೆ ಹಲವಾರು ಮಹಾಪುರುಷರ ಫೋಟೋಗಳನ್ನು ಇಡುವುದು ರೂಢಿಯಲ್ಲಿದೆ).  ಇವರಿಗೆ ನಮಸ್ಕರಿಸಿ ಗಂಡು ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು, ಇಷ್ಟ ಇದ್ದವರು ಮಾಂಗಲ್ಯಧಾರಣೆ ನೆರವೇರಿಸಿಕೊಳ್ಳಬಹುದು. ತಂದೆ-ತಾಯಿ ಅವರ ಆಶೀರ್ವಾದ ಪಡೆಯಬಹುದು. ಮಡಿ, ಮೈಲಿಗೆ, ಮುಯ್ಯಿ, ಇವಾವೂ ಇರದೆ ಮದುವೆಗೆ ಬಂದವರಿಗೆಲ್ಲಾ ಅತಿ ಸರಳವಾಗಿ ಊಟದ ವ್ಯವಸ್ಥೆ ಮಾಡಬಹುದು.

ಇನ್ನು ವೇದಿಕೆಯ ಮೇಲೆ ವಧು-ವರರು, ಅವರ ತಂದೆ ತಾಯಿಗಳು ಮತ್ತು ಮಂತ್ರ ಬೋಧಿಸುವ ಹಿರಿಯರನ್ನು ಬಿಟ್ಟು ಬೇರಾರು ಇರಬಾರದು. ಹಿರಿಯರು ಬೋಧಿಸಿದ ಮಂತ್ರಮಾಂಗಲ್ಯದ ಪ್ರತಿಜ್ಞಾ ವಿಧಿಯನ್ನು ವಧು-ವರರು ಓದಿದ ನಂತರವೇ ತಾಳಿ ಕಟ್ಟಬೇಕು. ತಪ್ಪದೇ ಪುಸ್ತಕದ ಕೊನೆಯಲ್ಲಿ ವಧು-ವರರು ಮತ್ತು ಸಾಕ್ಷಿಗಳು ಸಹಿ ಮಾಡಬೇಕು. ಭಾರತದ ಸಂವಿಧಾನದಲ್ಲಿ ಖಚಿತಪಡಿಸಿರುವಂತೆ ಮದುವೆ ಆಗುತ್ತಿರುವ ವಧು-ವರರ ವಯಸ್ಸು ಇರಬೇಕು. ವಧು-ವರರು ತಮ್ಮ ವಿವಾಹವನ್ನು ತಪ್ಪದೇ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನೊಂದಾಯಿಸುವುದು ಕಡ್ಡಾಯ.

Kuvempu Concept of mantra mangalya Only oath taking no muhurat for wedding, No dowry, a unique and altogether different wedding!

ಮಂತ್ರ ಮಾಂಗಲ್ಯ ವಿವಾಹವಾದ ಕೋಲಾರದ ಜೋಡಿ

ಮೊಟ್ಟಮೊದಲ ಮಂತ್ರ ಮಾಂಗಲ್ಯ ಯಾವುದು?

ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪರಿಕಲ್ಪನೆ ಹುಟ್ಟುಹಾಕಿದ್ದ ಕುವೆಂಪು ಅವರು ತಮ್ಮ ಮನೆಯಿಂದಲೇ ಬದಲಾವಣೆಯನ್ನು ಪ್ರಾರಂಭಿಸಿದ್ದರು. ಮೊದಲ ಮಂತ್ರ ಮಾಂಗಲ್ಯ ವಿವಾಹವಾಗಿದ್ದು ಅವರ ಮಗ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರದ್ದು. ತೇಜಸ್ವಿ ಅವರು ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದರ ಬಗ್ಗೆ ತಮ್ಮ ತಂದೆ ಕುವೆಂಪು ಅವರ ಬಳಿ ಹೇಳಿ ಒಪ್ಪಿಗೆ ಪಡೆದಿದ್ದರು. ಆದರೆ ತೇಜಸ್ವಿ ಹಾಗೂ ಅವರ ತಂದೆ ಕುವೆಂಪು ಇಬ್ಬರಿಗೂ ಆಡಂಬರದ, ಶಾಸ್ತ್ರ-ಸಂಪ್ರದಾಯ ಎಂಬ ಮದುವೆ ಮೇಲೆ ಆಸಕ್ತಿ ಇರಲಿಲ್ಲ. ಹೀಗಾಗಿ ಯಾವ ರೀತಿ ಮದುವೆಯಾಗಬೇಕು ಎಂಬುವುದನ್ನು ಯೋಜಿಸುವುದೇ ತೇಜಸ್ವಿಯವರಿಗೆ ಕಷ್ಟವಾಗಿತ್ತು. ಇದಕ್ಕಾಗಿಯೇ ಯಾವ ರೀತಿಯಲ್ಲಿ ಮದುವೆಯಾಗಬೇಕು ಎಂಬುದನ್ನು ಕುವೆಂಪು ಅವರೊಡನೆ ಚರ್ಚಿಸಲು ವಿಪರೀತ ಸಂಕೋಚದಿಂದ ಅವರ ಸ್ನೇಹಿತರಾದ ಎನ್.ಡಿ.ಸುಂದರೇಶ್ ರವರ ಸಹಾಯದಿಂದ ಕುವೆಂಪು ಅವರೊಡನೆ ವಿಷಯ ಪ್ರಸ್ತಾಪಿಸುತ್ತಾರೆ. ಆಗ ಕುವೆಂಪು ಅವರು 1966ರ ನವೆಂಬರ್ 27ರಂದು ಚಿತ್ರಕೂಟದಲ್ಲಿ ತೇಜಸ್ವಿ ಮತ್ತು ರಾಜೇಶ್ವರಿಯವರ ಮೊದಲ ಮಂತ್ರ ಮಾಂಗಲ್ಯ ವಿವಾಹ ನೆರವೇರಿಸುತ್ತಾರೆ. ತೇಜಸ್ವಿ ಮತ್ತು ರಾಜೇಶ್ವರಿ ಅವರ ಮದುವೆಯನ್ನು ಅತ್ಯಂತ ಸರಳವಾಗಿ ಕುವೆಂಪು ಅವರೇ ಮಂತ್ರಗಳನ್ನು ಓದುವುದರ ಮೂಲಕ ಮಾಡಿಸುತ್ತಾರೆ.

ಮದುವೆಯಲ್ಲಿ ಕಡಿಮೆ ಜನರು ಸೇರಬೇಕೆಂಬ ಉದ್ದೇಶದಿಂದ ತೇಜಸ್ವಿಯವರು ತಮ್ಮ ಹತ್ತಿರದ ನಾಲ್ಕಾರು ನೆಂಟರಿಷ್ಟರು, ಆಪ್ತ ಸ್ನೇಹಿತರನ್ನು ಮಾತ್ರ ಮದುವೆಗೆ ಆಹ್ವಾನಿಸಿದ್ದರು. ಆದರೆ ಮದುವೆಯ ವಿಚಾರವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಕುವೆಂಪು ಅವರ ಕೈಬರಹದಲ್ಲಿಯೇ ಲಗ್ನ ಪತ್ರಿಕೆಯನ್ನು ಬರೆಸಿ ಅದನ್ನು ಮದುವೆಯ ದಿನದಂದು ಅಂದರೆ 27/11/1966 ರಂದು ಎಲ್ಲರಿಗೂ ಸೇರುವಂತೆ ಅಂಚೆ ಮೂಲಕ ಕಳುಹಿಸಿದ್ದರು. ಲಗ್ನ ಪತ್ರಿಕೆಯಲ್ಲಿ, ಅನುಕೂಲ, ವಿರಾಮ ಸಿಕ್ಕ ನಂತರ ಆಗಮಿಸಿ ಆಶೀರ್ವದಿಸಿ ಆತಿಥ್ಯ ಸ್ವೀಕರಿಸಿ ಆಶೀರ್ವಾದ ಕೋರಬೇಕೆಂದು ಬರೆದಿದ್ದು ವಿಶೇಷ. ಕೊನೆಗೂ ಅವರ ಮದುವೆಯಲ್ಲಿ ಸುಮಾರು 30 ರಿಂದ 40 ಮಂದಿ ಮಾತ್ರ ಭಾಗವಹಿಸಿದ್ದರು. ಕರ್ವಾಲೊ ಖ್ಯಾತಿಯ ಬಿರಿಯಾನಿ ಕರಿಯಪ್ಪ ಬಂದು ಮಾಂಸಾಹಾರ ಅಡುಗೆ ಮಾಡಿದ್ದು ವಿಶೇಷ.

Kuvempu Concept of mantra mangalya Only oath taking no muhurat for wedding, No dowry, a unique and altogether different wedding

ಪೂರ್ಣಚಂದ್ರ ತೇಜಸ್ವಿ ಅವರ ಲಗ್ನ ಪತ್ರಿಕೆ

ತೇಜಸ್ವಿ ಮದುವೆ ನಂತರ ಅವರ ಸ್ನೇಹಿತರಾದ ಕಡಿದಾಳು ಶಾಮಣ್ಣ ಮತ್ತು ಶ್ರೀದೇವಿ, ಎನ್.ಡಿ.ಸುಂದರೇಶ್ ಮತ್ತು ಶೋಭಾ, ಶ್ರೀರಾಮ್ ಮತ್ತು ಪದ್ಮ ಅವರ ಮದುವೆಗಳು ಸಹ ಮಂತ್ರಮಾಂಗಲ್ಯದ ಪರಿಕಲ್ಪನೆಯಲ್ಲಿ ಅತ್ಯಂತ ಸರಳವಾಗಿ ನೆರವೇರಿವೆ. ತೇಜಸ್ವಿಯವರ ತಂಗಿಯರಾದ ಇಂದುಕಲಾ ಮತ್ತು ಸುರೇಂದ್ರ ಮದುವೆಯಲ್ಲಿ ಖ್ಯಾತ ಸಾಹಿತಿಗಳಾದ ಶ್ರೀ ಸುಜನಾರವರು, ತಾರಿಣಿ ಮತ್ತು ಚಿದಾನಂದ ಅವರ ಮದುವೆಯಲ್ಲಿ ಪ್ರಭುಶಂಕರರು ಮಂತ್ರ ಮಾಂಗಲ್ಯ ಬೋಧಿಸಿ ಮದುವೆ ಮಾಡಿಸಿದ್ದಾರೆ. ತೇಜಸ್ವಿಯವರ ಇಬ್ಬರ ಮಕ್ಕಳ ಅಂತರ್ಜಾತೀಯ ಮದುವೆಯು ಸಹ ಮಂತ್ರಮಾಂಗಲ್ಯದ ರೀತಿಯಲ್ಲಿ ನೆರವೇರಿದೆ. ಇಷ್ಟೆ ಅಲ್ಲದೆ ನಂಜುಂಡಸ್ವಾಮಿ ಮತ್ತು ರೈತ ಸಂಘದವರು ಈ ಸರಳ ವಿವಾಹವನ್ನು ತಮ್ಮ ಆಂದೋಲನದ ಒಂದು ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಹಲವಾರು ಸಾಮೂಹಿಕ ವಿವಾಹಗಳನ್ನು ಮಂತ್ರ ಮಾಂಗಲ್ಯ ರೀತಿಯಲ್ಲಿ ನಡೆಸಿದ್ದಾರೆ.

ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯ ಪ್ರತಿಜ್ಞಾ ವಿಧಿ

ಶ್ರೀಯುತ….ಎಂಬ ವರನೇ.. ಶ್ರೀಮತಿ…..ಎಂಬ ವಧುವೇ..

  1. ಇಲ್ಲಿ ಈ ದಿನ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವುದರ ಮೂಲಕ ನೀವು ಮಾನಸಿಕ, ಆಧ್ಯಾತ್ಮಿಕ, ದಾಸ್ಯಗಳ ಸಂಕೋಲೆಗಳಿಂದ ಮುಕ್ತರಾಗುತ್ತಿದ್ದೀರಿ.
  2. ನೀವು ಈ ಭೂಮಿಯಲ್ಲಿ ಯಾವುದೇ ಜಾತಿ, ಜನಾಂಗಗಳಿಗಿಂತ ಮೇಲಾದವರಲ್ಲ.
  3. ಹಾಗೆಯೇ ಯಾವುದೇ ಜಾತಿ, ಜನಾಂಗಗಳಿಗಿಂತ ಕೀಳಾದವರೂ ಅಲ್ಲ.
  4. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಜಾತಿ ಜಂಜಡಗಳಿಂದ ಮುಕ್ತರನ್ನಾಗಿಸಿದ್ದೇವೆ.
  5. ನಿಮ್ಮನ್ನು ಇಂದು ಎಲ್ಲ ಸಂಕುಚಿತ ಮತಧರ್ಮಗಳಿಂದ ನಿಮ್ಮನ್ನು ಮುಕ್ತರನ್ನಾಗಿಸಿದ್ದೇವೆ.
  6. ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿಸಿದ್ದೇವೆ.
  7. ನಿಮ್ಮನ್ನು ಇಂದು ಅಸತ್ಯ ಮತ್ತು ಮೂಢನಂಬಿಕೆಗಳಿಂದ ದೂರಾಗಿಸಿದ್ದೇವೆ.
  8. ಮನುಷ್ಯ ಜೀವಿತ ಕಾಲವೇ ಒಂದು ಸುಮಹೂರ್ತ. ಕಾಲವು ನಿರ್ಗುಣವಾದದ್ದು, ರಾಹುಕಾಲ, ಗುಳಿಕಕಾಲವನ್ನು ನೋಡುವ ಅಗತ್ಯವಿಲ್ಲ.
  9. ಜೀವಿತ ಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ನಿಮ್ಮ ಕರ್ತವ್ಯ ಮತ್ತು ನಡವಳಿಕೆಗಳಿಂದ ಸತ್ಯವನ್ನು ಅರಿತು ಒಳ್ಳೆಯ ಕಾಲವನ್ನಾಗಿ ಮಾಡಿಕೊಳ್ಳಬೇಕು.
  10. ನೀವು ಯಾವುದೇ ಮನೆ ದೇವರ, ಕುಲದೇವರ ಅಡಿಯಾಳಾಗಿ ಬದುಕಬೇಕಿಲ್ಲ. ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮೊದಲನೆಯ ಹಾಗೂ ಕೊನೆಯ ದೇವರು.
  11. ಮಾನವರೆಲ್ಲರೂ ಸಮಾನರು. ಪುರುಷರು ಸ್ತ್ರೀಗಿಂತ ಮೇಲು ಎನ್ನುವ ಎಲ್ಲಾ ಧರ್ಮಗ್ರಂಥಗಳನ್ನು, ಸಂಪ್ರದಾಯಗಳನ್ನು ಇಂದು ತ್ಯಜಿಸಿದ್ದೀರಿ.
  12. ಗಂಡನಾಗಲೀ, ಹೆಂಡತಿಯಾಗಲಿ ಯಾರಿಗೂ ಯಾರೂ ಅಧೀನರಲ್ಲ. ಇಬ್ಬರೂ ಸರ್ವ ಸ್ವತಂತ್ರರು. ಸಮಾನತೆಯುಳ್ಳವರು ಹಾಗೂ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸವುಳ್ಳವರು.
  13. ಗಂಡ ಹೆಂಡತಿಯರನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಒಂದೇ ಪ್ರೀತಿ. ಒಬ್ಬರನ್ನೊಬ್ಬರು ಪ್ರೀತಿಸದಿದ್ದರೇ ತಾಳಿ ಕಟ್ಟಿಕೊಂಡರೂ ವ್ಯರ್ಥ.
  14. ದೇವರ ಹೆಸರಿನಲ್ಲಿ ಸುಳ್ಳು ಹೇಳುವವರನ್ನು, ವಂಚನೆ ಮಾಡುವವರನ್ನು ನಂಬಬಾರದು.
  15. ನಿಮ್ಮ ಅನುಭವ ನಿಮಗೆ ದೇವರು ಇದ್ದಾನೆ ಎಂದು ತಿಳಿಸಿದರೆ, ದೇವರು ಇದ್ದಾನೆ ಎಂದು ತಿಳಿಸಿ. ಇಲ್ಲವೆಂದರೇ ಇಲ್ಲ ಎಂದು ತಿಳಿಸಿ.
  16. ನಿಮ್ಮ ಅನುಭವ ನಿಮಗೆ ದೇವರು ಇದ್ದಾನೋ, ಇಲ್ಲವೋ ಎಂದು ತಿಳಿಸಿದರೆ ಅದನ್ನೇ ತಿಳಿಸಿ.
  17. ನಿರ್ಭೀತಿಯಿಂದ ವಾಸ್ತವವನ್ನು ಒಪ್ಪಿಕೊಳ್ಳುವುದು ಸತ್ಯಾನ್ವೇಷಣೆಯ ಮೊದಲ ಹಂತ, ಯೋಗದ ಮೊದಲ ಪಾಠ.
  18. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವರಿಗೆ ಅಜ್ಞಾನದಿಂದ, ತಮಸ್ಸಿನಿಂದ ಮುಕ್ತಿ ಇರುವುದಿಲ್ಲ.
  19. ದೇವರ ಹೆಸರಿನಲ್ಲಿ ಸುಳ್ಳು ಹೇಳುವ ಮಠಾಧಿಪತಿಗಳು, ಜಗದ್ಗುರುಗಳು, ಆಚಾರ್‍ಯರನ್ನು ತ್ಯಜಿಸಿ.
  20. ದೇವರ ಹೆಸರಿನಲ್ಲಿ ಧನಾರ್ಜನೆ ಮಾಡುವ ದೇವಸ್ಥಾನಗಳನ್ನು, ತೀರ್ಥಕ್ಷೇತ್ರಗಳನ್ನು ತಿರಸ್ಕರಿಸಿ.
  21. ವರದಕ್ಷಿಣೆ ಅಥವಾ ವಧುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ, ನಿಮ್ಮ ಸ್ವಪ್ರಯತ್ನದಿಂದ ತಂದೆ-ತಾಯಿಗಳಿಗೆ ಆರ್ಥಿಕ ಹೊರೆಯಾಗದಂತೆ ವಿವಾಹವಾಗುತ್ತಿದ್ದೀರಿ.
  22. ಈಗ ನೀವು ಹೇಳಿದ ಈ ಮಾತುಗಳೆಲ್ಲಾ ನಿಮಗೆ ಜೀವನದ ದಾರಿದೀಪವಾಗಲಿ. ಅಸಮಾನತೆ, ಮೌಢ್ಯ, ಆಜ್ಞಾನ, ಅಂಧಕಾರಗಳ ವಿರುದ್ಧದ ಹೋರಾಟದಲ್ಲಿ ನೀವೂ ಭಾಗಿಗಳಾಗಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ನೀವು ಈ ದಿನದಿಂದ ದಂಪತಿಗಳೆಂದು ಘೋಷಿಸುತ್ತೇವೆ.

ವರನ ಸಹಿ ವಧುವಿನ ಸಹಿ ವರನ ತಂದೆ ತಾಯಿ ವಧುವಿನ ತಂದೆ ತಾಯಿ ಬಂದು ಬಳಗ, ಸ್ನೇಹಿತರು.

Kuvempu Concept of mantra mangalya Only oath taking no muhurat for wedding, No dowry, a unique and altogether different wedding

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ನಟಿ ಪೂಜಾ ಗಾಂಧಿ

ಈಗೆಲ್ಲ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲು ಹಲವಾರು ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಕುವೆಂಪು, ತೇಜಸ್ವಿ ಅಭಿಮಾನಿಗಳು ಸೇರಿದಂತೆ ಹಲವಾರು ಕನ್ನಡಿಗರು ಮಂತ್ರ ಮಾಂಗಲ್ಯದಿಂದ ಪ್ರೇರಣೆ ಪಡೆದು ಆಡಂಬರವಿಲ್ಲದೆ ಸರಳವಾಗಿ ಮದುವೆಯಾಗುತ್ತಿದ್ದಾರೆ. ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿಯವರು ಕೂಡ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದರು.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ