AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ನಡುವೆ ಹೊಡೆದಾಟ! ಓರ್ವ ಸಾವು

ಮಂಡ್ಯ ಜಿಲ್ಲೆಯಲ್ಲಿ ಏಪ್ರಿಲ್ 6ರಂದು ಎರಡು ಪ್ರತ್ಯೇಕ ಹಿಂಸಾತ್ಮಕ ಘಟನೆಗಳು ನಡೆದಿವೆ. ಮದ್ದೂರಿನಲ್ಲಿ ಸಿಗರೇಟ್ ವಿಚಾರಕ್ಕೆ ಎರಡು ಯುವಕರ ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಗಲಾಟೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಇನ್ನೊಂದೆಡೆ ಕೆ.ಆರ್.ಪೇಟೆಯಲ್ಲಿ ಆಸ್ತಿ ವಿವಾದ ರಕ್ತಪಾತಕ್ಕೆ ತಿರುಗಿದೆ. ಎರಡೂ ಘಟನೆಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ನಡುವೆ ಹೊಡೆದಾಟ! ಓರ್ವ ಸಾವು
ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ನಡುವೆ ಹೊಡೆದಾಟ! Image Credit source: inews.zoombangla.com
ದಿಲೀಪ್​, ಚೌಡಹಳ್ಳಿ
| Edited By: |

Updated on: Apr 06, 2026 | 9:59 AM

Share

ಮಂಡ್ಯ , ಏಪ್ರಿಲ್ 06: ಕ್ಷುಲ್ಲಕ ಕಾರಣಗಳು ಹಾಗೂ ಆಸ್ತಿ ವಿವಾದಗಳಿಂದ ಮಂಡ್ಯದಲ್ಲಿ (Mandya) ಎರಡು ಪ್ರತ್ಯೇಕ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮದ್ದೂರು ಮತ್ತು ಕೆ.ಆರ್.ಪೇಟೆಯಲ್ಲಿ ಮಾರಾಮಾರಿ ನಡೆದಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎರಡೂ ಘಟನೆಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಿ ಸಂಧಾನ ನಡೆಯುತ್ತಿರುವಾಗಲೇ ಮತ್ತೆ ಗಲಾಟೆ

ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಸಮೀಪ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪರಿಣಾಮವಾಗಿ ಮರಳಿಗ ಗ್ರಾಮದ ಯಶವಂತ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದೆ ಬಾರ್‌ನಲ್ಲಿ ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಷಯಕ್ಕೆ ಕಳೆದ ರಾತ್ರಿ ರಾಜಿ ಮಾತುಕತೆ ನಡೆಯುವ ವೇಳೆ ಮತ್ತೆ ಜಗಳವಾಗಿದೆ. ಈ ಸಂದರ್ಭದಲ್ಲಿ ಯುವಕರು ದೊಣ್ಣೆಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದು, ಪರಿಣಾಮವಾಗಿ ಯಶವಂತ್ ಮೃತಪಟ್ಟಿದ್ದಾನೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಜೆ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಮತ್ತೆರಡು ಸ್ಫೋಟಕ ವಿಡಿಯೋ ಬಿಡುಗಡೆ! ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ

ಆಸ್ತಿ ಸಂಬಂಧ ಇನ್ನೊಂದು ಗಲಾಟೆ!

ಇನ್ನೊಂದು ಘಟನೆ ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ರಸ್ತೆ ಬಿಡುವ ವಿಚಾರವಾಗಿ ದಾಯಾದಿಗಳ ನಡುವೆ ಉಂಟಾದ ಜಗಳ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಸಂಬಂಧಿಕರು ಮಾರಕಾಸ್ತ್ರಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದಾರೆ. ಪರಿಣಾಮವಾಗಿ ಸೋಮೇಗೌಡ, ವಸಂತ್ ಮತ್ತು ನಿಶಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪ್ರಕರಣದಲ್ಲಿ ಉಗ್ರೇಗೌಡ, ವೇಣು, ನೂತನ್, ಪ್ರಕಾಶ್ ಮತ್ತು ಸೋಮೇಶ್ ಎಂಬವರ ವಿರುದ್ಧ ದೂರು ದಾಖಲಾಗಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us