ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ
ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ಲಲಿತ ಪಂಚಮಿಯಂದು ದೇಗುಲಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ. ಅದರಂತೆ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.

ಬೆಂಗಳೂರು: ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಹಿಂದೂ ಮಹಿಳೆಯರ ಸಮ್ಮುಖದಲ್ಲಿ ಸಾಮೂಹಿಕವಾಗಿ ಕುಂಕುಮಾರ್ಚನೆ ನಡೆಸಲು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಸೂಚನೆಯಂತೆ ಧಾರ್ಮಿಕ ಸಂಸ್ಥೆಗಳು ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರು ಇಂದು(ಸೆ.28) ಸುತ್ತೋಲೆ ಹೊರಡಿಸಿದ್ದಾರೆ.
ಸೆಪ್ಟೆಂಬರ್ 30 ರಂದು ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಹಿಂದೂ ಮಹಿಳೆಯರ ಸಮ್ಮುಖದಲ್ಲಿ ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸುವಂತೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಸೆ.30ರಂದು ಸಾಮೂಹಿಕ ಕುಂಕುಮಾರ್ಚನೆ ನಡೆಸಲು ಆಗದಿದ್ರೆ. ಅಕ್ಟೋಬರ್ 3ರಂದು ದುರ್ಗಾಷ್ಠಮಿಯಂದು ನಡೆಸಲು ಸೂಚಿಸಲಾಗಿದೆ.
ಸಚಿವೆ ಜೊಲ್ಲೆ ಪ್ರಕಟಣೆ
ಪ್ರತಿ ವರ್ಷದ ಆಶ್ವಯುಜ ಮಾಸದ ಮೊದಲ ದಿನ ಅಂದರೆ ಪಾಡ್ಯದಿಂದ ನವಮಿಯವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ಹಿಂದಿನಿಂದಲೂ ವಿಶೇಷವಾಗಿ ಆರಾಧಿಸುವುದು ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುತ್ತಿರುವ ಆಚರಣೆಯಾಗಿದೆ. ಅದರಂತೆ ದಿನಾಂಕ 30.09.2022 ರ ಶುಕ್ರವಾರವು ಲಲಿತಾ ಪಂಚಮಿ ವಿಶೇಷವಾಗಿದ್ದು, ಈ ದಿನದಂದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಹಿಂದೂ ಮಹಿಳೆಯರನ್ನು ಬರಮಾಡಿಕೊಂಡು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಕುಂಕುಮಾರ್ಚನೆಯನ್ನು ಲೋಕ ಕಲ್ಯಾಣಕ್ಕಾಗಿ ಕುಂಕುಮಾರ್ಚನೆಯನ್ನು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದೊಂದು ವರ್ಷದಲ್ಲಿ ಪ್ರತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಬಲಿಪಾಢ್ಯಮಿಯಂದು ಗೋಪೂಜೆ, ಪ್ರತಿ ಯುಗಾದಿಯನ್ನ ಧಾರ್ಮಿಕ ದಿನವನ್ನಾಗಿ ಆಚರಣೆ, ವರಮಹಾಲಕ್ಷ್ಮಿ ವ್ರತದಂದು ಮಹಿಳೆಯರಿಗೆ ಅರಿಶಿನ-ಕುಂಕುಮ ಹಾಗೂ ಹಸಿರು ಬಳೆಗಳ ವಿತರಣೆ, ಕೋವಿಡ್ ಕಾಲದಲ್ಲಿ ಮಕ್ಕಳಿಗೋಸ್ಕರ ವಿಶೇಷ ಪೂಜೆ ಹೀಗೆ ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ದೇವಸ್ಥಾನದ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಹಾಗೂ ಹಿಂದೂ ಧರ್ಮ ಮತ್ತು ಸಂಸ್ಕೃತಿಗಳನ್ನು ರಕ್ಷಿಸಿ ಬೆಳೆಸುವುದು ನಮ್ಮ ಉದ್ದೇಶ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Wed, 28 September 22