ಕಾರ್ಪೊರೇಟ್ ಇಂಡಿಯಾ ಬಹಿರಂಗ ಪತ್ರಕ್ಕೆ ಆಕ್ಷೇಪ; ಐಐಎಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿಗೆ ನಿವೃತ್ತ ಅಧಿಕಾರಿಗಳಿಂದ ಪತ್ರ
ಐಐಎಂನ ನಿವೃತ್ತರೂ ಸೇರಿದಂತೆ 17 ಮಂದಿ ಸಿಬ್ಬಂದಿ ಇತ್ತೀಚೆಗೆ ‘ಕಾರ್ಪೊರೇಟ್ ಇಂಡಿಯಾ’ಗೆ ಬರೆದ ಬಹಿರಂಗ ಪತ್ರಕ್ಕೆ ನಿವೃತ್ತ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಹಾಗೂ ರಕ್ಷಣಾ ಸೇವೆಗಳ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ತಮ್ಮ ಆಕ್ಷೇಪಣೆಗಳೊಂದಿಗೆ ಅವರು, ಐಐಎಂನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಅವರಿಗೆ ಬಹಿರಂಗಪತ್ರ ಬರೆದಿದ್ದಾರೆ.
ಬೆಂಗಳೂರು, ಆಗಸ್ಟ್ 25: ದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ ಎಂದು ಆರೋಪಿಸಿ ಐಐಎಂನ (IIM) ನಿವೃತ್ತರೂ ಸೇರಿದಂತೆ 17 ಮಂದಿ ಸಿಬ್ಬಂದಿ ಇತ್ತೀಚೆಗೆ ‘ಕಾರ್ಪೊರೇಟ್ ಇಂಡಿಯಾ’ಗೆ ಬರೆದ ಬಹಿರಂಗ ಪತ್ರಕ್ಕೆ ನಿವೃತ್ತ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಹಾಗೂ ರಕ್ಷಣಾ ಸೇವೆಗಳ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ತಮ್ಮ ಆಕ್ಷೇಪಣೆಗಳೊಂದಿಗೆ ಅವರು, ಐಐಎಂನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ (Dr Deviprasad Shetty) ಅವರಿಗೆ ಬಹಿರಂಗಪತ್ರ ಬರೆದಿದ್ದಾರೆ.
‘ನಮಸ್ತೆ, ನಿಮಗೆ ತಿಳಿದಿರುವಂತೆ 1973 ರಲ್ಲಿ ಸ್ಥಾಪನೆಯಾದ ಐಐಎಂ ಬೆಂಗಳೂರು ದೇಶದ ಮೂರನೇ ಐಐಎಂ ಆಗಿದೆ. 50 ವರ್ಷಗಳ ಇತಿಹಾಸದಲ್ಲಿ, ಬೆಂಗಳೂರಿನ ಐಐಎಂ ಪ್ರೀಮಿಯಂ ಪಬ್ಲಿಕ್ ಸ್ಕೂಲ್ ಆಗಿ ವಿಕಸನಗೊಂಡಿತು. ಇದರ ಹಿಂದೆ ನೂರಾರು ಜನರ ಬದ್ಧತೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಇದ್ದು, ಅದಕ್ಕಾಗಿ ಧನ್ಯವಾದಗಳು. ಶಿಕ್ಷಕರು, ವಿದ್ಯಾರ್ಥಿಗಳು, ವಿಶೇಷವಾಗಿ ಭಾರತ ಸರ್ಕಾರ ಮತ್ತು ಸರ್ಕಾರದ ಬೆಂಬಲವೂ ಇದಕ್ಕೆ ಕಾರಣವಾಗಿದೆ. ಭಾರತ ಸರ್ಕಾರದ ದೀರ್ಘಾವಧಿಯ ದೃಷ್ಟಿಕೋನ ಮತ್ತು ಕಾರ್ಯತಂತ್ರವು ಈ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಮತ್ತು ಕ್ರೋಢೀಕರಿಸುವಲ್ಲಿ ಶ್ಲಾಘನೀಯ ಪ್ರಯತ್ನವಾಗಿದೆ. ಐಐಎಂ ಬೆಂಗಳೂರಿನ ಧ್ಯೇಯವಾಕ್ಯ ‘ತೇಜಸ್ವಿ ನವಧಿತಮಸ್ತು’ ಅಂದರೆ ‘ನಮ್ಮ ಅಧ್ಯಯನವು ಪ್ರಬುದ್ಧವಾಗಲಿ’ ಎಂಬುದಾಗಿದೆ. ಇದನ್ನು ಉಪನಿಷತ್ತುಗಳಿಂದ ಅಳವಡಿಸಿಕೊಂಡಿದ್ದು, ಶೈಕ್ಷಣಿಕ ವಿಧಾನ ಮತ್ತು ದೃಷ್ಟಿಕೋನವನ್ನು ಸೂಕ್ತವಾಗಿ ಒಟ್ಟುಗೂಡಿಸುತ್ತದೆ’ ಎಂದು ನಿವೃತ್ತ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಇಂಥ ಸಂದರ್ಭದಲ್ಲಿ ನಾವು, ನಿವೃತ್ತ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಹಾಗೂ ರಕ್ಷಣಾ ಸೇವೆಗಳ ಅಧಿಕಾರಿಗಳು ಐಐಎಂ ಸಿಬ್ಬಂದಿಯ ಬಹಿರಂಗ ಪತ್ರವನ್ನು ಗಮನಿಸಿ ದಿಗ್ಭ್ರಮೆಗೊಂಡಿದ್ದೇವೆ. ಆರು ಮಂದಿ ನಿವೃತ್ತರೂ ಒಳಗೊಂಡಂತೆ 17 ಸಿಬ್ಬಂದಿಯ ಗುಂಪು ಆ ಪತ್ರವನ್ನು ಕಾರ್ಪೊರೇಟ್ ಭಾರತಕ್ಕೆ ಬರೆದಿದೆ. ‘ದ್ವೇಷದ ಭಾಷಣವನ್ನು ನಿರಾಕರಿಸಲು’ ಎಂದು ಹೇಳುವ ಪತ್ರದ ಶೀರ್ಷಿಕೆಯೇ ಅವರ ದಿವಾಳಿ ಮನಸ್ಥಿತಿ ಮತ್ತು ಸೈದ್ಧಾಂತಿಕ ಪಕ್ಷಪಾತವನ್ನು ಬಿಂಬಿಸುತ್ತದೆ. ಇದಲ್ಲದೆ, ಹಳೆಯ ಕ್ಲೀಷೆಗಳನ್ನು ಪತ್ರದಲ್ಲಿ ಧಾರಳವಾಗಿ ಬಳಸಲಾಗಿದೆ. ‘ಹಿಂಸಾತ್ಮಕ ಸಂಘರ್ಷಗಳ ಅಪಾಯವನ್ನು ಹೆಚ್ಚಿಸುವುದು’, ‘ಅಲ್ಪಸಂಖ್ಯಾತರ ಮೇಲಿನ ದ್ವೇಷ’, ‘ಜನಾಂಗೀಯ ಹತ್ಯೆ’, ‘ಸಾಮಾಜಿಕ ರಚನೆಯ ವಿನಾಶ’ ಮತ್ತು ‘ಅಧಿಕಾರಿಗಳ ಮೌನ’ ಮುಂತಾದ ಪರಿಭಾಷೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿಪರ್ಯಾಸವೆಂದರೆ, ಕೊನೆಯಲ್ಲಿ ಪತ್ರವು ತಮ್ಮ ವೈಯಕ್ತಿಕ ನೆಲೆಗಟ್ಟಿನದ್ದು ಮತ್ತು ‘ಸಹಿ ಮಾಡಲಾಗಿದೆ’ ಎಂದು ಉಲ್ಲೇಖಿಸಿದೆ.
ಅನೇಕ ಶೈಕ್ಷಣಿಕ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅಧಿಕಾರಿಗಳು ಮತ್ತು ಅನುಭವಿಗಳಾಗಿ ವಿಶ್ವವಿದ್ಯಾನಿಲಯಗಳು ಮತ್ತು ಇತರ ಶ್ರೇಷ್ಠ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರು, ನಿವೃತ್ತಿಯ ನಂತರ ಆಯಾ ಶೈಕ್ಷಣಿಕ ಸಂಸ್ಥೆಗಳ ಶೈಕ್ಷಣಿಕ ಸ್ವಾಯತ್ತತೆ ಮತ್ತು ಘನತೆಯ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಿದೆ. ಇಂತಹ ವಾದಗಳು ಮತ್ತು ಪ್ರತಿವಾದಗಳ ಪ್ರಕರಣಗಳು ಹೆಚ್ಚಾದಾಗ ಶೈಕ್ಷಣಿಕ ವಾತಾವರಣ ಹಾಳಾಗುತ್ತದೆ. ಕ್ಯಾಂಪಸ್‌ನಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತದೆ. ಬೆಂಗಳೂರಿನ ಐಐಎಂನ ಶ್ರೀಮಂತ ಇತಿಹಾಸ ಮತ್ತು ಅದರ ಅತ್ಯುತ್ತಮ ಶೈಕ್ಷಣಿಕ ವಾತಾವರಣದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಬಹಿರಂಗ ಪತ್ರದ ವಿಚಾರದಲ್ಲಿ ನಮ್ಮ ಮೌನವು ಇಂಥ ಕೃತ್ಯಗಳನ್ನು ಪ್ರಚೋದಿಸುತ್ತದೆ. ಇದು ಐಐಎಂ ಬೆಂಗಳೂರಿನ ವಿಶ್ವಾಸಾರ್ಹತೆ ಮತ್ತು ಖ್ಯಾತಿಯನ್ನು ಸರಿಪಡಿಸಲಾಗದ ಮಟ್ಟಿಗೆ ಹಾನಿಗೊಳಿಸಲಿದೆ. ಕರ್ನಾಟಕದ ಸೌಹಾರ್ದಯುತ ವಾತಾವರಣಕ್ಕೆ ಕಳಂಕವಾಗಲಿದೆ. ಶೈಕ್ಷಣಿಕ ಉತ್ಕೃಷ್ಟತೆಗೆ ಹೆಸರುವಾಸಿಯಾದ ಐಐಎಂ ಬೆಂಗಳೂರಿನ ಅಧ್ಯಾಪಕರು ಇಂಥ ಕೆಲಸಕ್ಕೆ ಇಳಿಯಬಾರದು. ಸಮರ್ಥ ರಾಜಪ್ರಭುತ್ವದ ನಾಯಕತ್ವದಲ್ಲಿ ದೇಶದಲ್ಲಿ ನಡೆಯುತ್ತಿರುವ ಮಹತ್ವದ ಪ್ರಯತ್ನಗಳನ್ನು ಗಮನಿಸಬೇಕು ಎಂದು ನಿವೃತ್ತ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ಬಹಿರಂಗ ಪತ್ರಕ್ಕೆ ಸಹಿ ಮಾಡಿದವರಿಗೆ ಈ ಮೇಲೆ ಹೇಳಿದ ವಿಚಾರಗಳ ನಿಟ್ಟಿನಲ್ಲಿ ಸಲಹೆ ನೀಡುವಂತೆ ನಾವು ನಿಮ್ಮನ್ನು (ದೇವಿಪ್ರಸಾದ್ ಶೆಟ್ಟಿ ಅವರನ್ನು) ವಿನಂತಿಸುತ್ತೇವೆ. ಈ ಹಂತದಲ್ಲಿ ನೀವು ಅವರ ಧೋರಣೆಯನ್ನು ಅರ್ಥಮಾಡಿಕೊಳ್ಳಿ ಮತ್ತು ದೇಶವು ಎದುರಿಸುತ್ತಿರುವ ನಿಜವಾದ ಸವಾಲುಗಳನ್ನು ಅರಿತುಕೊಳ್ಳಿ. ಯಾವುದೇ ಸಂಶಯಾಸ್ಪದ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ನಾವು ನಿಮಗೆ ಮನವಿ ಮಾಡುತ್ತೇವೆ. ನಾವು ಈ ಪತ್ರದ ಪ್ರತಿಯನ್ನು ಶಿಕ್ಷಣ ಸಚಿವರು, ಭಾರತ ಸರ್ಕಾರ, ಸಚಿವಾಲಯದ ಕಾರ್ಯದರ್ಶಿ ಮತ್ತು ಐಐಎಂ ನಿರ್ದೇಶಕರಿಗೂ ಕಳುಹಿಸಿದ್ದು, ಸೂಕ್ತವೆಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಐಐಎಂ ಸಿಬ್ಬಂದಿ ಬರೆದಿದ್ದ ಪತ್ರದಲ್ಲೇನಿತ್ತು?
ದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ ಎಂದು ಆರೋಪಿಸಿ ಐಐಎಂನ ನಿವೃತ್ತರೂ ಸೇರಿದಂತೆ 17 ಮಂದಿ ಸಿಬ್ಬಂದಿ ಇತ್ತೀಚೆಗೆ ‘ಕಾರ್ಪೊರೇಟ್ ಇಂಡಿಯಾ’ಗೆ ಪತ್ರ ಬರೆದಿದ್ದರು. ದ್ವೇಷಪೂರಿತ ಸುದ್ದಿಗಳನ್ನು ಹಂಚುತ್ತಿರುವ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಿಗೆ ಅನುದಾನ ನೀಡುವುದನ್ನು ತಡೆಹಿಡಿಯಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಮುಂದುವರಿದು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಅಲ್ಲದೆ, ಅಂಥ ಹಿಂಸಾಚಾರಗಳಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳಲಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಹಣಕಾಸು ನಿಧಿಯ ಸಮರ್ಪಕ ಬಳಕೆಯೂ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ