ಪ್ರಾಸಿಕ್ಯೂಷನ್‌ಗೆ ಅನುಮತಿ: ಸಿಎಂ, ಡಿಸಿಎಂ ಜೊತೆ ಚರ್ಚೆ, ಖರ್ಗೆ ನೀಡಿದ ಸಲಹೆ ಏನು?
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಅತ್ತ ಸಿದ್ದರಾಮಯ್ಯ ಪರ ಸಚಿವರು ನಿಂತುಕೊಂಡಿದ್ದಾರೆ. ಈ ವಿಚಾರವಾಗಿ ಸಿಎಂ ಮತ್ತು ಡಿಸಿಎ ಜೊತೆ ಮಲ್ಲಿಕಾರ್ಜುನ ಖರ್ಗೆ ಇಂದು ಚರ್ಚೆ ಮಾಡಿದ್ದು, ಬಿಜೆಪಿ ಸರ್ಕಾರದ ಹಗರಣದ ತನಿಖಾ ವರದಿ ಸಿದ್ಧವಿದ್ದರೆ ಬಿಡುಗಡೆಗೊಳಿಸುವಂತೆ ಸಲಹೆ ನೀಡಿದ್ದಾರೆ.
ಬೆಂಗಳೂರು, ಆಗಸ್ಟ್ 17: ಸಿದ್ದರಾಮಯ್ಯ (Siddaramaiah) ವಿರುದ್ದ ತನಿಖೆ ನಡೆಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಿದ್ದಂತೆ ಸಂಪುಟ ಸದಸ್ಯರು ಕೆರಳಿ ಕೆಂಡವಾಗಿದ್ದಾರೆ. ಇಂದು ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ಸಚಿವರೆಲ್ಲರು ಮುಖ್ಯಮಂತ್ರಿ ಪರವಾಗಿರುವುದಾಗಿ ಹೇಳಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಬೆಂಗಳೂರಿಗೆ ಆಗಮಿಸಿದ್ದು ಕುತೂಹಲ ಕೆರಳಿಸಿತ್ತು. ಇದೀಗ ಸಭೆ ಬಳಿಕ ಸದಾಶಿವನಗರದ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚರ್ಚೆ ಮಾಡಿದ್ದಾರೆ.
ಈ ವೇಳೆ ರಾಜ್ಯಪಾಲರ ನಡೆ ಕುರಿತು ಕಾನೂನು ಹೋರಾಟ ಮಾಡಿ. ನಿಮಗೆ ಹೈಕಮಾಂಡ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿದ್ದರಾಮಯ್ಯಗೆ ಮಲ್ಲಿಕಾರ್ಜುನ ಖರ್ಗೆ ಅಭಯ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಹಗರಣಗಳನ್ನ ಚುರುಕುಗೊಳಿಸಿ. ಬಿಜೆಪಿ ಸರ್ಕಾರದ ಹಗರಣದ ತನಿಖಾ ವರದಿ ಸಿದ್ಧವಿದ್ದರೆ ಬಿಡುಗಡೆಗೊಳಿಸಿ ಎಂದು ಸಲಹೆ ನೀಡಿದ್ದಾರೆ.
ಸಿಎಂ ಹೇಳಿದ್ದಿಷ್ಟು
ಖರ್ಗೆ ನಿವಾಸದಲ್ಲಿ ಚರ್ಚೆ ಬಳಕ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ಗೆ ಸದ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯದ ಬಗ್ಗೆ ತಿಳಿಸಿದ್ದೇವೆ. ಏನಾಗುತ್ತೆ ನೋಡೊಣ ಎಂದಿದ್ದಾರೆ.
ಸೋಮವಾರ ಕೋರ್ಟ್ಗೆ ಹೋಗುತ್ತೇವೆ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕರ್ನಾಟಕ ಸರ್ಕಾರವನ್ನ ಅಸ್ಥಿರಗೊಳಿಸುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿರುವ ಹುನ್ನಾರದ ಬಗ್ಗೆ ಎಐಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಸೋಮವಾರ ಕೋರ್ಟ್ ಗೆ ಹೋಗುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೌನ ಪ್ರತಿಭಟನೆ ಮಾಡಲಾಗುತ್ತಿದೆ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಸೂಚನೆ ಕೊಡಲಾಗಿದೆ ಎಂದರು.
ಬಿಜೆಪಿ ಷಡ್ಯಂತರ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಕಿಡಿಗೇಡಿಗಳು ಪ್ರತಿಭಟನೆಯ ವೇಳೆ ಅಹಿತಕರ ಘಟನೆಗಳಿಗೆ ಕಾರಣವಾಗಬಹುದು. ಹಾಗಾಗಿ ಎಚ್ಚರದಿಂದ ಇರಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯಗೆ ಎಲ್ಲರ ಬೆಂಬಲ ಇದೆ. ಹೈಕಮಾಂಡ್ಗೆ ಬಿಜೆಪಿ ಷಡ್ಯಂತರ ಬಗ್ಗೆ ವಿವರಿಸಿ ಹೇಳಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ಮೂಲಕ ತೊಂದರೆ ಎಂದ ಮಲ್ಲಿಕಾರ್ಜುನ ಖರ್ಗೆ
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ತೊಂದರೆ ಕೊಡುತ್ತಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ಕೇಳುತ್ತಾರೆ ಎಂದು ಪ್ರಶ್ನಿಸಿದ್ದರು. ಕಳೆದ 7-8 ವರ್ಷಗಳಿಂದ ಬಿಜೆಪಿ ಇದನ್ನೇ ಮಾಡುತ್ತಿದೆ. ಯಾವ ಕಾರಣಕ್ಕೆ ಅನುಮತಿ ಕೊಟ್ಟಿದ್ದಾರೆಂದು ಗೊತ್ತಿಲ್ಲ. ಅನುಮತಿ ಕೊಟ್ಟಿದ್ದು ಸರಿಯಾ, ತಪ್ಪು ಅಂತಾ ನಾನು ಈಗ ಹೇಳಲಾರೆ.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದ ಸಿದ್ದರಾಮಯ್ಯ
ನೋಡಿ, ತಿಳ್ಕೊಂಡು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಮಾತನಾಡುವುದು ಒಳ್ಳೆಯದು. ಕಾನೂನಾತ್ಮಕ ವಾಗಿ ಮತ್ತು ರಾಜಕೀಯವಾಗಿ ಹೈಕಮಾಂಡ್ ಸಿಎಂ ಜೊತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ನಾನು ನೋಡಿ ಬಿಟ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದರು.
ನಾಳೆ ಬೆಂಗಳೂರಿಗೆ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರು ಆಗಮನ
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ನಾಳೆ ಬೆಂಗಳೂರಿಗೆ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ಆಗಮಿಸಲಿದ್ದಾರೆ. ರಾಜ್ಯಪಾಲರ ಅನುಮತಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಸಾಧ್ಯತೆ ಇದ್ದು, ನಾಳೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.