
ಬೆಂಗಳೂರು/ ಕಲಬುರಗಿ, (ಆಗಸ್ಟ್ 07): ಕಲಬುರಗಿ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಫೌಜಿಯಾ ತರನ್ನುಮ್ ಅವರನ್ನು ಪಾಕಿಸ್ತಾನದಿಂದ ಬಂದಿದ್ದಾರೆಯೇ ಎಂದಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ವಿರುದ್ಧ ಹೈಕೋರ್ಟ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಜನಪ್ರತಿನಿಧಿ ಎಂದ ಮಾತ್ರಕ್ಕೆ ಏನಾದ್ರು ಹೇಳಿಕೆ ನೀಡಬಹುದಾ? ರಾಜಕಾರಣಿಗಳು ಯೋಜನೆಗಳ ಬಗ್ಗೆ ಮಾತನಾಡೋದು ಬಿಟ್ಟು ಈ ರೀತಿ ಮಾತನಾಡಬಹುದೇ? ನೀವು ಯಾವುದೇ ಪಕ್ಷವಾಗಿರಿ ಈ ಕೇಸರೆಚಾಟವೇಕೆ? ಇಂತಹ ಕ್ಷುಲಕ ಕೇಸ್ ಗಳೇ ತುಂಬಿವೆ ಎಂದು ತರಾಟೆಗೆ ತೆದುಕೊಂಡು ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.
ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪೀಠ, ಕೇವಲ ಕ್ಷಮೆಯಾಚನೆಯಿಂದ ಇಂತಹ ಹೇಳಿಕೆಗಳ ನೀಡಿದ ಪ್ರಕರಣ ರದ್ದುಗೊಳಿಸಲು ಸಾಧ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಅಲ್ಲದೆ, ಐಎಎಸ್ ಅಧಿಕಾರಿಯೊಬ್ಬರನ್ನು ಧರ್ಮದ ಆಧಾರದ ಮೇಲೆ ಹೇಗೆ ಗುರಿಯಾಗಿಸಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡಿತು.
ಎಲ್ಲರಿಗೂ ಸ್ವಯಂ ಗೌರವ ಇರಲಿದೆ. ಬೇಕಾದಂತೆ ಮಾತನಾಡುವುದಕ್ಕೆ ಅವಕಾಶವಿರುವುದಿಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡುವವರಿಗೆ ಕ್ಷಮಿಸಲು ಸಾಧ್ಯವಿಲ್ಲ. ರಾಜಕೀಯ ನಾಯಕರು, ರಾಜ್ಯದ ಜನರ ಕಲ್ಯಾಣಕ್ಕಾಗಿ ಏನು ಮಾಡಿದರೆ ಉತ್ತಮ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ರಾಜಕೀಯ ನಾಯಕರಿಗೆ ನಾಲಿಗೆ ಹಿಡಿತದಲ್ಲಿರಬೇಕು. ಏನು ಬೇಕಾದರೂ ಮಾತನಾಡಬಹುದು ಎನ್ನುವುದಕ್ಕೆ ಸಾಧ್ಯವಿಲ್ಲ. ಈ ರೀತಿಯ ಪ್ರಕರಣಗಳಿಂದ ನಿಜವಾದ ಪರಿಹಾರ ಕೋರಿ ಬರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆ 10 ವರ್ಷಗಳು ಕಳೆದರೂ ಇತ್ಯರ್ಥಗೊಳ್ಳುತ್ತಿಲ್ಲ ಎಂದು ಕೋರ್ಟ್, ರವಿಕುಮಾರ್ಗೆ ಚಾಟಿ ಬೀಸಿದೆ.
ಎಲ್ಲ ರಾಜಕೀಯ ಪಕ್ಷದವರೂ ಈ ದಾಟಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು. ಕೇವಲ ಪರಸ್ಪರ ಕೆಸರೆರೆಚಾಟ ನಡೆಸಲಾಗುತ್ತಿದೆ. ಯಾರೂ ಜನಪರ ನೀತಿಗಳ ಬಗ್ಗೆಯಾಗಲಿ, ಪ್ರಮುಖ ಸಮಸ್ಯೆಗಳ ಬಗ್ಗೆಯಾಗಲಿ ಮಾತನಾಡುತ್ತಿಲ್ಲ. ರಾಜಕೀಯ ನಾಯಕರ ಪರಸ್ಪರ ಆರೋಪಗಳನ್ನು ಕೇಳುವುದಕ್ಕೆ ಜನ ಆಸಕ್ತರಾಗಿಲ್ಲ, ಬದಲಿಗೆ ತಮ್ಮ ಕಲ್ಯಾಣದ ಬಗ್ಗೆ ಯೋಚಿಸುತ್ತಾರೆ ಎಂದು ಪೀಠ ಹೇಳಿದೆ.
ಇನ್ನು ಇದೇ ವೇಳೆ ಕಲಬುರಗಿಯಲ್ಲಿ ನಡೆದ ಪ್ರತಿಭಟನೆ ವೇಳೆ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು 9 ತಾಸು ಅಡ್ಡಿ ಪಡಿಸಿದ್ದಾರೆ ಎಂಬ ಅರ್ಜಿದಾರರ ವಕೀಲರ ವಾದ ಆಲಿಸಿದ ಪೀಠ, ರಾಷ್ಟ್ರಧ್ವಜ ಹಿಡಿಯುವುದರಲ್ಲಿ ತಪ್ಪೇನಿದೆ? ಒಂದು ವೇಳೆ ರವಿಕುಮಾರ್ ಹೇಳಿಕೆ ತಪ್ಪಾಗಿದ್ದರೂ, ಕ್ರಮವೂ ಸರಿಯಲ್ಲ. ಪ್ರತಿಭಟನಾಕಾರರಿಗೆ ಧ್ವಜ ಹಿಡಿಯಲು ಬಿಡದಿದ್ದರೆ ನಾವು ದಂಡ ವಿಧಿಸುತ್ತೇವೆ. ಆದರೆ ಅದಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ಸಮರ್ಥಿಸಲು ಬರುವುದಿಲ್ಲ. ಅಲ್ಲದೆ, ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿದ್ದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.
ತಿರಂಗಾ ಯಾತ್ರೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್, ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಫೌಜಿಯಾ ತರನ್ನುಮ್ ಅವರು ಕಾಂಗ್ರೆಸ್ ಸರ್ಕಾರದ ಆದೇಶದ ಮೇರೆಗೆ ವರ್ತಿಸುತ್ತಿದ್ದಾರೆ. ಪಾಕಿಸ್ತಾನದಿಂದ ಬಂದಿದ್ದಾರೋ ಎಂಬುದು ಗೊತ್ತಾಗುತ್ತಿಲ್ಲ ಎಂಬುದಾಗಿ ಕಳೆದ ಮೇ ತಿಂಗಳಲ್ಲಿ ನಡೆದ ರಾಜಕೀಯ ಪ್ರತಿಭಟನೆಯಲ್ಲಿ ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಹೇಳಿಕೆ ನೀಡಿದ್ದರು. ಈ ಸಂಬಂಧ 2025ರ ಮೇ 25ರಂದು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ದೂರು ದಾಖಲಾಗಿತ್ತು.
Published On - 10:33 pm, Fri, 7 August 26