ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಸ್ತೇವೆ: ಅಧ್ಯಕ್ಷ ಜಯಪ್ರಕಾಶ್
ಜಾತಿ ಗಣತಿಯ ವರದಿ ಕಾಣೆ ಆಗಿರುವ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಾಂತರಾಜ್ ವರದಿಯೂ ಅಲ್ಲ, ಜಯಪ್ರಕಾಶ್ ಹೆಗ್ಡೆ ವರದಿಯೂ ಅಲ್ಲ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು, ನವೆಂಬರ್ 22: ಕಾಂತರಾಜ್ ವರದಿಯೂ ಅಲ್ಲ, ಜಯಪ್ರಕಾಶ್ ಹೆಗ್ಡೆ ವರದಿಯೂ ಅಲ್ಲ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ (Jayaprakash) ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಲ ಪ್ರತಿ ಅಂದರೆ ದತ್ತಾಂಶ ಅಲ್ಲ. ದತ್ತಾಂಶ ಎಲ್ಲವೂ ಸುರಕ್ಷಿತವಾಗಿದೆ. ಇಂದಿನ ಸದಸ್ಯರು, ಅಧ್ಯಕ್ಷರು ಹಾಗೂ ಸೆಕ್ರೆಟರಿ ಸಹಿ ಇರುವ ದತ್ತಾಂಶ. ಹಾರ್ಡ್ ಕಾಪಿ ಮತ್ತು ಪ್ರಿಂಟೆಡ್ ಕಾಪಿಯೂ ಇದೆ ಎಂದು ಹೇಳಿದ್ದಾರೆ.
ಕಾಂತರಾಜ್ ವರದಿಯ ಮೂಲ ಪ್ರತಿಯ ಕೆಲ ವರ್ಕ್ಶೀಟ್ಗಳು ಸಿಗುತ್ತಿಲ್ಲ. ಆ ವರ್ಕ್ಶೀಟ್ ಸಿಕ್ಕಿದರೆ ನಮಗೆ ಮತ್ತಷ್ಟು ಅನುಕೂಲ ಆಗುತ್ತಿತ್ತು. ಈಗ ಇರುವ ಡೇಟಾ ಉಪಯೋಗಿಸಿಕೊಂಡು ವರದಿ ಕೊಡಲು ಹೇಳಿದೆ. ಯಾವ ದತ್ತಾಂಶ ಸೇಫ್ ಇದೆ, ಆ ವರದಿಯನ್ನು ಸರ್ಕಾರಕ್ಕೆ ಕೊಡುತ್ತೇವೆ. ವರದಿ ಮತ್ತು ದತ್ತಾಂಶವನ್ನು ಸರ್ಕಾರಕ್ಕೆ ಕೊಡುವುದು ನಮ್ಮ ಜವಾಬ್ದಾರಿ. ಉಳಿದಿರುವುದನ್ನು ಎಲ್ಲವೂ ಸರ್ಕಾರ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿಯ ವರದಿ ಕಾಣೆ, ಜಯಪ್ರಕಾಶ್ ಹೆಗ್ಡೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ; ತಡವಾಗಿ ಬೆಳಕಿಗೆ
ಡಿಸೆಂಬರ್ ಅಥವಾ ಜನವರಿಯೊಳಗೆ ವರದಿ ಕೊಡಲು ಸಿಎಂ ಸಿದ್ದರಾಮಯ್ಯ ಹೇಳಿದ್ದಾರಂತೆ. ಅಷ್ಟರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. 100ಕ್ಕೆ ಶೇ.90ಕ್ಕಿಂತ ಹೆಚ್ಚು ಜನಗಣತಿಯಾಗಿದೆ, ಅದರಲ್ಲಿ ಡೌಟ್ ಇಲ್ಲ. ಬಿಜೆಪಿ ನಾಯಕರ ಮಾತುಗಳ ಬಗ್ಗೆ ನಾನು ಹೆಚ್ಚು ಮಾತಾಡಲು ಹೋಗಲ್ಲ ಎಂದು ಹೇಳಿದ್ದಾರೆ.
ಜಾತಿ ಗಣತಿಯ ವರದಿಯ ಮೂಲ ಪ್ರತಿ ಕಾಣೆ
ಸೀಲ್ಡ್ ಬಾಕ್ಸ್ನಲ್ಲಿದ್ದ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯವಿಲ್ಲವೆಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ರಾಜ್ಯ ಸರ್ಕರಕ್ಕೆ 2021ರಲ್ಲಿ ಪತ್ರ ಬರೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಗಣತಿ ವರದಿ)ಯನ್ನು 2021ರ ಅಗಸ್ಟ್ 26 ರಂದು ಹಿಂದುಳಿದ ವರ್ಗಗಳ ಆಯೋಗ ಕಚೇರಿಯಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ: ಜಾತಿಗಣತಿ ವರದಿಯ ಮೂಲ ಪ್ರತಿ ಕಾಣೆಯಾದ ಬಗ್ಗೆ ನನಗೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳು ಹಾಗೂ ಇತರೆ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರ್ ನಡೆಸಿ 2021ರ ಅಕ್ಟೋಬರ್ 5 ರಂದು ತೆರೆಯಲಾಗಿತ್ತು. ಆದರೆ ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇರುವುದಿಲ್ಲ. ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸಿನಲ್ಲಿ ಲಭ್ಯವಿಲ್ಲ. ಹೀಗಾಗಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.