Project Majestic: ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕಾಯಕಲ್ಪ, ಬಜೆಟ್ನಲ್ಲಿ ಮಹತ್ವದ ಘೋಷಣೆ
ಕರ್ನಾಟಕ ಬಜೆಟ್ 2025: ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ಬಸ್ ನಿಲ್ದಾಣದ ಅಭಿವೃದ್ಧಿಗೆ ಮತ್ತು ಆಧುನೀಕರಣಕ್ಕೆ ಬಜೆಟ್ನಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರು, ಮಾರ್ಚ್ 7: ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದ ಜಾಗವನ್ನು ಪ್ರೊಜೆಕ್ಟ್ ಮೆಜೆಸ್ಟಿಕ್ (Project Majestic) ಯೋಜನೆಯ ಅಡಿ ಸರ್ಕಾರಿ ಖಾಸಗಿ ಸಹ ಭಾಗಿತ್ವದ (PPP Model) ಆಧಾರದ ಮೇಲೆ ಪುನರ್ ಅಭಿವೃದ್ಧಿಪಡಿಸಿ ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಜೆಟ್ನಲ್ಲಿ ಘೋಷಣೆ ಮಾಡಿದರು. ಇದರೊಂದಿಗೆ, ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಿ ಆಧುನೀಕರಣಗೊಳಿಸಲು ಸರ್ಕಾರ ಮುಂದಾದಂತಾಗಿದೆ.
ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರ ಪ್ರಮುಖ ನಗರಗಳ ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲೂ ಬಜೆಟ್ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನ ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ಒಟ್ಟಾರೆ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.
ರಾಜ್ಯದ ವಿವಿಧ ಸಾರಿಗೆ ನಿಗಮಗಳಲ್ಲಿ 1000 ಹೊಸ ಡೀಸೆಲ್ ಬಸ್ಸುಗಳನ್ನು ಜಿಸಿಸಿ ಆಧಾರದಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.
ಶಕ್ತಿ ಯೋಜನೆಗೆ 5,300 ಕೋಟಿ ರೂ. ಅನುದಾನ
ಮಹಿಳಾ ಸಬಲೀಕರಣ ಮತ್ತು ಸಾಮರ್ಥ್ಯ-ನಿರ್ಮಾಣಕ್ಕಾಗಿ ಪ್ರಾರಂಭಿಸಲಾದ ಶಕ್ತಿ ಯೋಜನೆ ಅಡಿ ಒಟ್ಟು 226.53 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ.ಈ ಯೋಜನೆಗಾಗಿ 2024-25ರ ಅವಧಿಯಲ್ಲಿ 5,015 ಕೋಟಿ ರೂ. ಖರ್ಚು ಮಾಡಲಾಗಿದೆ. ಇದು ಮಹಿಳೆಯರ ಸ್ವಾವಲಂಬನೆ ಮತ್ತು ಆರ್ಥಿಕ ಸುಧಾರಣೆಗೆ ಶಕ್ತಿಯನ್ನು ತುಂಬಿದೆ. 2025-26ರ ವರ್ಷಕ್ಕೆ 5,300 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದರು.
ಈ ವರ್ಷ ರಾಜ್ಯದಾದ್ಯಂತ ಪ್ರಗತಿಯಲ್ಲಿರುವ 42 ಆಟೊಮ್ಯಾಟೆಡ್ ಟೆಸ್ಟ್ ಡ್ರೈವಿಂಗ್ ಟ್ರ್ಯಾಕ್‌ಗಳ ನಿರ್ಮಾಣವು ಪೂರ್ಣಗೊಳ್ಳಲಿದೆ. 2025-26ರ ಅವಧಿಯಲ್ಲಿ ಹೊನ್ನಾವರ, ಚಮರಾಜನಗರ ಮತ್ತು ಚಿತ್ರದುರ್ಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಆಟೊಮ್ಯಾಟೆಡ್ ಟೆಸ್ಟ್ ಡ್ರೈವಿಂಗ್ ಟ್ರ್ಯಾಕ್ಗಳನ್ನು ನಿರ್ಮಾಣ ಮಾಡಲಾಗುವುದು. ಈ ಸಾಲಿನಲ್ಲಿ ಯೋಜನೆಗಾಗಿ 12 ಕೋಟಿ ರೂ. ಅನುದಾನ ನೀಡಲಾಗುತ್ತದೆ ಎಂದು ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್: 2 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಗುತ್ತಿಗೆ ಮೀಸಲಾತಿ
ಸಾರಿಗೆ ಇಲಾಖೆಯ ಅಧೀನದಲ್ಲಿರುವ ಕಚೇರಿಗಳಲ್ಲಿನ ಎಲ್ಲಾ ದಾಖಲೆಗಳನ್ನು ಹಂತ ಹಂತವಾಗಿ ಡಿಜಿಟಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. 2025-26ರ ಅವಧಿಯಲ್ಲಿ, 5 ಪ್ರಾದೇಶಿಕ ಸಾರಿಗೆ ಕಚೇರಿಗಳ ದಾಖಲೆಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಲಾಗುತ್ತದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.
ಕರ್ನಾಟಕ ಬಜೆಟ್ ಲೈವ್ ಅಪ್ಡೇಟ್ಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Fri, 7 March 25