ಬೆಂಗಳೂರು, ಆಗಸ್ಟ್ 21: ಕೇಂದ್ರ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಹಳೇ ಕೇಸ್ಗೆ ಪ್ರಾಸಿಕ್ಯೂಷನ್ ಅನುಮತಿ ಕೊಡಬೇಕು ಎಂದು ಲೋಕಾಯುಕ್ತ ಎಸ್ಐಟಿ ರಾಜಭವನದ ಮೊರೆ ಹೋಗಿದೆ. ಒಂದು ವೇಳೆ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಅನುಮತಿ ಕೊಟ್ಟರೆ ಕುಮಾರಸ್ವಾಮಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ.
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಳ್ಳಾರಿಯ ಸಂಡೂರಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಭೂಮಿ ಮಂಜೂರು ಮಾಡಿದ್ದರು. ನಿಯಮ ಉಲ್ಲಂಘಿಸಿ 550 ಹೆಕ್ಟೇರ್ ಭೂಮಿ ಮಂಜೂರು ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು 2011ರ ಲೋಕಾಯುಕ್ತರ ವರದಿಯಲ್ಲಿ ಕೂಡ ಉಲ್ಲೇಖ ಮಾಡಲಾಗಿತ್ತು. ಅದಾದ ಬಳಿಕ ಲೋಕಾಯುಕ್ತರು ತನಿಖೆ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. 2023ರ ನವೆಂಬರ್ 21ರಂದು ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವಂತೆ ಕೇಳಿದ್ದರು. ಇದೀಗ ಬರೋಬ್ಬರಿ 8 ತಿಂಗಳ ಬಳಿಕ ಲೋಕಾಯುಕ್ತರು ಎಸ್ಐಟಿಗೆ ಸ್ಪಷ್ಟನೆ ಕೇಳಿದ್ದಾರೆ. ಇದೇ ವರ್ಷ ಜುಲೈ 29ರಂದು ಎಸ್ಐಟಿಗೆ ಪತ್ರ ಬರೆದಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯೆ ಕೊಟ್ಟ ಎಸ್ಐಟಿ ಮುಖ್ಯಸ್ಥರು, ರಾಜ್ಯಪಾಲರಿಗೆ ಆಗಸ್ಟ್ 21ರಂದು ಸ್ಪಷ್ಟನೆ ನೀಡಿದ್ದಾರೆ. ಈ ಸ್ಪಷ್ಟನೆಯಲ್ಲೇ ಚಾರ್ಜ್ಶೀಟ್ ಸಲ್ಲಿಸಲು ಅನುಮತಿ ಕೊಡಿ ಎಂದು ಲೋಕಾಯುಕ್ತರು ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣಕ್ಕೂ ಕುಮಾರಸ್ವಾಮಿ ವಿರುದ್ಧದ ಪ್ರಕರಣಕ್ಕೂ ವ್ಯತ್ಯಾಸ ಇದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ 50:50ರ ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಿರುವುದಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ನಿಯಮ ಉಲ್ಲಂಘಿಸಿ ಸೈಟ್ ಪಡೆದುಕೊಂಡ ಆರೋಪ ಸಿದ್ದರಾಮಯ್ಯ ಮೇಲಿದೆ. ಈ ವಿಚಾರದಲ್ಲಿ ತನಿಖೆಯೇ ನಡೆದಿಲ್ಲ.
ಆದರೆ, ಕುಮಾರಸ್ವಾಮಿ ಪ್ರಕರಣ ತುಸು ಭಿನ್ನವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ತನಿಖೆ ಮುಗಿದು ವರದಿ ಸಿದ್ಧವಾಗಿದೆ. ಆದರೆ, ವರದಿ ಸಿದ್ಧವಾಗಿ ಹಲವಾರು ತಿಂಗಳುಗಳ ಬಳಿಕ ಈಗ ಚಾರ್ಜ್ಶೀಟ್ ಸಲ್ಲಿಕೆಗೆ ಅನುಮತಿ ಕೋರಲಾಗಿದೆ.
ಈ ಮಧ್ಯೆ, ಕುಮಾರಸ್ವಾಮಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಗೆ ಎಸ್ಐಟಿ ಈಗ ಅನುಮತಿ ಕೇಳಿರುವುದನ್ನು ಜೆಡಿಎಸ್ ಮಿತ್ರ ಪಕ್ಷ ಬಿಜೆಪಿ ಪ್ರಶ್ನಿಸಿದೆ. ದ್ವೇಷದ ರಾಜಕಾರಣ ಎಂದು ಟೀಕಿಸಿರುವ ಬಿಜೆಪಿ, ಇಷ್ಟು ದಿನ ಯಾಕೆ ಸುಮ್ಮನಿದ್ದಿರಿ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಇದಕ್ಕೆಲ್ಲಾ ನಾನು ಹೆದರುವುದಿಲ್ಲ: ಕಾಂಗ್ರೆಸ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಒಟ್ಟಿನಲ್ಲಿ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದಾಗಿದೆ. ಆದರೆ ಇದು ರಾಜಕೀಯ ಸಂಘರ್ಷಕ್ಕೆ ಮತ್ತೊಮ್ಮೆ ನಾಂದಿ ಹಾಡುವುದು ಖಚಿತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Wed, 21 August 24