ಎರಡು ಪ್ರತ್ಯೇಕ ಅಂಬುಲೆನ್ಸ್ ವಾಹನಗಳಲ್ಲಿ ಇಬ್ಬರಿಗೆ ಹೆರಿಗೆ; ಎಲ್ಲರೂ ಕ್ಷೇಮ- ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಮೆಚ್ಚುಗೆ
ಇಬ್ಬರು ಗರ್ಭಿಣಿಯರಿಗೆ 108 ವಾಹನದ ತುರ್ತು ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ. ಶಾರದಾಗೆ ಗಂಡು ಮಗು ಹಾಗೂ ಅನಿತಾಗೆ ಹೆಣ್ಣು ಮಗು ಜನನವಾಗಿದೆ. ಹೆರಿಗೆಯ ನೋವು ಹಿನ್ನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರನ್ನೂ ಕರೆತರಲಾಗುತ್ತಿತ್ತು.
ರಾಯಚೂರು: ಎರಡು ಪ್ರತ್ಯೇಕ 108 ಅಂಬುಲೆನ್ಸ್ ವಾಹನಗಳಲ್ಲಿ ಇಬ್ಬರಿಗೆ ಹೆರಿಗೆಯಾಗಿದೆ. ರಾಯಚೂರು ತಾಲೂಕಿನ ಆಯಿಜಾಪೂರ ಹಾಗೂ ಬಾಪೂರ ಗ್ರಾಮದಲ್ಲಿ ಈ ಪ್ರತ್ಯೇಕ ಘಟನೆಗಳು ನಡೆದಿವೆ. ಆಯಿಜಾಪೂರ ಗ್ರಾಮದ ಶಾರದಾ ಮತ್ತು ಬಾಪೂರ ಗ್ರಾಮದ ಅನಿತಾರಿಗೆ ಆ್ಯಂಬುಲೆನ್ಸ್ ವಾಹನದಲ್ಲೇ ಹೆರಿಗೆಯಾಗಿದೆ. ಇಬ್ಬರೂ ಗರ್ಭಿಣಿಯರಿಗೆ 108 ವಾಹನದ ತುರ್ತು ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ. ಶಾರದಾಗೆ ಗಂಡು ಮಗು ಹಾಗೂ ಅನಿತಾಗೆ ಹೆಣ್ಣು ಮಗು ಜನನವಾಗಿದೆ. ಹೆರಿಗೆಯ ನೋವು ಹಿನ್ನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರನ್ನೂ ಕರೆತರಲಾಗುತ್ತಿತ್ತು. ಆ ವೇಳೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅಂಬುಲೆನ್ಸ್ ವಾಹನದಲ್ಲೆ ಹೆರಿಗೆಯಾಗಿದೆ. ಹೆರಿಗೆ ಬಳಿಕ ಇಬ್ಬರೂ ತಾಯಂದಿರು ಹಾಗೂ ಶಿಶುಗಳು ಆರೋಗ್ಯವಾಗಿದ್ದಾರೆ. ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಸ್ತೆಯಲ್ಲೇ, ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ; ತಾಯಿ-ಮಗು ಸುರಕ್ಷಿತ ಗದಗ: ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗುವ ವೇಳೆ ಆ್ಯಂಬ್ಯುಲೆನ್ಸ್ನಲ್ಲಿಯೇ ಹೆರಿಗೆಯಾಗಿ ಮಗುವಿಗೆ ಜನ್ಮವಿತ್ತ ವಿರಳ ಘಟನೆ ನವೆಂಬರ್ ಮಾಸಾಂತ್ಯದಲ್ಲಿ ನಡೆದಿದೆ. ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿ ಆಸ್ಪತ್ರಗೆ ಸದರಿ ಗರ್ಭಿಣಿಯನ್ನು ಚಿಕಿತ್ಸೆಗಾಗಿ ರೆಫರ್ ಮಾಡಲಾಗಿತ್ತು. ಅದರಂತೆ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆಯೇ ಆ್ಯಂಬ್ಯುಲೆನ್ಸ್ನಲ್ಲಿ ಹೆರಿಗೆಯಾಗಿದೆ. ಆ್ಯಂಬ್ಯುಲೆನ್ಸ್ನಲ್ಲಿದ್ದ 108 ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆಯಾಗಿದೆ. ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದ ಕವಿತಾ ಪೂಜಾರಿಗೆ ನಗರದ ಖಾಸಗಿ ಆಸ್ಪತ್ರೆಯಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಹೆರಿಗೆಯಾಗಿದೆ.
ರಕ್ತ ಕಡಿಮೆ ಇದ್ದ ಕಾರಣ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಖಾಸಗಿ ಆಸ್ಪತ್ರೆಯ ವೈದ್ಯರೂ ಸಹ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು. ಆ ಸಂದರ್ಭದಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮುಳಗುಂದ ನಾಕಾ ಬಳಿ ಕವಿತಾ ಪೂಜಾರಿಗೆ ಹೆರಿಗೆಯಾಗಿದೆ.
ಕರುಳ ಬಳ್ಳಿ ಮಗುವಿನ ಕುತ್ತಿಗೆಗೆ ಸಿಕ್ಕು ಗರ್ಭಿಣಿ ಪರದಾಡುತ್ತಿದ್ದರು. ತುರ್ತು ತಜ್ಞರಾದ ರವಿ ಬಡಿಗೇರ್ ಮತ್ತು 108 ಪೈಲೆಟ್ ದಸ್ತಗೀರ್ ಸಾಬ್ ಹುಡೇದ್, ಆಶಾ ಕಾರ್ಯಕರ್ತೆ ಮುತ್ತವ್ವ ಅವರ ತಂಡ ಕವಿತಾ ಪೂಜಾರಿಗೆ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ. ಸದ್ಯ ಮಗು, ತಾಯಿಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.
Published On - 11:52 am, Wed, 1 December 21