
ರಾಮನಗರ, ನ.2: ಅದು ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಸ್ವಲ್ಪ ದೂರುದಲ್ಲಿರುವ ಬಿಡದಿ ಪುರಸಭೆ. ಇಡೀ ಪಟ್ಟಣವನ್ನು ಸ್ವಚ್ಛವಾಗಿಡಬೇಕಾದ ಪುರಸಭೆಯ ಮುಂಭಾಗದಲ್ಲೇ ರಾಶಿ ರಾಶಿ ಕಸ ಬಿದ್ದಿದ್ದರೂ ಕೇಳುವವರಿಲ್ಲ, ನೋಡುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿದ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ವಾಹನಗಳು ಸಣ್ಣಪುಟ್ಟ ರಿಪೇರಿಯಿಲ್ಲದೆ ನಿಂತಲ್ಲಿಯೇ ಧೂಳು ತಿನ್ನುತ್ತಾ ಹಾಳಾಗುತ್ತಿವೆ.
ಇಷ್ಟೆಲ್ಲಾ ಅವಾಂತರ ನಡೆಯುತ್ತಿರುವುದು ರಾಜ್ಯದ ಪೌರಾಡಳಿತ ಸಚಿವ ಹಾಗೂ ಶಾಸಕರಾದ ಹೆಚ್.ಸಿ. ಬಾಲಕೃಷ್ಣ ಅವರ ಸ್ವಕ್ಷೇತ್ರವಾದ ಮಾಗಡಿ, ರಾಮನಗರ ಗಡಿ ವ್ಯಾಪ್ತಿಯ ಬಿಡದಿ ಪುರಸಭೆಯಲ್ಲಿ ಅಧಿಕಾರಿಗಳ ಈ ತೀವ್ರ ನಿರ್ಲಕ್ಷ್ಯ ಹಾಗೂ ಅಕ್ರಮದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡದಿ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಮಿಷನ್ ಆಸೆಯ ಗಂಭೀರ ಆರೋಪಗಳು ಕೇಳಿಬಂದಿವೆ.
ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿದ ಜೆಸಿಬಿ, ಫಾಗಿಂಗ್ ಯಂತ್ರಗಳು, ಚರಂಡಿ ಸ್ವಚ್ಛಗೊಳಿಸುವ ಜೆಟ್ಟಿಂಗ್ ವಾಹನಗಳು ಹಾಗೂ ಕಸ ಸಾಗಣೆ ವಾಹನಗಳು ಕಳೆದ ಹಲವು ತಿಂಗಳುಗಳಿಂದ ಆವರಣದಲ್ಲಿ ನಿಂತು ತುಕ್ಕು ಹಿಡಿಯುತ್ತಿವೆ. ಸ್ವಂತ ಸರ್ಕಾರಿ ವಾಹನಗಳನ್ನು ಸಣ್ಣಪುಟ್ಟ ರಿಪೇರಿ ಮಾಡಿಸಿ ಬಳಸಿಕೊಳ್ಳುವ ಸೌಜನ್ಯ ತೋರದ ಅಧಿಕಾರಿಗಳು, ಖಾಸಗಿಯವರಿಂದ ದುಬಾರಿ ಬಾಡಿಗೆಗೆ ವಾಹನಗಳನ್ನು ಪಡೆದು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಡೀ ನಗರಕ್ಕೆ ಸ್ವಚ್ಛತೆಯ ಪಾಠ ಮಾಡಬೇಕಾದ ಪುರಸಭೆಯ ಆವರಣ ಮತ್ತು ಮುಂಭಾಗದಲ್ಲೇ ಕಸ ದುರ್ನಾತ ಬೀರುತ್ತಿದ್ದು, ವಿವಿಧ ಕೆಲಸಗಳಿಗೆ ಕಚೇರಿಗೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ ಅಕ್ರಮ: ಸಿಐಡಿ ಹಳೆಯ ಅಧಿಕಾರಿಗಳಿಗೆ ಕೊಕ್ ನೀಡಿ ಇಬ್ಬರು ಐಪಿಎಸ್ ಅಧಿಕಾರಿಗಳ ಎಸ್ಐಟಿ ರಚಿಸಿದ ಹೈಕೋರ್ಟ್
“ಸಾರ್ವಜನಿಕರ ಹಣದಲ್ಲಿ ತಂದ ವಾಹನಗಳನ್ನು ರಿಪೇರಿ ಮಾಡಿಸದೆ ನಿಲ್ಲಿಸಿ, ಖಾಸಗಿ ವಾಹನಗಳಿಗೆ ಬಾಡಿಗೆ ನೀಡಿ ಕಮಿಷನ್ ಹೊಡೆಯಲಾಗುತ್ತಿದೆ. ಪುರಸಭೆ ಮುಂಭಾಗದಲ್ಲೇ ಕಸದ ರಾಶಿಯಿದ್ದು, ಅಧಿಕಾರಿಗಳಿಗೆ ಸ್ವಚ್ಛತೆಯ ಅರಿವೇ ಇಲ್ಲ,” ಎಂದು ಸ್ಥಳೀಯ ನಿವಾಸಿ ಬಾಲಕೃಷ್ಣ ಹಾಗೂ ನಗರಸಭೆ ಸದಸ್ಯ ಉಮೇಶ್ ಕಿಡಿಕಾರಿದ್ದಾರೆ. ಬಿಡದಿ ಪುರಸಭೆಯ ಈ ಅವಾಂತರದ ಕುರಿತು ಪೌರಾಡಳಿತ ಸಚಿವ / ಸ್ಥಳೀಯ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರನ್ನು ಈ ಬಗ್ಗೆ ಕೇಳಿದಾಗ ಅವರು, “ಬಿಡದಿ ಪುರಸಭೆಯಲ್ಲಿ ವಾಹನಗಳು ನಿಂತಲ್ಲಿಯೇ ಹಾಳಾಗುತ್ತಿರುವುದು ಹಾಗೂ ಕಸದ ನಿರ್ವಹಣೆ ಲೋಪದ ಕುರಿತು ಇದೀಗ ತಷ್ಟೇ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸಿ, ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.” ಎಂದು ಹೇಳಿದ್ದಾರೆ. ಇನ್ನಾದರೂ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದನ್ನು ತಡೆದು, ತುಕ್ಕು ಹಿಡಿಯುತ್ತಿರುವ ಕೋಟ್ಯಾಂತರ ರೂಪಾಯಿ ಮೌಲ್ಯದ ವಾಹನಗಳಿಗೆ ಮುಕ್ತಿ ನೀಡಿ, ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Mon, 2 November 26