ರಾಜ್ಯ ಬಿಜೆಪಿಗೆ ಟಾಸ್ಕ್ ಕೊಟ್ಟ ಉಸ್ತುವಾರಿ ಹರೀಶ್ ದ್ವಿವೇದಿ: ಪರಿಷತ್ ಚುನಾವಣೆ ಗೆಲುವಿಗೂ ಮೆಚ್ಚುಗೆ
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಹರೀಶ್ ದ್ವಿವೇದಿ, ಅಸ್ಸಾಂ ಮಾದರಿ ಕಾರ್ಯತಂತ್ರದೊಂದಿಗೆ 2028ರ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ನಾಯಕರಿಗೆ ಕರೆ ನೀಡಿದ್ದು, ಇತ್ತೀಚಿನ ಎಂಎಲ್‌ಸಿ ಚುನಾವಣೆ ಗೆಲುವಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಕರ್ನಾಟಕ್ಕೆ ಭೇಟಿ ನೀಡಿರುವ ಹರೀಶ್ ದ್ವಿವೇದಿ ಅವರನ್ನು ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

ಬೆಂಗಳೂರು, ನವೆಂಬರ್ 02: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಹರೀಶ್ ದ್ವಿವೇದಿ ರಾಜ್ಯದ ನಾಯಕರಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಅಸ್ಸಾಂ ರಾಜ್ಯದ ಕಾರ್ಯತಂತ್ರ ಉಲ್ಲೇಖಿಸಿ ಕರ್ನಾಟಕದಲ್ಲಿಯೂ ಪಕ್ಷ ಅಧಿಕಾರಕ್ಕೆ ತರಲು ಅವರು ತಿಳಿಸಿದ್ದು, ಅಸ್ಸಾಂನಲ್ಲಿ ನಮ್ಮ ಪಕ್ಷಕ್ಕೆ ಸಂಘಟನೆ ಇಲ್ಲದಿದ್ದರೂ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಹೀಗಾಗಿ 2028ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿ. ಜೊತೆಗೆ ಇರುವ ದಿನಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.
ವಿಧಾನಪರಿಷತ್ ಕ್ಷೇತ್ರಗಳ ಗೆಲುವಿಗೆ ಮೆಚ್ಚುಗೆ
ಇನ್ನು ಇತ್ತೀಚೆಗೆ ನಡೆದ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ನಾಲ್ಕು ವಿಧಾನಪರಿಷತ್ ಕ್ಷೇತ್ರಗಳ ಗೆಲುವಿಗೆ ಹರೀಶ್ ದ್ವಿವೇದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ ಎಂಬುದು ಸ್ಪಷ್ಟ. ಈ ಉತ್ಸಾಹ, ಭರವಸೆಯಲ್ಲಿ ಮುಂದೆ ಪಕ್ಷ ಬಲವರ್ಧನೆ ಮಾಡಬೇಕು. ರಾಜ್ಯಾದ್ಯಂತ ಪ್ರವಾಸದ ಮೂಲಕ ಪಕ್ಷದ ಚಟುವಟಿಕೆ ಯಶಸ್ವಿಗೊಳಿಸಬೇಕು. ಕೇಂದ್ರೀಯ ನಾಯಕರ ಸಲಹೆಗಳಂತೆ ಮುಖಂಡರು ಕೆಲಸ ಮಾಡಬೇಕು. ಕೇಂದ್ರದ ಕಾರ್ಯಕ್ರಮಗಳ ಜೊತೆಗೆ ರಾಜ್ಯದ ಕಾರ್ಯಕ್ರಮಗಳನ್ನೂ ಮಾಡಿ ಎಂದವರು ಸಭೆಯಲ್ಲಿ ಪದಾಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್! ಏನದು? ಇಲ್ಲಿದೆ ನೋಡಿ
ಹರೀಶ್ ದ್ವಿವೇದಿಗೆ ರಾಜ್ಯ ಬಿಜೆಪಿಗರಿಂದ ಸ್ವಾಗತ
ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ರಾಜ್ಯ ಉಸ್ತುವಾರಿಗಳಾದ ಶ್ರೀ ಹರೀಶ್ ದ್ವಿವೇದಿ ಅವರನ್ನು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. https://t.co/6zX6MHQPEE
— BJP Karnataka (@BJP4Karnataka) November 2, 2026
ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಕರ್ನಾಟಕ್ಕೆ ಭೇಟಿ ನೀಡಿರುವ ಹರೀಶ್ ದ್ವಿವೇದಿ ಅವರನ್ನು ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜೊತೆಗೆ ಜಗನ್ನಾಥ ರಾವ್ ಜೋಶಿ ಪುತ್ಥಳಿಗೆ ದ್ವಿವೇದಿ ಮಾಲಾರ್ಪಣೆ ಮಾಡಿದ್ದು, ಈ ವೇಳೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ರಾಜ್ಯ ಜೆಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Mon, 2 November 26




