ಚೀನಾ, ಇಂಡೋನೇಷ್ಯಾ ದೇಶದಂತೆ ರಾಮನಗರ ಮಹಿಳೆಯರಿಗೆ ವಾಷಿಂಗ್ ಮಷೀನ್: ಏನಿದು ಯೋಜನೆ?
ರಾಮನಗರ ಪಟ್ಟಣದ ಮಹಿಳೆಯರು ಇನ್ನು ಮುಂದೆ ಬಟ್ಟೆ ತೊಳೆಯಲು ನದಿ, ಕೆರೆ ಪಕ್ಕ ಹೋಗುವ ಅವಶ್ಯಕತೆ ಇಲ್ಲ. ಚೈನಾ, ಇಂಡೋನೇಷ್ಯಾ ದೇಶಗಳ ಮಾದರಿಯಲ್ಲಿ ರಾಮನಗರದಲ್ಲಿ ಮಹಿಳೆಯರಿಗೆ ಬಟ್ಟೆ ತೊಳೆಯಲು ಸಾರ್ವಜನಿಕ ವಾಷಿಂಗ್ ಮಷೀನ್ ಅಳವಡಿಕೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಶಾಸಕ ಇಕ್ಬಾಲ್ ಹುಸೇನ್ ಅವರು ಘೋಷಣೆ ಮಾಡಿದ್ದು, ನಗರದಲ್ಲಿ ಜಾಗ ಗುರುತಿಸಿದ್ದಾರೆ.
ರಾಮನಗರ, ಮಾ.4: ಪಟ್ಟಣದ ಮಹಿಳೆಯರು ಇನ್ನು ಮುಂದೆ ಬಟ್ಟೆ ತೊಳೆಯಲು ನದಿ, ಕೆರೆ ಪಕ್ಕ ಹೋಗುವ ಅವಶ್ಯಕತೆ ಇಲ್ಲ. ಚೈನಾ, ಇಂಡೋನೇಷ್ಯಾ ದೇಶಗಳ ಮಾದರಿಯಲ್ಲಿ ರಾಮನಗರದಲ್ಲಿ (Ramanagara) ಮಹಿಳೆಯರಿಗೆ ಬಟ್ಟೆ ತೊಳೆಯಲು ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ (Public Washing Machine) ಅಳವಡಿಕೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಶಾಸಕ ಇಕ್ಬಾಲ್ ಹುಸೇನ್ ಅವರು ಘೋಷಣೆ ಮಾಡಿದ್ದಾರೆ.
ಹಳ್ಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಬಟ್ಟೆಗಳನ್ನು ತೊಳೆಯಲು ನದಿ ದಡ ಅಥವಾ ಕೆರೆಗಳ ಬಳಿ ಹೋಗುತ್ತಾರೆ. ಮಕ್ಕಳು ಕೂಡ ತೆರಳುತ್ತಾರೆ. ಹಲವೆಡೆ, ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿದ ಘಟನೆಗಳು ನಡೆದಿವೆ. ಹೀಗಾಗಿ ಮಹಿಳೆಯರ ಅನುಕೂಲಕ್ಕಾಗಿ ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ವಾಷಿಂಗ್ ಮಷೀನ್ ಅಳವಡಿಕೆ ಮಾಡಲು ಮುಂದಾಗಿದ್ದಾರೆ.
ಇಂತಹ ವ್ಯವಸ್ಥೆ ಚೈನಾ, ಇಂಡೋನೇಷ್ಯಾದಂತಹ ದೇಶಗಳಲ್ಲಿ ಜಾರಿಯಲ್ಲಿವೆ. ಇದೇ ವ್ಯವಸ್ಥೆಯನ್ನ ರಾಮನಗರದಲ್ಲಿ ಅಳವಡಿಕೆ ಮಾಡಲು ಚಿಂತಿಸಿರುವ ಶಾಸಕರು, ಹೈಜೂರು ಸರ್ಕಲ್ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಗುರುತಿಸಿದ್ದಾರೆ. ಪ್ರಾರಂಭಿಕವಾಗಿ 10 ವಾಷಿಂಗ್ ಮಷೀನ್ ಅಳವಡಿಕೆಗೆ ಮುಂದಾಗಿದ್ದಾರೆ. ಸಂಸದ ಡಿಕೆ ಸುರೇಶ್ ಕೂಡ ಯೋಜನೆ ಅನುಷ್ಠಾನದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ರಾಮನಗರ: ಗ್ರೇಸ್ ಕಮ್ಯೂನಿಟಿ ಚರ್ಚ್ಗೆ ಬೆಂಕಿ, ಸುಟ್ಟು ಕರಕಲಾದ ಪ್ರಾರ್ಥನಾ ಪರಿಕರ, ಶಿಲುಬೆ, ಏಸುವಿನ ಮೂರ್ತಿ
ಕೆಲವೇ ದಿನಗಳಲ್ಲಿ ವಾಷಿಂಗ್ ಮಷೀನ್ ಅಳವಡಿಕೆ ಮಾಡಲಾಗುತ್ತಿದೆ. ಶಾಸಕರ ಅನುದಾನ ಸಿಗದಿದ್ದರೂ ತಮ್ಮ ಜೇಬಿನಿಂದ ಅನುಷ್ಠಾನ ಮಾಡಿತ್ತೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಒಂದು ಮಷೀನ್ಗೆ 35 ಲಕ್ಷ ರೂಪಾಯಿ ಇದ್ದು, ಒಟ್ಟು 10 ಮಷೀನ್ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಈ ಯೋಜನೆಗೆ ಅಂದಾಜಿ 2 ಕೋಟಿ ರೂಪಾಯಿ ತಗಲುವ ಸಾಧ್ಯತೆ ಇದೆ.
ಮಕ್ಕಳಿಗೆ ಕಾರ್ಟೂನ್ ನೋಡಲು ಡಿಸ್ಪ್ಲೇ ವ್ಯವಸ್ಥೆ
ಸಾಮಾನ್ಯವಾಗಿ ತಾಯಂದಿರುವ ಬಟ್ಟೆ ತೊಳೆಯಲು ಹೋದಾಗ ಸಣ್ಣ ಮಕ್ಕಳು ಕೂಡ ಹೊರಡುತ್ತಾರೆ. ಹೀಗೆ ವಾಷಿಂಗ್ ಮಷೀನ್ ಕೇಂದ್ರಗಳಿಗೆ ತಾಯಂದಿರ ಜೊತೆ ಬರುವ ಮಕ್ಕಳಿಗೆ ಮನರಂಜನೆ ನೀಡಲು ಕಾರ್ಟೂನ್ ನೋಡಲು ಡಿಸ್ಪ್ಲೇ ಅಳವಡಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ವಾಷಿಂಗ್ ಮಷೀನ್ ಪಕ್ಕದಲ್ಲೇ 10/10 ಡಿಸ್ಪ್ಲೇ ಹಾಕಲಾಗುತ್ತದೆ.
ವಾಷಿಂಗ್ ಮಷೀನ್ ಕೇಂದ್ರ ಉದ್ಘಾಟನೆ
ಪ್ರಾರಂಭಿಕವಾಗಿ 10 ಸಾರ್ವಜನಿಕ ವಾಷಿಂಗ್ ಮಷೀನ್ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಆರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಈ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಲೋಕಸಭೆ ಚುನಾವಣೆ ಬಳಿಕ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಅಲ್ಲಿ ವಾಷಿಂಗ್ ಮಷೀನ್ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲೂ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಚುನಾವಣೆ ಸಮೀಪದಲ್ಲಿರುವುದರಿಂದ ಈ ಯೋಜನೆಗೆ ಯಾವುದೇ ಹೆಸರನ್ನು ಇಟ್ಟಿಲ್ಲ. ಚುನಾವಣೆ ನಂತರ ಯೋಜನೆಗೆ ಹೆಸರು ಇಡಲು ನಿರ್ಧರಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ