ಬರಗಾಲದಲ್ಲಿ ಚಿಗುರಿದ್ದ ರಾಗಿ ತೆನೆಗೆ ಕಾಡುಹಂದಿ ಕಾಟ! ಪರಿಹಾರಕ್ಕೆ ಅರಣ್ಯ ಕಚೇರಿ ಮೆಟ್ಟಿಲೇರಿದ ರೈತ
ಅದು ರಾಗಿ ಬೆಳೆದಿರುವ ಹೊಲ, ತೆನೆ ಮೂಡಿ ಇನ್ನೇನು ಫಸಲು ಬರಬೇಕು ಎನ್ನುವಷ್ಟರಲ್ಲಿ ರೈತನಿಗೆ ಕಾಡುಹಂದಿಗಳು ಶಾಕ್ ಕೊಟ್ಟಿವೆ. ಹೌದು, ಹೊಲಕ್ಕೆ ಎಂಟ್ರಿ ಕೊಟ್ಟಿದ್ದು, ರೈತ ಬೆಳೆದ ಬೆಳೆಯನ್ನು ಸಂಪೂರ್ಣ ನಾಶಪಡಿಸಿದೆ. ಇದರಿಂದ ನೊಂದ ರೈತ, ಕಾಡು ಪ್ರಾಣಿಗಳನ್ನು ಕಾಯದ ಅರಣ್ಯ ಇಲಾಖೆಯೇ ಪರಿಹಾರ ನೀಡಲಿ ಎಂದು ರೈತ ಅರಣ್ಯಾಧಿಕಾರಿ ಕಚೇರಿ ಮೆಟ್ಟಿಲು ಹತ್ತಿದ್ದಾನೆ.
ರಾಮನಗರ, ನ.11: ತಾಲೂಕಿನ ಕೈಲಾಂಚ ಹೋಬಳಿಯ ತುಂಬೇನಹಳ್ಳಿ(Thumbenahalli) ಯ ರೈತರಿಗೆ ಕಾಡು ಹಂದಿ(Wild Boar) ಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲಾರದಂತಹ ಪರಿಸ್ಥಿತಿ ಎದರಾಗಿದೆ. ಹವದು, ತುಂಬೇನಹಳ್ಳಿಯ ರೈತ ರಾಮಯ್ಯ ಎಂಬುವವರು ಕಷ್ಟಪಟ್ಟು ಬೆಳೆದ ರಾಗಿ(Millet) ಯನ್ನು ಕಾಡುಹಂದಿಗಳು ಹಾಳು ಮಾಡಿದ್ದು, ಇದರ ಹಾವಳಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನಲೆ ಅರಣ್ಯಾಧಿಕಾರಿಗಳು ಇದಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇರುವ ಒಂದು ಎಕರೆ ಸಾಗುವಳಿ ಭೂಮಿಯಲ್ಲಿ ರಾಗಿ ಬೆಳೆದಿದ್ದ ರಾಮಯ್ಯ, ಬರಗಾಲದಲ್ಲೂ ರಾಗಿ ತೆನೆ ಮೂಡಿದಕ್ಕೆ ಬಹಳ ಖಷಿಯಾಗಿದ್ದ. ಆದರೆ, ಅವರ ಹೊಲಕ್ಕೆ ನುಗ್ಗಿದ್ದ ಕಾಡು ಹಂದಿಗಳ ಗುಂಪು ಒಂದು ತೆನೆಯೂ ಬಿಡದೆ ಎಲ್ಲವನ್ನೂ ತಿಂದು ಹಾಕಿದೆ. ನನ್ನ ಮಗ ಅದೆಲ್ಲಿ ಸಾಲ ಮಾಡಿ ತಂದು ಹೊಲ ಬಿತ್ತಿದ್ದನೂ, ಈಗ ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ ಎಂದು ರಾಮಯ್ಯ ಅವರ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ. ತಮ್ಮ ಹೊಲಗದ್ದೆಗಳಿಗೆ ಪದೇ ಪದೇ ಕಾಡುಹಂದಿಗಳು ಬರುತ್ತಿದ್ದು, ಕಾಡು ಮೃಗಗಳ ಕಾಟ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರಂತೆ. ಆದರೆ, ಅರಣ್ಯಾಧಿಕಾರಿಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಹುಲಿಯುಗುರು ವಿಚಾರಕ್ಕೆ ಇಡೀ ರಾಜ್ಯಾದ್ಯಂತ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು, ರೈತರ ಗೋಳು ಯಾಕೆ ಕೇಳುತ್ತಿಲ್ಲ ಎಂದು ರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ವಿಜಯನಗರ: ಅಕಾಲಿಕ ಮಳೆಗೆ ತತ್ತರಿಸಿದ ರೈತ; ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶ
40 ಸಾವಿರ ಸಾಲ ಮಾಡಿ ರಾಗಿ ಬೆಳೆದು ಕಾಡು ಹಂದಿಗಳ ಕಾಟದಿಂದ ಬೆಳೆ ಕಳೆದುಕೊಂಡಿರುವ ರಾಮಯ್ಯನಿಗೆ ಶಾಸಕ ಇಕ್ಬಾಲ್ ಹುಸೇನ್ ಭೇಟಿಯಾಗಲು ಹೇಳಿದ್ದಾರೆ. ಆದರೆ, ಇದು ಕೇವಲ ರಾಮಯ್ಯರವರ ಸಮಸ್ಯೆ ಮಾತ್ರವಲ್ಲದೇ ತುಂಬೇನಹಳ್ಳಿ ಸುತ್ತಲೂ ಇರುವ ಅನೇಕ ಹಳ್ಳಿಗಳಲ್ಲಿ ಕಾಡಂದಿ, ಕೋತಿ, ಆನೆಗಳ ಕಾಟಕ್ಕೆ ರೈತರು ರೋಸಿಹೋಗಿದ್ದು, ಅರಣ್ಯಾಧಿಕಾರಿಗಳು ಏನ್ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ರಾಮಯ್ಯ ಅವರ ಮನವಿ ಸ್ವೀಕರಿಸಿ ಅರಣ್ಯಾಧಿಕಾರಿಗಳು ಏನಾದರೂ ಪರಿಹಾರ ನೀಡುತ್ತಾರಾ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ