AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shantaram Siddi: ಶಾಂತಾರಾಮರಿಗೆ ʼಸಿದ್ಧಿʼಸಿದ ವಿಧಾನ ಪರಿಷತ್ ಸಭಾಪತಿ ಪೀಠದ ಗೌರವ!

ಕರಾವಳಿ ಕರ್ನಾಟಕದ ಅತ್ಯಂತ ಹಿಂದುಳಿದ ಸಿದ್ದಿ ಜನಾಂಗದ ವ್ಯಕ್ತಿಯೊಬ್ಬರು ರಾಜ್ಯ ವಿಧಾನಪರಿಷತ್‌ನ ಅತ್ಯುನ್ನತ ಸ್ಥಾನವಾದ ʼಸಭಾಪತಿ ಪೀಠʼವನ್ನು ಕೆಲ ಕಾಲ ಅಲಂಕರಿಸಿದ್ದಾರೆ. ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ತುಳಿತಕ್ಕೊಳಗಾದ, ಈಗಲೂ ಸಂಕಷ್ಟ ಪರಿಸ್ಥಿತಿಯಲ್ಲೇ ಇರುವ ಸಿದ್ದಿ ಸಮುದಾಯದ ವ್ಯಕ್ತಿಯೊಬ್ಬರು ಪೀಠದಲ್ಲಿ ಆಸೀನರಾಗಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು.

Shantaram Siddi: ಶಾಂತಾರಾಮರಿಗೆ ʼಸಿದ್ಧಿʼಸಿದ ವಿಧಾನ ಪರಿಷತ್ ಸಭಾಪತಿ ಪೀಠದ ಗೌರವ!
ಶಾಂತರಾಮ ಸಿದ್ದಿ
ರಮೇಶ್ ಬಿ. ಜವಳಗೇರಾ
|

Updated on:Mar 25, 2026 | 9:24 PM

Share

ಬೆಂಗಳೂರು, (ಮಾರ್ಚ್ 25): ಕರ್ನಾಟಕ ವಿಧಾನ ಪರಿಷತ್‌ (Karnataka Legislative Council) ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ, ಬಿಜೆಪಿಯ ಶಾಂತರಾಮ ಸಿದ್ದಿಯವರಿಗೆ (Shantaram Siddi) ಕೆಲಕಾಲ ಕಲಾಪ ನಡೆಸುವ ಅವಕಾಶ ದೊರಕಿದೆ. ಹಾಗೆಂದು ಅವರು ಶಾಶ್ವತವಾಗಿ ಆ ಪೀಠ ಅಲಂಕರಿಸಿಲ್ಲ. ವಿಧಾನ ಪರಿಷತ್‌ ಕಲಾಪದ ವೇಳೆ ಪರಿಷತ್‌ ಸಭಾಪತಿ ವಿರಮಿಸುವ ವೇಳೆ, ಸದನದಲ್ಲಿರುವ ಹಿರಿಯ ಸದಸ್ಯರಿಗೆ ಕೆಲವು ಬಾರಿ ಕಲಾಪ ನಡೆಸಲು ಅವಕಾಶ ನೀಡಲಾಗುತ್ತದೆ. ಅದರಂತೆ ಇಂದು (ಮಾರ್ಚ್ 25) ವಿಧಾನ ಪರಿಷತ್‌ ಕಲಾಪದ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ ಶಾಂತರಾಮ ಸಿದ್ದಿಯವರಿಗೆ ಅವಕಾಶ ಸಿಕ್ಕಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದರೊಂದಿಗೆ ಸಿದ್ದಿ ಸಮುದಾಯದ ರಾಜಕಾರಣಿಯೊಬ್ಬರು ಪೀಠದಲ್ಲಿ ಆಸೀನರಾಗಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು.

ಶಾಂತಾರಾಮ ಬುಡ್ನಾ ಸಿದ್ದಿ ಅವರು 2020ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತರಾಗಿದ್ದರು. ಈ ಮೂಲಕ ರಾಜ್ಯದ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಸಿದ್ದಿ ಸಮುದಾಯದಿಂದ ರಾಜಕೀಯಕ್ಕೆ ಪ್ರವೇಶಿಸಿದ ಮೊದಲಿಗರು ಎನಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ.

ಇದನ್ನೂ ಓದಿ: ಶಾಂತರಾಮ ಸಿದ್ದಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತ ಫೋಟೊ ವೈರಲ್; ಬೇಸರ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ

ಇನ್ನು ಈ ಬಗ್ಗೆ ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ವಿಧಾನಪರಿಷತ್ ಸ್ಥಾನಕ್ಕೆ ಸಿದ್ಧಿ ಜನಾಂಗದ ಶ್ರೀ ಶಾಂತಾರಾಮ್ ಸಿದ್ದಿಯವರನ್ನು ಆಯ್ಕೆ ಮಾಡಿ, ಪ್ರಸ್ತುತ ಸಭಾಪತಿ ಸ್ಥಾನದಲ್ಲಿ ಅವರು ವಿಧಾನಪರಿಷತ್ ಕಲಾಪವನ್ನು ನಡೆಸುವುದನ್ನು ನೋಡುವಾಗ ನಮ್ಮ ಪಕ್ಷದ ಮೇಲಿರುವ ನಮ್ಮೆಲ್ಲರ ಅಭಿಮಾನ ಇನ್ನಷ್ಟು ಹೆಚ್ಚಾಗುತ್ತಿದೆ ಎಂದಿದ್ದಾರೆ.

ಸಿದ್ಧಿ ಜನಾಂಗವು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಶಾಂತರಾಮ ಸಿದ್ಧಿ ಅವರು ತಮ್ಮ ಜನಾಂಗದಲ್ಲಿ ಪದವಿ (ಬಿಎ) ಪಡೆದ ಮೊದಲ ಕೆಲವು ವ್ಯಕ್ತಿಗಳಲ್ಲಿ ಇವರೂ ಒಬ್ಬರು. ವಿದ್ಯಾರ್ಥಿದೆಸೆಯಿಂದಲೇ ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಹೊಂದಿದ್ದ ಇವರು, ನಂತರ ಸಂಘಟನಾತ್ಮಕವಾಗಿ ಬೆಳೆದರು.1989 ರಿಂದಲೇ ಆರ್‌ಎಸ್‌ಎಸ್‌ನ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವನವಾಸಿ ಕಲ್ಯಾಣ ಆಶ್ರಮದ ಮೂಲಕ ಅರಣ್ಯವಾಸಿಗಳ, ಬುಡಕಟ್ಟು ಜನರ ಹಕ್ಕುಗಳಿಗಾಗಿ ಮತ್ತು ಅವರ ಶಿಕ್ಷಣಕ್ಕಾಗಿ ದಶಕಗಳ ಕಾಲ ಶ್ರಮಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Wed, 25 March 26

Follow Us