ಶಿವಮೊಗ್ಗ: ಅಳಿಯನನ್ನೇ ಕೊಂದ ಹೆಣ್ಣು ಕೊಟ್ಟ ಮಾವ: ಅಸಲಿಗೆ ಆಗಿದ್ದೇನು?
ಶಿವಮೊಗ್ಗದಲ್ಲಿ ನಡೆದ ಅರುಣ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಮತ್ತು ಅತ್ತೆ ಪ್ರಚೋದನೆಯಿಂದ ಮಾವ ಹಾಗೂ ಸಂಬಂಧಿ ಅರುಣ್ನನ್ನು ಕೊಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳ ಬಂಧನವಾಗಿದ್ದು, ಪತ್ನಿ ಮತ್ತು ಅತ್ತೆ ತಲೆಮರೆಸಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾದ ಪತಿಯ ಕೊಲೆಗೆ ಪತ್ನಿಯೇ ಸ್ಕೆಚ್ ಹಾಕಿದ್ದಾಳೆ.

ಶಿವಮೊಗ್ಗ, ಜನವರಿ 11: ಇತ್ತೀಚೆಗೆ ಶಿವಮೊಗ್ಗದ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿಯ ಶ್ರೀನಿಧಿ ವೈನ್ ಶಾಪ್ ಮುಂದೆ ಓರ್ವ ಯುವಕನ ಕೊಲೆ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೆಣ್ಣು ಕೊಟ್ಟ ಮಾವನೇ ತನ್ನ ಅಳಿಯನನ್ನು ಕೊಲೆ (murde case) ಮಾಡಿದ್ದಾರೆ. ಆ ಮೂಲಕ ಪ್ರೀತಿಸಿ ಮಗಳಿಗೆ ವಂಚನೆ ಮಾಡಿದ್ದಾನೆಂದು ಅಳಿಯ ಮೇಲೆ ಮಾವ ಸೇಡು ತೀರಿಸಿಕೊಂಡಿದ್ದಾರೆ.
ನಡೆದದ್ದೇನು?
ಶಿವಮೊಗ್ಗದ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿಯ ಶ್ರೀನಿಧಿ ವೈನ್ ಶಾಪ್ ಮುಂದೆ ಡಿ. 29 ರಂದು ಯುವಕನ ಕೊಲೆ ನಡೆದಿತ್ತು. ಅರುಣ ಎನ್ನುವ ಯುವಕ ವೈನ್ ಶಾಪ್ ಮುಂದೆ ನಿಂತಿದ್ದ. ದಿಢೀರ್ ಎಂಟ್ರಿಕೊಟ್ಟಿದ್ದ ಇಬ್ಬರು ವ್ಯಕ್ತಿಗಳು ರಾಡ್ನಿಂದ ಅರುಣ್ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಕೊಲೆ ನಡೆದು 10 ರಿಂದ 12 ದಿನಗಳಾದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಕೊಲೆ ಮಾಡಿದ ಹಂತಕರು ಮತ್ತು ಅವರ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದರು. ಕೊನೆಗೆ ಇಬ್ಬರು ಆರೋಪಿಗಳು ಕೋರ್ಟ್ಗೆ ಶರಣಾಗಿದ್ದಾರೆ. ಇಬ್ಬರನ್ನು ವಿನೋಬ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು!
ಅಷ್ಟಕ್ಕೂ ಕೊಲೆಯಾದ ಅರುಣ್ನನ್ನು ಕೊಲೆ ಮಾಡಿದ್ದು ಯಾರು, ಏಕೆ ಅಂತಾ ನೋಡುವುದಾರೆ, ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ, ಅರುಣ್ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಸೋದರ ಮಾವ ಲೋಕೇಶ್. ಈ ಇಬ್ಬರು ಸೇರಿ ಅಂದು ಕೊಲೆ ಮಾಡಿದ್ದರು. ಕೊಲೆಗೆ ಪತ್ನಿ ಯಶಸ್ವಿನಿ ಮತ್ತು ಅತ್ತೆ ಕಮಲಾಕ್ಷಿ ಸಾಥ್ ಕೊಟ್ಟಿದ್ದರು. ಅರುಣ್ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಲ್ಲಿ ಇಬ್ಬರ ಬಂಧನವಾಗಿದೆ. ಅತ್ತೆ ಮತ್ತು ಪತ್ನಿ ಪೊಲೀಸ್ರ ಕೈಗೆ ಸಿಕ್ಕಿಲ್ಲ. ವಿನೋಬ ನಗರ ಪೊಲೀಸರು ಅರುಣ್ ಮರ್ಡರ್ ಕೇಸ್ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಕೊಲೆಯಲ್ಲಿ ಶಾಮೀಲಾಗಿರುವ ಪತ್ನಿ ಮತ್ತು ಅತ್ತೆಯ ಶೋಧ ಕಾರ್ಯ ಮುಂದುವರೆಸಿದ್ದಾರೆ. ಕೊಲೆ ಮಾಡಿದ ಮಾವ ಮತ್ತು ಸಂಬಂಧಿ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆಯ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.
ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಜೋಡಿ
ಅರುಣ್ ಕಾಶೀಪುರದಲ್ಲಿ ಯಶಸ್ವಿನಿ ಎಂಬ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಗಾರೆ ಕೆಲಸ ಮಾಡಿಕೊಂಡಿದ್ದ ಅರುಣ್ ಡೊಳ್ಳು ಹೊಡೆಯುತ್ತಿದ್ದ. ಆರ್ಎಕ್ಸ್ 100 ಬೈಕ್ ಇಟ್ಟುಕೊಂಡಿದ್ದ. ಡೊಳ್ಳು ಮತ್ತು ಆರ್ಎಕ್ಸ್ 100 ಬೈಕ್ ಓಡಿಸುವ ಸ್ಟೈಲಿಗೆ ಯುವತಿ ಮನಸೋತಿದ್ದಳು. ಮೂರು ವರ್ಷಗಳ ಹಿಂದೆ ಅರುಣ ಯಶಸ್ವಿಯನ್ನ ಮದುವೆಯಾಗಿದ್ದ.
ದಿನ ಕಳೆದಂತೆ ಇಬ್ಬರ ನಡುವೆ ಕೆಲಸದ ವಿಚಾರದಲ್ಲಿ ಗಲಾಟೆಯಾಗುತ್ತಿತ್ತು. ಹೀಗಾಗಿ ಯಶಸ್ವಿನಿ ತಾಯಿ ಮನೆಗೆ ಹೋಗುತ್ತಿದ್ದಳು. ಪತ್ನಿಯನ್ನು ತವರು ಮನೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದ. ಈ ನಡುವೆ ಪತಿ, ಪತ್ನಿಯ ನಡುವೆ ಗಲಾಟೆ ಹೆಚ್ಚಾದಂತೆ ಅರುಣ್ ಮದ್ಯಪಾನ ಮಾಡಲು ಶುರು ಮಾಡಿದ್ದ.
ಹೆಂಡತಿಯನ್ನು ಗಂಡನ ಮನೆಗೆ ಕಳುಹಿಸಿ ಎಂದು ಗಲಾಟೆ ಮಾಡುತ್ತಿದ್ದ ಅರುಣ್ಗೆ ಹೆಂಡತಿ ಮನೆಯವರು ರಾಡಿನಲ್ಲಿ ಹೊಡೆದು ಕಳುಹಿಸಿದ ಉದಾಹರಣೆಗಳಿವೆ. ನಮ್ಮ ಮನೆಯ ಹುಡುಗಿಯನ್ನ ಓಡಿಸಿಕೊಂಡು ಮದುವೆ ಆಗಿರುವುದಕ್ಕೆ ಪತ್ನಿಯ ಕುಟುಂಬಸ್ಥರಿಗೆ ಅಸಮಾಧಾನವಿತ್ತು. ಈ ಹಿನ್ನಲೆಯಲ್ಲಿ ಪತ್ನಿ ಸೇರಿದಂತೆ ಅತ್ತೆ ಮಾವ, ಸಂಬಂಧಿ ನಾಲ್ವರು ಸೇರಿ ಅರುಣ್ ಕಥೆ ಮುಗಿಸಲು ಸ್ಕೇಚ್ ಹಾಕಿದ್ದರು. ಅದರಂತೆ ಕೊಲೆ ಕೂಡ ಮಾಡಿದ್ದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳಿಗೆ ಥಳಿಸಿದವರ ಮೇಲೂ ಕೇಸ್
ಪತಿ ಮರ್ಡರ್ ಕೇಸ್ನಲ್ಲಿ ಮಾವ ಮತ್ತು ಸಂಬಂಧಿ ಇಬ್ಬರ ಬಂಧನವಾಗಿದೆ. ಪತ್ನಿ ಮತ್ತು ಅತ್ತೆ ಇಬ್ಬರು ಶಾಮೀಲು ಆಗಿರುವುದು ತನಿಖೆಯಿಂದ ಬಯಲಾಗಿದೆ. ಪ್ರೀತಿಸಿ ಮದುವೆಯಾದ ಪತಿಯ ಮರ್ಡರ್ಗೆ ಪತ್ನಿಯೇ ಸ್ಕೇಚ್ ಹಾಕಿರುವುದು ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:58 pm, Sun, 11 January 26