ಶಿವಮೊಗ್ಗ: ಅಕ್ರಮ ಜಿಂಕೆ ಮಾಂಸ ಮಾರಾಟ ಜಾಲ ಭೇದಿಸಿದ ಅರಣ್ಯ ಪೊಲೀಸ್ ಪಡೆ; ಇಬ್ಬರ ಬಂಧನ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆವಟೂರು ಆನೆಕೆರೆ ಬಳಿ ಅಕ್ರಮ ಜಿಂಕೆ ಮಾಂಸ ಮಾರಾಟ ಜಾಲವನ್ನು ಅರಣ್ಯ ಪೊಲೀಸ್ ಪಡೆ ಯಶಸ್ವಿಯಾಗಿ ಭೇದಿಸಿದೆ. ಕಾರ್ಯಾಚರಣೆಯಲ್ಲಿ 34.945 ಕೆ.ಜಿ ಜಿಂಕೆ ದೇಹ ಹಾಗೂ ಮಾಂಸ ವಶಪಡಿಸಿಕೊಳ್ಳಲಾಗಿದೆ. ಸದ್ಯ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಶಿವಮೊಗ್ಗ: ಅಕ್ರಮ ಜಿಂಕೆ ಮಾಂಸ ಮಾರಾಟ ಜಾಲ ಭೇದಿಸಿದ ಅರಣ್ಯ ಪೊಲೀಸ್ ಪಡೆ; ಇಬ್ಬರ ಬಂಧನ
ಜಿಂಕೆ ಮಾಂಸ ಮಾರಾಟ ಜಾಲ ಪತ್ತೆ
Image Credit source: tv9 kannada
Edited By:

Updated on: Sep 12, 2026 | 5:35 PM

ಶಿವಮೊಗ್ಗ, ಸೆಪ್ಟೆಂಬರ್​​ 12: ಜಿಲ್ಲೆಯ ಹೊಸನಗರ ತಾಲೂಕಿನ ನೆವಟೂರು ಆನೆಕೆರೆ ಬಳಿ ನಡೆಯುತ್ತಿದ್ದ ಅಕ್ರಮ ಜಿಂಕೆ ಮಾಂಸ ಮಾರಾಟ ಜಾಲವನ್ನು ಅರಣ್ಯ ಇಲಾಖೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ಬಳಿ ಅರಣ್ಯ ಸಂಚಾರಿ ದಳ ನಡೆಸಿದ ಈ ಕಾರ್ಯಾಚರಣೆಯಲ್ಲಿ ಮಾಂಸ ಮಾರಾಟ ಕೃತ್ಯದಲ್ಲಿ ತೊಡಗಿದ್ದ ನೆವಟೂರು ಆನೆಕೆರೆ ನಿವಾಸಿಗಳಾದ ನಿಂಗಪ್ಪ ಹಾಗೂ ರಾಮಪ್ಪ ಎಂಬುವವರನ್ನು ಬಂಧಿಸಲಾಗಿದೆ.

34.945 ಕೆ.ಜಿ ಜಿಂಕೆ ದೇಹ ಮತ್ತು ಮಾಂಸ ವಶಕ್ಕೆ

ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ, ಪಿಎಸ್‌ಐ ವಿನಾಯಕ ಕೆ. ಅವರ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಹಠಾತ್ ದಾಳಿ ನಡೆಸಿದೆ. ಈ ವೇಳೆ ಆರೋಪಿಗಳ ಬಳಿಯಿದ್ದ ಒಟ್ಟು 34.945 ಕೆ.ಜಿ ತೂಕದ ಜಿಂಕೆ ದೇಹ ಹಾಗೂ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಕಡೆ ಕಡವೆ, ಜಿಂಕೆ ಶಿಕಾರಿ

ಪಿಎಸ್‌ಐ ವಿನಾಯಕ ಕೆ. ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಆಂಜನೇಯ ಪಾಟೀಲ್, ಗಣೇಶ, ಚಂದ್ರಕಾಂತ ಹಾಗೂ ಮಹೇಶ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಲ್ಲದೆ, ಈ ಅಕ್ರಮ ಮಾಂಸ ಮಾರಾಟ ಜಾಲವನ್ನು ಪತ್ತೆಹಚ್ಚಿ ತಡೆಯುವಲ್ಲಿ ಮಹೇಶ, ದೊಡ್ಡಮನಿ ಹಾಗೂ ಪ್ರಮೋದಿನಿ ಅವರು ಅಗತ್ಯ ಸಹಕಾರ ನೀಡಿದ್ದಾರೆ.

ಗೋ ಸಾಗಾಟ ತಡೆಯಲು ಪೊಲೀಸರು ಬದ್ಧತೆಯಿಂದ ಕೆಲಸ ಮಾಡಲಿ: ಶಾಸಕ ಆರಗ ಜ್ಞಾನೇಂದ್ರ ಒತ್ತಾಯ

‘ತೀರ್ಥಹಳ್ಳಿ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವ ಕೃತ್ಯಗಳು ನಡೆಯುತ್ತಿದ್ದು, ಇದನ್ನು ತಡೆಯಲು ಪೊಲೀಸ್ ಇಲಾಖೆ ಕಣ್ಣಿಟ್ಟು ಬದ್ಧತೆಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅನೇಕ ಸಂದರ್ಭಗಳಲ್ಲಿ ಗೋ ಸಾಗಾಟ ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗುತ್ತಿದ್ದಾರೆ ಮತ್ತು ಗೋ ಸಾಗಾಟವನ್ನು ಹಿಡಿದುಕೊಟ್ಟ ಸಾರ್ವಜನಿಕರ ಮೇಲೆಯೇ ಕೇಸ್ ಹಾಕಿ ಜೈಲಿಗೆ ಕಳುಹಿಸಿದ ನಿದರ್ಶನಗಳಿವೆ’ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಬೇಟೆಗಾರರಿಗೆ ಸಿಎಂ ಡೆಡ್‌ಲೈನ್: ಚಾಮರಾಜನಗರವನ್ನು ‘ಕಾಡುಗಳ್ಳ ಮುಕ್ತ’ ಮಾಡಲು ಸರ್ಕಾರದ ಬಿಗ್ ಪ್ಲಾನ್

‘ಮೊನ್ನೆ ಸಿಕ್ಕಿಬಿದ್ದ ಆರೋಪಿ ವರ್ಷಗಳಿಂದ ಇದೇ ಕೃತ್ಯದಲ್ಲಿ ತೊಡಗಿದ್ದರೂ ಕೇವಲ ಸಾಧಾರಣ ಕೇಸ್ ಹಾಕುವುದರಿಂದ ಅಪರಾಧಿಗಳು ತಕ್ಷಣ ಬೇಲ್ ಪಡೆದು ಸುಲಭವಾಗಿ ಹೊರಬರುತ್ತಿದ್ದಾರೆ. ಹೀಗಾಗಿ, ನಾನು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಬಲವಾದ ಗೋವಧೆ ನಿಷೇಧ ಕಾಯ್ದೆಯಡಿಯೇ ಪೊಲೀಸರು ಕಠಿಣ ಪ್ರಕರಣ ದಾಖಲಿಸಬೇಕು, ಇದರಿಂದ ಅಪರಾಧಿಗಳು ಹೊರಬರಲು ಸಾಧ್ಯವಿಲ್ಲ. ಈ ಅಕ್ರಮ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿ ಅವರೊಂದಿಗೆ ಚರ್ಚಿಸಿರುವುದಾಗಿ’ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us